ಪ್ರಿಯತಮೆಯ ಕೊಂದು, ಪ್ರೇಮಿ ಆತ್ಮಹತ್ಯೆ!| ಅನೈತಿಕ ಸಂಬಂಧ ಮುಂದುವರಿಸಲು ಒಪ್ಪದ್ದಕ್ಕೆ ಕೃತ್ಯ| ಪ್ರಿಯತಮೆಯ ಪತಿ, ಪುತ್ರಿಯ ಮೇಲೂ ಮಾರಣಾಂತಿಕ ಹಲ್ಲೆ| ಚಾಕು ಚುಚ್ಚಿಕೊಂಡು ಬಳಿಕ ನೇಣಿಗೆ ಕೊರಳೊಡ್ಡಿದ ಖಾಸಗಿ ಕಂಪನಿ ಉದ್ಯೋಗಿ| ಹೆಗ್ಗನಹಳ್ಳಿಯಲ್ಲಿ ಭೀಕರ ಘಟನೆ
ಬೆಂಗಳೂರು[ಫೆ.12]: ಅನೈತಿಕ ಸಂಬಂಧಕ್ಕೆ ವಿರೋಧಿಸಿದ್ದರಿಂದ ರೊಚ್ಚಿಗೆದ್ದ ವ್ಯಕ್ತಿಯೊಬ್ಬ, ತನ್ನ ಪ್ರಿಯತಮೆಯನ್ನು ಹತ್ಯೆಗೈದು ಬಳಿಕ ಆಕೆಯ ಪತಿ ಮತ್ತು ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಭೀಕರ ಘಟನೆ ರಾಜಗೋಪಾಲ ನಗರದ ಸಮೀಪ ನಡೆದಿದೆ.
ಹೆಗ್ಗನಹಳ್ಳಿ ನಿವಾಸಿ ಲಕ್ಷ್ಮಿ (35) ಕೊಲೆಯಾದ ದುರ್ದೈವಿ. ಹಲ್ಲೆಗೆ ಒಳಗಾಗಿರುವ ಮೃತಳ ಪತಿ ಶಿವರಾಜ್ ಹಾಗೂ ಪುತ್ರಿ ಚೈತ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಾಯಾಳಗಳ ಪರಿಸ್ಥಿತಿ ಗಂಭೀರವಾಗಿದೆ. ಈ ಕೃತ್ಯ ಎಸಗಿದ ನಂತರ ಲಕ್ಷ್ಮಿ ಮನೆಯ ಬಾಡಿಗೆದಾರ ಹಾಗೂ ಪ್ರಿಯಕರ ರಂಗಧಾಮಯ್ಯ (35) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇವರೇ ನೋಡಿ ಕನ್ನಡದ ಟಿಕ್ ಟಾಕ್ ಸ್ಟಾರ್ ಗಳು...ಸಖತ್ ಮಜಾ ಕೊಡ್ತಾರೆ!
ಸೋಮವಾರ ರಾತ್ರಿ ಮನೆ ಮಾಲಿಕರ ಭೇಟಿಗೆ ತೆರಳಿದ ರಂಗಧಾಮಯ್ಯ, ಮೊದಲು ಲಕ್ಷ್ಮಿ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾನೆ. ಬಳಿಕ ಬಲವಾದ ಆಯುಧದಿಂದ ಪುತ್ರಿ ಚೈತ್ರಾಳಿಗೆ ಹೊಡೆದ ತರುವಾಯ ಚಾಕುವಿನಿಂದ ಪತಿ ಶಿವರಾಜ್ ಕತ್ತು ಕುಯ್ದು ಹೊರ ಬಂದಿದ್ದಾನೆ. ಈ ಕೃತ್ಯ ಎಸಗಿದ ಬಳಿಕ ತನ್ನ ಮನೆಗೆ ತೆರಳಿದ ರಂಗಧಾಮಯ್ಯ, ಚಾಕುವಿನಿಂದ ಚುಚ್ಚಿಕೊಂಡು ಬಳಿಕ ನೇಣಿಗೆ ಕೊರಳೊಡ್ಡಿದ್ದಾನೆ. ಮಂಗಳವಾರ ಬೆಳಗ್ಗೆ ಮೃತಳ ಮನೆಗೆ ನೆರೆಹೊರೆಯವರು ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಡಿಗೆದಾರನ ಜತೆ ಸಖ್ಯ ತಂದ ಆಪತ್ತು:
ಹದಿನೆಂಟು ವರ್ಷಗಳ ಹಿಂದೆ ಹುಲಿಯೂರದುರ್ಗದ ಲಕ್ಷ್ಮಿ ಹಾಗೂ ಶಿವರಾಜ್ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹೆಗ್ಗನಹಳ್ಳಿಯಲ್ಲಿ ತಮ್ಮ ಕುಟುಂಬದ ಜತೆ ಅವರು ನೆಲೆಸಿದ್ದರು. ಪಾಶ್ರ್ವವಾಯು ಪೀಡಿತನಾಗಿದ್ದ ಶಿವರಾಜ್, ಮನೆ ಸಮೀಪವೇ ಗೂಡಂಗಡಿ ಇಟ್ಟುಕೊಂಡಿದ್ದ. ಗಾರ್ಮೆಂಟ್ಸ್‌ನಲ್ಲಿ ಲಕ್ಷ್ಮಿ ಕೆಲಸ ಮಾಡುತ್ತಿದ್ದಳು. ಅವರ ಮನೆಯಲ್ಲಿ ಆರು ವರ್ಷಗಳಿಂದ ಚಿತ್ರದುರ್ಗ ಜಿಲ್ಲೆಯ ಖಾಸಗಿ ಕಂಪನಿ ನೌಕರ ರಂಗಧಾಮಯ್ಯ, ತನ್ನ ಪತ್ನಿ ಮತ್ತು ಮಕ್ಕಳ ಜತೆ ಬಾಡಿಗೆಗೆ ನೆಲೆಸಿದ್ದ.
ಅಪಘಾತ ಮಾಡಿದ್ದಕ್ಕೆ ಸಿಕ್ಕಿದೆ ಸಾಕ್ಷಿ, ಹ್ಯಾರಿಸ್ ಪುತ್ರ ನಲಪಾಡ್‌ಗೆ ನೋಟಿಸ್
ವರ್ಷದ ಹಿಂದೆ ಅಕಾಲಿಕವಾಗಿ ರಂಗಧಾಮಯ್ಯ ಪತ್ನಿ ಸಾವಿಗೀಡಾದರು. ಪತ್ನಿ ಸಾವಿನ ಬಳಿಕ ಆತ, ತನ್ನೂರಿನಲ್ಲೇ ಮಕ್ಕಳನ್ನು ಬಿಟ್ಟು ಓದಿಸುತ್ತಿದ್ದ. ಹೀಗಿರುವಾಗ ಕೆಲ ತಿಂಗಳಿಂದ ಮನೆಯೊಡೆತಿ ಲಕ್ಷ್ಮಿ ಜತೆ ರಂಗಧಾಮಯ್ಯನಿಗೆ ಸಲುಗೆ ಬೆಳೆಯಿತು. ದಿನ ಕಳೆದಂತೆ ಅದು ಅನೈತಿಕ ಸಂಬಂಧಕ್ಕೆ ತಿರುಗಿತು. ಈ ವಿಚಾರ ತಿಳಿದ ಶಿವರಾಜ್, ಪತ್ನಿಗೆ ಬುದ್ಧಿ ಮಾತು ಹೇಳಿದ್ದರು. ‘ಮಕ್ಕಳು ದೊಡ್ಡವರಾಗುತ್ತಿದ್ದಾರೆ. ಅವರ ಭವಿಷ್ಯ ದೃಷ್ಟಿಯಿಂದ ರಂಗಧಾಮಯ್ಯನ ಸಹವಾಸ ಬಿಡು’ ಎಂದು ತಾಕೀತು ಮಾಡಿದ್ದರು. ಇದಕ್ಕೆ ಹಿರಿಯ ಪುತ್ರಿ ಚೈತ್ರಾ ಸಹ, ತಾಯಿಗೆ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಳು. ಇದರಿಂದ ಎಚ್ಚೆತ್ತ ಲಕ್ಷ್ಮಿ, ಪ್ರಿಯಕರನಿಂದ ದೂರವಾಗಲು ಯತ್ನಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಕುಟುಂಬ ನಾಶಕ್ಕೆ ನಿರ್ಧಾರ:
ಆದರೆ ಪ್ರಿಯತಮೆ ದಿಢೀರ್ ಬದಲಾವಣೆಯೂ ರಂಗಧಾಮಯ್ಯನಲ್ಲಿ ಸಿಟ್ಟು ತರಿಸಿತು. ಇದೇ ವಿಷಯವಾಗಿ ಅವರ ಮಧ್ಯೆ ಜಗಳ ಸಹ ಆಗಿದ್ದವು. ಈ ಬೆಳವಣಿಗೆಯಿಂದ ಮತ್ತಷ್ಟುಕೆರಳಿದ ರಂಗಧಾಮಯ್ಯ, ಪ್ರಿಯತಮೆಯ ಕುಟುಂಬವನ್ನು ನಾಶಗೊಳಿಸಲು ನಿರ್ಧರಿಸಿದ್ದಾನೆ. ಅಂತೆಯೇ ಲಕ್ಷ್ಮಿ ಮನೆಗೆ ಸೋಮವಾರ ರಾತ್ರಿ 10.48ರ ಸುಮಾರಿಗೆ ಆರೋಪಿ ತೆರಳಿದ್ದ. ಮೊದಲು ಲಕ್ಷ್ಮಿ ಜತೆ ಜಗಳ ಶುರು ಮಾಡಿದ ಆತ, ಆಕೆಯ ಕಪಾಳಕ್ಕೆ ಬಲವಾದ ಹಲಗೆಯಿಂದ ಬಾರಿಸಿದ್ದಾನೆ. ಬಳಿಕ ಆಕೆಯ ತಲೆಯನ್ನು ಗೋಡೆಗೆ ಗುದ್ದಿಸಿದ್ದು, ಕುಸಿದು ಬಿದ್ದ ಲಕ್ಷ್ಮಿಯನ್ನು ದಿಂಬಿನಿಂದ ಅದುಮಿ ಉಸಿರುಗಟ್ಟಿಸಿ ಕೊಂದಿದ್ದಾನೆ.
ನಂತರ ಮಚ್ಚಿನಿಂದ ಚೈತ್ರಾಳಿಗೆ ಹೊಡೆದ ನಂತರ ಶಿವರಾಜ್‌ಗೆ ಚಾಕುವಿನಿಂದ ಕತ್ತು ಕುಯ್ದು ಹೊರ ಬಂದಿದ್ದಾನೆ. ಪ್ರಿಯತಮೆ ಕುಟುಂಬದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಭಾವಿಸಿದ ಆತ, ಬಂಧನ ಭೀತಿಯಿಂದ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೊದಲು ಚಾಕುವಿನಿಂದ ಹೊಟ್ಟೆಗೆ ಚುಚ್ಚಿಗೊಂಡ ಆರೋಪಿ, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಬೆಳಗ್ಗೆ 10.30ರ ಸುಮಾರಿಗೆ ಮೃತ ಲಕ್ಷ್ಮಿ ನೆರೆ ಮನೆಯವರು, ಮೃತರ ಮನೆಗೆ ಬಂದಿದ್ದಾರೆ. ಆಗ ನಡುಮನೆಯಲ್ಲಿ ಲಕ್ಷ್ಮಿ ಮೃತಪಟ್ಟಿದ್ದಳು ಹಾಗೂ ರಕ್ತದ ಮಡುವಿನಲ್ಲಿ ಶಿವರಾಜ್ ಮತ್ತು ಚೈತ್ರಾ ಬಿದ್ದಿರುವುದನ್ನು ನೋಡಿ ಚೀರಿಕೊಂಡಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಹೂತಿಟ್ಟಿದ್ದ ಬ್ಯಾರಲ್ ಗನ್ ಪತ್ತೆ!
ತಕ್ಷಣವೇ ಸ್ಥಳೀಯರು ಜಮಾಯಿಸಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಮೊದಲ ಮಹಡಿಯಲ್ಲಿ ನೆಲೆಸಿದ್ದ ರಂಗಧಾಮಯ್ಯ ಮನೆಗೆ ತೆರಳಿದಾಗ ನೇಣಿನ ಕುಣಿಕೆಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆ ಸಂಬಂಧ ರಾಜಗೋಪಾಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.