ಲೀಸ್ ಹಣ ನಮಗೆ ಕೊಡಿ, ಪ್ರತಿ ತಿಂಗಳೂ ಬಾಡಿಗೆ ನಾವು ಕಟ್ಟುತ್ತೇವೆ ಎಂದು 200 ಕ್ಕೂ ಹೆಚ್ಚು ಜನರಿಗೆ ಕಂಪನಿ ಮೋಸ!

Kannadaprabha News   | Kannada Prabha
Published : May 19, 2026, 05:53 AM IST
Company Cheats Over 200 People in Rental Lease Scam: 'Give Us Money, We Pay Rent'

ಸಾರಾಂಶ

ಬೆಂಗಳೂರಿನಲ್ಲಿ, ಜೋನ್ಸ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಎಂಬ ಸಂಸ್ಥೆಯು ಭೋಗ್ಯದ ಹಣ ಪಡೆದು ಬಾಡಿಗೆ ಪಾವತಿಸುವುದಾಗಿ ನಂಬಿಸಿ ಸುಮಾರು 200 ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದೆ. ಈ ಸಂಬಂಧ ಸಂಸ್ಥೆಯ ಎಂಡಿ ಸ್ಟೀಫನ್ ಅರ್ಥರ್ ಜೋನ್ಸ್ ವಿರುದ್ಧ ದೂರು ದಾಖಲಾಗಿದ್ದು, ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವ ಸಾಧ್ಯತೆಯಿದೆ.

ಬೆಂಗಳೂರು (ಮೇ.19): ಭೋಗ್ಯದ ಹಣ ನಮಗೆ ನೀಡಿ ನಿಮ್ಮ ಮನೆಯ ಬಾಡಿಗೆ ನಾವು ಕಟ್ಟುತ್ತೇವೆ ಎಂದು ನಂಬಿಸಿ ಸುಮಾರು 200 ಮಂದಿಗೆ ಕೋಟ್ಯಂತರ ರು.ವಂಚನೆ ಮಾಡಿರುವ ಖಾಸಗಿ ಸಂಸ್ಥೆಯೊಂದರ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕ್ಲಿಫರ್ಡ್ ರಾಯನ್ ಸೇರಿ ಇತರರು ನೀಡಿದ ದೂರಿನನ್ವಯ ಜೋನ್ಸ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಸಂಸ್ಥೆಯ ಎಂ.ಡಿ ಸ್ಟೀಫನ್ ಅರ್ಥರ್ ಜೋನ್ಸ್ ಹಾಗೂ ಇತರೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಣ್ಣೂರು ಮುಖ್ಯರಸ್ತೆಯ ನಿವಾಸಿ ಕ್ಲಿಫರ್ಡ್ ರಾಯನ್ ಎಂಬುವರು 2025ರ ಜೂನ್‌ನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದಾಗ ಜೋನ್ಸ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಎಂಬ ಸಂಸ್ಥೆ ಸಂಪರ್ಕಕ್ಕೆ ಬಂದು ನಿಮಗೆ ಮನೆ ಕೊಡಿಸುವುದಾಗಿ ಹೇಳಿದ್ದರು. ಲೀಸ್‌ ಹಣ ನಮಗೆ ಕೊಡಿ ನಿಮ್ಮ ಮನೆಯ ಬಾಡಿಗೆ ಹಣ ನಾವು ಕಟ್ಟುತ್ತೇವೆ ಎಂದು ನಂಬಿಸಿದ್ದಾರೆ.

ನಂತರ ಸಂಸ್ಥೆಯ ಉದ್ಯೋಗಿ ಅಬ್ದುಲ್ ಮತ್ತು ಮ್ಯಾನೇಜರ್ ಸವಿತಾ ಎಂಬುವರು ಕಂಪನಿಯ ನಿಯಮಗಳನ್ನು ವಿವರಿಸಿದ್ದಾರೆ. ನಂತರ ರಾಯನ್‌ ಅವರು ವಿವಿಧ ಹಂತಗಳಲ್ಲಿ ಆನ್‌ಲೈನ್ ಮೂಲಕ 21 ಲಕ್ಷ ಹಣವನ್ನು ಜೋನ್ಸ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್‌ನ ಬ್ಯಾಂಕ್‌ ಖಾತೆಗೆ ಹಣ ಪಾವತಿಸಿದ್ದಾರೆ.

ಆ.12 ರಂದು ಒಪ್ಪಂದ ಮಾಡಿಕೊಂಡು ಮನೆಯಲ್ಲಿ ವಾಸವಿದ್ದರು. ಮನೆಯ ಅಸಲಿ ಮಾಲೀಕರಾದ ರಾಜು ಬೆನೆಡಿಕ್ಟ್ ಅವರಿಗೆ ಬಾಡಿಗೆ ಹಣ ನೀಡುವುದಾಗಿ ಈ ಸಂಸ್ಥೆ ಒಪ್ಪಂದ ಮಾಡಿಕೊಂಡಿತ್ತು. 2026 ಮೇ 1ರಂದು ಮಾಲೀಕರು ಕರೆ ಮಾಡಿ 6 ತಿಂಗಳಿನಿಂದ ಬಾಡಿಗೆ ನೀಡಿರುವುದಿಲ್ಲ, ತಕ್ಷಣ ಮನೆ ಖಾಲಿ ಮಾಡುವಂತೆ ಕ್ಷಿಫರ್ಡ್ ರಾಯನ್ ಅವರಿಗೆ ತಿಳಿಸಿದ್ದಾರೆ.

ಇದರಿಂದ ಆತಂಕಗೊಂಡ ರಾಯನ್‌ ಅವರು ಲೀಸ್ ಹಣ ವಾಪಸ್ ಕೊಡುವಂತೆ ಆ ಸಂಸ್ಥೆಗೆ ಕೇಳಿಕೊಂಡಾಗ ಅವರು ಹಣ ವಾಪಸ್ ನೀಡದೇ, ಫೋನ್ ಕರೆಗೂ ಸ್ಪಂದಿಸದಿದ್ದಾಗ ರಾಯನ್ ಅವರು ಜೋನ್ಸ್ ಪ್ರಾಪರ್ಟ್ ಸಂಸ್ಥೆಗೆ ಭೇಟಿ ನೀಡಿದಾಗ ತಮ್ಮಂತೆಯೇ ಹಲವರಿಗೆ ಲಕ್ಷಾಂತರ ರು. ವಂಚನೆ ಮಾಡಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅವರು ಸಂಸ್ಥೆಯ ಎಂ.ಡಿ ಸ್ಟೀಫನ್ ಅರ್ಥರ್ ಜೋನ್ ಹಾಗೂ ಇತರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಭೋಗ್ಯದ ಹಣ ವಾಪಸ್ ಕೊಡಿಸುವಂತೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಿಐಡಿಗೆ ವರ್ಗಾವಣೆ! 

ಸ್ಟೀಫನ್ ಜೋನ್ಸ್ ವಿರುದ್ಧ 2021ರಲ್ಲಿ ಚಂದ್ರಲೇಔಟ್‌ ಪೊಲೀಸ್‌ ಠಾಣೆಯಲ್ಲಿಯೂ 1 ಎಫ್‌ಐಆರ್‌ ದಾಖಲಾಗಿತ್ತು. ಹೂಡಿಕೆ ಹೆಸರಿನಲ್ಲಿ ಚಂದ್ರಲೇಔಟ್‌ ನಿವಾಸಿ ಸತೀಶ್‌ ಎಂಬುವರಿಗೆ ಲಕ್ಷಾಂತರ ರು.ವಂಚಿಸಿದ್ದರು. ಜೋನ್ಸ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಕಂಪನಿಯು ಸುಮಾರು 300 ಮಂದಿಗೆ 200 ಕೋಟಿಗೂ ಅಧಿಕ ವಂಚನೆ ಮಾಡಿದೆ. ಕೋಟ್ಯಂತರ ರು. ವಂಚನೆ ಪ್ರಕರಣವಾಗಿರುವುದರಿಂದ ಸಿಐಡಿಗೆ ಈ ಪ್ರಕರಣ ವರ್ಗಾವಣೆಯಾಗಲಿದೆ.

ವಂಚನೆ ಹೇಗೆ?

ಭೋಗ್ಯಕ್ಕೆ (ಲೀಸ್‌) ಮನೆ ಹುಡುಕುತ್ತಿರುವವರನ್ನು ಜೋನ್ಸ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಕಂಪನಿಯು ಟಾರ್ಗೆಟ್ ಮಾಡುತ್ತಿತ್ತು. ನಿಮ್ಮ ಲೀಸ್‌ ಹಣ ನಮಗೆ ಕೊಡಿ, ಪ್ರತಿ ತಿಂಗಳು ನಿಮ್ಮ ಮನೆಯ ಬಾಡಿಗೆ ನಾವು ಕಟ್ಟುತ್ತೇವೆ ಎಂದು ಬಾಡಿಗೆದಾರರನ್ನು ನಂಬಿಸಿ ಅಗ್ರಿಮೆಂಟ್‌ ಕೂಡ ಮಾಡಿ ಕೊಡುತ್ತಿದ್ದರು. ಆರಂಭದಲ್ಲಿ ಕೆಲ ತಿಂಗಳು ಬಾಡಿಗೆ ನೀಡುತ್ತಿದ್ದ ಕಂಪನಿಯು ನಂತರ ಬಾಡಿಗೆ ನೀಡದೆ ವಂಚಿಸಿದೆ. ವಂಚನೆ ಪ್ರಕರಣದಲ್ಲಿ ಈ ಹಿಂದೆ ಸಿಸಿಬಿ ಸ್ಟೀಫನ್‌ನನ್ನು ಬಂಧನ ಮಾಡಿತ್ತು ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಳ್ಳನ ಹಿಡಿದುಕೊಟ್ರೂ, ಪೊಲೀಸರ ಹಿಂದೇಟು- ಇದೇ ನೋಡಿ ನಮ್​ ಪೊಲೀಸ್ ವ್ಯವಸ್ಥೆ: Bigg Boss ಧ್ರುವಂತ್‌ ಗರಂ
ಜಡ್ಜ್ ಅತ್ತೆಗೆ ಸೊಸೆಯಾದ ಮಾಜಿ 'ಮಿಸ್ ಪುಣೆ ಟ್ವಿಶಾ ಶರ್ಮಾ'; ಮದುವೆಯಾಗಿ 5 ತಿಂಗಳಿಗೆ ನಿಗೂಢ ಸಾವು!