ಕೆರೆಯ ಬಳಿ ಇರುವ ಉದ್ಯಾನದಲ್ಲಿ ಆಟವಾಡಲು ಹೋಗಿದ್ದ 13 ವರ್ಷದ ಬಾಲಕ ಉದ್ಯಾನದಲ್ಲಿದ್ದ ಕೆರೆಯಲ್ಲಿ ಬಿದ್ದು ಮುಳಗಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನ ಮತ್ತಿಕೆರೆ ಸಮೀಪದ ಜೆ.ಪಿ.ಪಾರ್ಕ್‌ನಲ್ಲಿ ನಡೆದಿದೆ.
ಬೆಂಗಳೂರು (ಏ.16): ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಸಂಜೆ ಕೆರೆಯ ಬಳಿ ಇರುವ ಪಾರ್ಕ್‌ಗೆ ಆಟವಾಡಲು ಹೋಗಿದ್ದ 13 ವರ್ಷದ ಬಾಲಕನೊಬ್ಬ ಕೆರೆಯಲ್ಲಿ ಬಿದ್ದು ಮುಳಗಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನ ಮತ್ತಿಕೆರೆ ಸಮೀಪದ ಜೆ.ಪಿ.ಪಾರ್ಕ್‌ನಲ್ಲಿ ಭಾನುವಾರ ಸಂಜೆ ನಡೆದಿದೆ.
ಮಕ್ಕಳನ್ನು ಮನೆಯಲ್ಲಿ ಮೂರು ಹೊತ್ತು ಕೋಡಿ ಹಾಕುವುದು ಬೇಡವೆಂದು ಕೆರೆಯ ಬಳಿ ಇರುವ ಜೆಪಿ ಪಾರ್ಕ್ ಉದ್ಯಾನದ ಬಳಿ ಆಟವಾಡಲು ತೆರಳಿದ್ದ ಬಾಲಕ ಕೆರೆಯೊಳಗೆ ಬಿದ್ದು ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ಬಾಲಕನನ್ನು ಸಂಜಯ್ (13) ಎಂದು ಗುರುತಿಸಲಾಗಿದೆ. ಆಟವಾಡುತ್ತಿದ್ದ ಸಂಜಯ್ ನಿಯಂತ್ರಣ ತಪ್ಪಿ ಕೆರೆಯಲ್ಲಿ ಬಿದ್ದಿದ್ದಾನೆ. ಇನ್ನು ವಾಯು ವಿಹಾರಿಗಳು ನೋಡ ನೋಡುತ್ತಿದ್ದಂತೆಯೇ ಹತ್ತಾರು ಜನರ ಮುಂದೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ
ಆಟವಾಡುವುದಾಗಿ ಹೇಳಿ ಮೀನು ಹಿಡಿಯಲು ಹೋದ ಮಕ್ಕಳು: ಕೆರೆಯಲ್ಲಿ ಮುಳುಗಿ ಸಾವು
ಆಟವಾಡುವ ವೇಳೆ ಆಯತಪ್ಪಿ ಕೆರೆಗೆ ಬಿದ್ದ ಬಾಲಕ: ಮೃತ ಸಂಜಯ್ ಜೆ.ಪಿ. ಪಾರ್ಕ್ ಸಮೀಪದ ಮೋಹನ್ ಕುಮಾರ್ ಲೇಔಟ್ ನಿವಾಸಿ ಆಗಿದ್ದಾನೆ. 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಶಾಲೆಗೆ ರಜೆ ಇರುವ ಕಾರಣ ಉದ್ಯಾನದ ಬಳಿ ಆಟವಾಡಲು ಬಂದಿದ್ದನು. ಆದರೆ, ಸಂಜೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಇನ್ನು ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಸದ್ಯ ಅಗ್ನಿಶಾಮಕ ಕೆರೆಗೆ ಬಿದ್ದು ಮುಳುಗಿರುವ ಸಂಜಯ್ ಶವದ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
ಮುಗಿಲು ಮುಟ್ಟಿದ ಪೋಷಕರ ಆಕ್ರಂದನ: ಮನೆಯಲ್ಲಿ ಮೊಬೈಲ್ ಹಾಗೂ ಟಿವಿ ನೋಡುತ್ತಾ ಕುಳಿತುಕೊಳ್ಳುವ ಮಕ್ಕಳನ್ನು ಹೊರಗೆ ಆಟವಾಡಲು ಕಳುಹಿಸಿದ್ದ ಪೋಷಕರಿಗೆ ಮಗನ ಸಾವಿನ ಸುದ್ದಿ ಕೇಳಿ ದಿಕ್ಕೇ ತೋಚದಂತಾಗಿದೆ. ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಶವ ಶೋಧನೆ ಮಾಡುತ್ತಿರುವ ಕಾರ್ಯ ಮುಂದುವರೆಸಿದ್ದು, ಫ್ಲಡ್ ಲೈಟ್ ಹಾಕಿಕೊಂಡು ರಾತ್ರಿ ವೇಳೆಯೂ ಕಾರ್ಯಾಚರಣೆ ಮಾಡುತ್ತಿದ್ದಾರೆ. ಆದರೆ, ಮಗಗನ್ನು ಕಳೆದುಕೊಂಡಿರುವ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.
ಮಕ್ಕಳ ರಕ್ಷಣೆಗೆ ಪೋಷಕರು ನಿಗಾವಹಿಸಿ: ಬೇಸಿಗೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲೆಗಳಿಗೆ ರಜೆ ಇದ್ದು, ಮನೆಯಲ್ಲಿ ಮಕ್ಕಳನ್ನು ನಿಯಂತ್ರಣ ಮಾಡುವುದೇ ಪೋಷಕರಿಗೆ ದೊಡ್ಡ ಸವಾಲಾಗಿದೆ. ಮಕ್ಕಳನ್ನು ಮನೆಯಲ್ಲಿ ಕಾಳಜಿ ಮಾಡುವುದು ದೊಡ್ಡ ಸವಾಲಾಗಿದ್ದು, ಆಟವಾಡಲು ಕರೆದೊಯ್ಯುವಾಗ ಎಷ್ಟೇ ಸುರಕ್ಷಿತಾ ಕ್ರಮಗಳನ್ನು ಕೈಗೊಂಡರೂ ಅಪಘಾತ ಸಂಭವಿಸುವುದನ್ನು ತಡೆಯುವುದು ಅಸಾಧ್ಯವಾಗಿದೆ. ಆದ್ದರಿಂದ ಪೋಷಕರು ಮಕ್ಕಳನ್ನು ಸುರಕ್ಷಿತ ಪ್ರದೇಶಗಳಲ್ಲಿಯೇ ಇರಿಸಿಕೊಂಡು ಆಟವಾಡುವುದು ಮುಖ್ಯವಾಗಿದೆ.
ರಾಮನಗರದಲ್ಲಿ ಕೆರೆಗೆ ಬಿದ್ದು ಇಬ್ಬರು ಮಕ್ಕಳು ಸಾವು: ಕಳೆದ ಒಂದು ವಾರದ ಹಿಂದೆ ಮನೆಯಲ್ಲಿ ಆಟವಾಡುವುದಾಗಿ ಹೇಳಿ ಕೆರೆಯ ಬಳಿ ಮೀನು ಹಿಡಿಯಲು ಹೋಗಿದ್ದ ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ಮಾರಸಂದ್ರ ಎಂಬ ಗ್ರಾಮದಲ್ಲಿ ಬಳಿಯಿರುವ ಮಡಿಕೆ ಕೆರೆಯಲ್ಲಿ ನಡೆದಿತ್ತು. ಒಬ್ಬ ಬಾಲಕ ಮೀನು ಹಿಡಿಯಲು ಕೆರೆಯ ಆಳದ ಜಾಗದಲ್ಲಿ ಹೋಗಿದ್ದಾನೆ. ಅವನನ್ನು ರಕ್ಷಣೆ ಮಾಡಲು ಇನ್ನೊಬ್ಬ ಬಾಲಕ ಕೂಡ ಹೋಗಿ ಅವನೂ ಕೂಡ ಮುಳುಗಿದ್ದಾನೆ. ಇದನ್ನು ನೋಡಿದ ಇನ್ನೊಬ್ಬ ಬಾಲಕ ಕೆರೆಯ ದಡದಿಂದ ಊರಿನತ್ತ ಭಯದಿಂದಲೇ ಓಡಿ ಹೋಗಿದ್ದಾನೆ. ಇಬ್ಬರು ಕೆರೆಯಲ್ಲಿ ಮುಳುಗಿದರೂ ಭಯದಲ್ಲಿ ಈ ವಿಚಾರವನ್ನು ಯಾರಿಗೂ ಹೇಳದೇ ಗಾಬರಿಯಾಗಿದ್ದಾನೆ. ನಂತರ, ಇವರ ವರ್ತನೆಯನ್ನು ಕಂಡು ಕೇಳಿದಾಗ ನಡೆದ ವಿಚಾರವನ್ನು ಹೇಳಿದ್ದಾನೆ.