
ಬೆಂಗಳೂರು (ಫೆ.10): ಪ್ರೀತಿ ಹುಚ್ಚಿಗೆ ಬಿದ್ದ ಯುವತಿಯೊಬ್ಬಳು ತನ್ನ ಹೆತ್ತವರನ್ನೇ ಬ್ಲ್ಯಾಕ್‌ಮೇಲ್ ಮಾಡಲು ಸ್ವಂತ ತಾಯಿಯ ಖಾಸಗಿ ಫೋಟೋಗಳನ್ನು ತೆಗೆದಿರುವ ಅಮಾನವೀಯ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಮೊಬೈಲ್ ಪರಿಶೀಲನೆಯ ವೇಳೆ ಈ ಕೃತ್ಯ ಬಯಲಾಗಿದ್ದು, ಪೊಲೀಸರ ತನಿಖೆಯಲ್ಲಿ ಸಂಚಿನ ಹಿಂದಿನ ಅಸಲಿ ಕಾರಣ ಹೊರಬಿದ್ದಿದೆ.
ನಗರದ 23 ವರ್ಷದ ಯುವತಿಯೊಬ್ಬಳು ಯುವಕನನ್ನ ಪ್ರೀತಿಸುತ್ತಿದ್ದಳು. ಆದರೆ ಈ ವಿಷಯ ತಿಳಿದ ಪೋಷಕರು ಯುವತಿಯ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಅಸಮಾಧಾನಗೊಂಡ ಯುವತಿ ತನ್ನ ಪ್ರಿಯಕರನ ಬಳಿ ಅಳಲು ತೋಡಿಕೊಂಡಿದ್ದಳು. ಈ ವೇಳೆ ಪ್ರಿಯಕರ, 'ನಿಮ್ಮ ತಾಯಿ ಖಾಸಗಿ ಫೋಟೋಗಳನ್ನು ತೆಗೆದಿಟ್ಟುಕೋ, ಅವರು ಮದುವೆಗೆ ಒಪ್ಪದಿದ್ದರೆ ಅದನ್ನೇ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡೋಣ' ಎಂಬ ಕಿಡಿಗೇಡಿ ಸಲಹೆ ನೀಡಿದ್ದ. ಅದರಂತೆಯೇ ಮಗಳು ತಾಯಿಯ ಫೋಟೋಗಳನ್ನು ಸೆರೆಹಿಡಿದಿದ್ದಳು!
ಪೋಷಕರ ವಿರೋಧದ ನಡುವೆಯೂ ಯುವತಿ ತನ್ನ ಪ್ರಿಯಕರನ ಜೊತೆ ರಿಜಿಸ್ಟರ್ ಮದುವೆಯಾಗಿದ್ದಾಳೆ. ಮನೆಯಿಂದ ಹೊರಹೋಗುವ ಗಡಿಬಿಡಿಯಲ್ಲಿ ತನ್ನ ಮೊಬೈಲ್ ಅನ್ನು ಮನೆಯಲ್ಲೇ ಮರೆತು ಹೋಗಿದ್ದಾಳೆ. ಸಂಶಯಗೊಂಡ ಪೋಷಕರು ಮಗಳ ಮೊಬೈಲ್ ಅನ್ನು ಪರಿಶೀಲಿಸಿದಾಗ, ತಾಯಿಯ ಖಾಸಗಿ ಫೋಟೋಗಳು ಪತ್ತೆಯಾಗಿವೆ. ಇದನ್ನು ಕಂಡು ಆಘಾತಕ್ಕೊಳಗಾದ ಪೋಷಕರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಯುವತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಎಲ್ಲಾ ಸತ್ಯವನ್ನು ಬಾಯಿಬಿಟ್ಟಿದ್ದಾಳೆ. ಕೇವಲ ಮದುವೆಗೆ ಪೋಷಕರನ್ನು ಒಪ್ಪಿಸಲು ಮತ್ತು ಬ್ಲ್ಯಾಕ್‌ಮೇಲ್ ಮಾಡಲು ಮಾತ್ರ ಈ ಫೋಟೋಗಳನ್ನು ತೆಗೆದಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ಅದೃಷ್ಟವಶಾತ್ ಈ ಫೋಟೋಗಳನ್ನು ಆಕೆ ಯಾರಿಗೂ ಕಳುಹಿಸಿಲ್ಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿಲ್ಲ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
ಯುವತಿಯ ಉದ್ದೇಶ ಕೇವಲ ಮದುವೆಯಾಗಿತ್ತು ಎಂದು ತಿಳಿದುಬಂದರೂ, ಹೆತ್ತ ತಾಯಿಯ ಖಾಸಗಿ ಫೋಟೋಗಳನ್ನು ಪ್ರಿಯಕರನೊಂದಿಗೆ ಹಂಚಿಕೊಳ್ಳುತ್ತಾಳೆಂದರೆ? ಈ ವಿಷಯ ತಿಳಿದ ಪೊಲೀಸರೇ ಶಾಕ್ ಆಗಿದ್ದಾರೆ. ಇಂಥ ಮಕ್ಕಳೂ ಇರುತ್ತಾರಾ? ಪ್ರೀತಿಗಾಗಿ ಇಂತಹ ಹೀನ ಕೃತ್ಯಕ್ಕೆ ಇಳಿಯುವ ಮಗಳು ಯಾರಿಗೂ ಹುಟ್ಟುವುದು ಬೇಡಪ್ಪ. ಸದ್ಯಕ್ಕೆ ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಯುವತಿ ಮತ್ತು ಆಕೆಯ ಪ್ರಿಯಕರನಿಗೆ ಕಾನೂನಿನ ಬಿಸಿ ಮುಟ್ಟಿಸಲು ಪೊಲೀಸರು ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ