ಮಗಳು ಗಂಡನ ಮನೆಯನ್ನು ಬಿಟ್ಟು ತವರುಮನೆ ಸೇರಿಕೊಂಡು ಎಲ್ಲರಿಗೂ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ತಂದೆಯೇ ಸ್ವಂತ ಮಗಳನ್ನು ಕೊಲೆ ಮಾಡಿದ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು (ಮಾ.16): ಹೆತ್ತು ಹೊತ್ತು, ಸಾಕಿ, ಸಲುಹಿ, ವಿದ್ಯಾಭ್ಯಾಸವನ್ನು ಕೊಡಿಸಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದ ಮಗಳು, ಗಂಡನ ಮನೆಯಲ್ಲಿ ಸಂತಸವಾಗಿದ್ದರೆ ತಂದೆ ತಾಯಿಗೆ ಅದೇ ಮಹಾನ್ ಸಾಧನೆ ಆಗಲಿದೆ. ಆದರೆ, ಇಲ್ಲೊಬ್ಬ ಮಗಳು ಗಂಡನ ಮನೆಯನ್ನು ಬಿಟ್ಟು ತವರುಮನೆ ಸೇರಿಕೊಂಡು ಎಲ್ಲರಿಗೂ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ತಂದೆಯೇ ಸ್ವತಃ ಮಗಳನ್ನು ಕೊಲೆ ಮಾಡಿದ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ಕೊಡಿಗೆಹಳ್ಳಿಯ ಧನಲಕ್ಷ್ಮಿ ಲೇಔಟ್ ನಲ್ಲಿ ಈ ದುರ್ಘಟನೆ ನಡೆದಿದೆ. ಆಶಾ (32) ಕೊಲೆಯಾದ ದುರ್ದೈವಿ ಮಗಳು ಆಗಿದ್ದಾಳೆ. ರಮೇಶ್ (60) ಮಗಳನ್ನು ಕೊಲೆ ಮಾಡಿದ ಆರೋಪಿ ತಂದೆ ಆಗಿದ್ದಾನೆ. ಈ ಘಟನೆ ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ, ಕುಟುಂಬದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಮಾತುಕತೆ ಅಥವಾ ಕೌನ್ಸೆಲಿಂಗ್ ಮೂಲಕ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಹೀಗೆ ಮಾಡಿದರೆ ಒಂದು ಜೀವ ಸಾವನ್ನಪ್ಪಿದರೆ ಉಳಿದವರು ಜೈಲು ಪಾಲಾಗಬೇಕಾಗುತ್ತದೆ.
Bengaluru Crime: ಪ್ರೀತಿಸಿದ ಯುವತಿಗೆ ಮದುವೆ ಫಿಕ್ಸ್: ಮನೆಗೆ ನುಗ್ಗಿ ರೇಪ್ ಮಾಡಿ ಕೊಲೆಗೈದ ಪ್ರೇಮಿ
ತಂದೆ, ತಾಯಿ, ತಂಗಿಗೆ ಕಿರುಕುಳ: ಮೃತೆ ಆಶಾಳನ್ನು ಹಲವು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಆಕೆ ಕೆಲವೇ ದಿನಗಳಲ್ಲಿ ಮದುವೆಯಾಗಿದ್ದ ಗಂಡನನ್ನು ಬಿಟ್ಟು ತವರು ಮನೆಗೆ ಬಂದು ಸೇರಿಕೊಂಡಿದ್ದರು. ಹೆತ್ತೆ ಮಗಳ ಜೀವನ ಸರಿ ಮಾಡಲು ತಂದೆ ತಾಯಿ ಎಷ್ಟೇ ಪ್ರಯತ್ನ ಮಾಡಿದರೂ ಆಕೆ ಮಾತ್ರ ಯಾರ ಮಾತನ್ನೂ ಕೇಳದೆ ಹಠ ಮಾಡುತ್ತಿದ್ದಳು. ಜೊತೆಗೆ, ವೈದ್ಯೆಯಾಗಿ ಕೆಲಸ ಮಾಡುತ್ತಾ ಗಂಡನ ಮನೆಯಲ್ಲಿದ್ದ ತಂಗಿಗೆ ಹಾಗೂ ತಂದೆ, ತಾಯಿಗೆ ಈಕೆ ಪ್ರತಿನಿತ್ಯ ಒಂದಲ್ಲಾ ಒಂದು ವಿಚಾರಕ್ಕೆ ಕಿರುಕುಳ ನೀಡುತ್ತಿದ್ದಳು. ಇದರಿಂದ ಆಗಿಂದಾಗ್ಗೆ ಮನೆಯಲ್ಲಿ ಗಲಾಟೆಯೂ ನಡೆಯುತ್ತಿತ್ತು.
ದೊಣ್ಣೆಯಿಂದ ತಲೆಗೆ ಹೊಡೆದ ತಂದೆ: ಇನ್ನು ತಂದೆ, ತಾಯಿಯೊಂದಿಗೆ ಆಶಾ ನಿನ್ನೆಯೂ ಕೂಡ ಜಗಳ ಆರಂಭಿಸಿದ್ದಾಳೆ. ಆದರೆ, ಪ್ರತಿನಿತ್ಯ ಹಿರಿಯ ಮಗಳ ಕಿರುಕುಳದಿಂದ ಬೇಸತ್ತಿದ್ದ ತಂದೆ ರಮೇಶ್ ಜಗಳದ ವೇಳೆ ದೊಣ್ಣೆಯನ್ನು ತೆಗೆದುಕೊಂಡು ಆಕೆಯ ತಲೆಗೆ ಹೊಡೆದಿದ್ದಾನೆ. ಇದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ರಕ್ತಸ್ರಾವ ಉಂಟಾಗಿದೆ. ಇನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಮೊದಲೇ ಹಿರಿಮಗಳು ಆಶಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ಕುರಿತು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಆರೋಪಿ ತಂದೆ ರಮೇಶ್‌ನನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
Bengaluru Crime: ಮದುವೆಯಾದ ಮಹಿಳೆ ಅನೈತಿಕ ಸಂಬಂಧ ನಿಲ್ಲಿಸಿದ್ದಕ್ಕೆ ಚಾಕು ಚುಚ್ಚಿದ
ಪ್ರೀತಿಸಿ ಮದುವೆಯಾಗಿದ್ದ ಗಂಡನೊಂದಿಗೆ ವರ್ಷವೂ ಇರಲಿಲ್ಲ: ಕೊಲೆ ಆರೋಪಿ ರಮೇಶ್ ನಿವೃತ್ತ ಬಿಇಎಲ್ ಉದ್ಯೋಗಿ ಆಗಿದ್ದಾರೆ. ಇನ್ನು ಮೃತೆ ಆಶಾ ಫ್ಯಾಶನ್ ಡಿಸೈನಿಂಗ್ ವಿದ್ಯಾಭ್ಯಾಸ ಮುಗಿಸಿದ್ದು, ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು. ಈಕೆಯ ತಂಗಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾಳೆ. ಇನ್ನು ಆಶಾ 2020ರಲ್ಲಿ ಪ್ರೀತಿಸಿ ಕುಟುಂಬ ವಿರೋಧದ ನಡುವೆಯೂ ಎಲ್ಲರನ್ನು ಬಲವಂತದಿಂದ ಒಪ್ಪಿಸಿ ಮದುವೆಯಾಗಿದ್ದಳು. ಕೆಲವೇ ದಿನಗಳಲ್ಲಿ ಗಂಡನ ಜೊತೆಗೆ ಜಗಳ ಮಾಡಿಕೊಂಡು ತಂದೆ ಮನೆ ಸೇರಿಕೊಂಡಿದ್ದಳು. 2021ರಿಂದ ತಂದೆ ಮನೆಯಲ್ಲಿಯೇ ವಾಸವಾಗಿದ್ದಳು. ಈ ಮಧ್ಯೆ ಗಲಾಟೆಯಾಗಿ ಕೊಲೆಯಾಗಿದ್ದಾಳೆ.
ಸಹಜ ಸಾವು ಎಂದು ಕುಟುಂಬಸ್ಥರ ಮಾಹಿತಿ: ಇನ್ನು ಮಗಳು ಮನೆಯಲ್ಲಿ ಮಲಗಿದ್ದಾಗ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ತಂದೆ ಸಹಜ ಸಾವು ಎಂದು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಆದರೆ, ಪರಿಶೀಲನೆ ಮಾಡಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.