* ಗುಂಡು ಹಾರಿಸಿಕೊಂಡು ಬಿಇಒ ಆತ್ಮಹತ್ಯೆ
* ಮತ್ತೊಂದೆಡೆ ಮೀಟರ್ ಬಡ್ಡಿ ದಂಧೆಗೆ ಗೃಹಿಣಿ ಬಲಿ
* ರಾಜಧಾನಿ ಬೆಂಗಳೂರಿನಲ್ಲಿ ನಕಲಿ ನೋಟುಗಳ ಹಾವಳಿ
ಬೆಂಗಳೂರು, (ಡಿ.26): ಗುಂಡು ಹಾರಿಸಿಕೊಂಡು ಬಿಇಒ(Block Education Officer) ಆತ್ಮಹತ್ಯೆ(suicide) ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಮೀಟರ್ ಬಡ್ಡಿ ದಂಧೆಗೆ ಗೃಹಿಣಿ ಬಲಿಯಾಗಿದ್ದಾರೆ. ಸುರತ್ಕಲ್ ಎನ್‌ಐಟಿಕೆ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ. ರಾಜಧಾನಿ ಬೆಂಗಳೂರಿನಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಈ ಪ್ರತ್ಯೇಕವಾಗಿ ನಡೆದ ಅಪರಾಧ ಸುದ್ದಿ ವಿವರ ಈ ಕೆಳಗಿನಂತಿದೆ.
ಗುಂಡು ಹಾರಿಸಿಕೊಂಡು ಬಿಇಒ ಆತ್ಮಹತ್ಯೆ
ಗುಂಡು ಹಾರಿಸಿಕೊಂಡು ಬಿಇಒ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಮಲಾಕರ್ ಆತ್ಮಹತ್ಯೆಗೆ ಶರಣಾದ ಬಿಇಒ.
Gang Rape : ಧಾರವಾಡ, ನಗರದ ಹೊರವಲಯಕ್ಕೆ ವಿದ್ಯಾರ್ಥಿನಿ ಕರೆದೊಯ್ದು ಗ್ಯಾಂಗ್ ರೇಪ್
ಅನಾರೋಗ್ಯದಿಂದ ಬಳಲುತ್ತಿದ್ದ ಕಮಲಾಕರ್, ಇಂದು(ಭಾನುವಾರ) ಮಧ್ಯಾಹ್ಬ ಡೆತ್ ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀಟರ್ ಬಡ್ಡಿ ದಂಧೆಗೆ ಗೃಹಿಣಿ ಬಲಿ
ಕೋಲಾರ: ಬಂಗಾರಪೇಟೆ (Bangarapet) ಪಟ್ಟಣದ ಕೂಗಳತೆ ದೂರದಲ್ಲೆ ಅತ್ತಗಿರಿಕೊಪ್ಪ ನಿವಾಸಿ ಲಕ್ಷ್ಮೀದೇವಮ್ಮ ಮೀಟರ್ ಬಡ್ಡಿದಾರರಿಗೆ (Interest rate) ಹೆದರಿ ಆತ್ಮಹತ್ಯೆ (Suicide) ಶರಣಾಗಿದ್ದಾರೆ. ಬಡ್ಡಿ ಹಣಕ್ಕಾಗಿ ತೊಂದರೆ ನೀಡುತ್ತಿರುವುದನ್ನು ಸಹಿಸಿಕೊಳ್ಳಲು ಆಗದೆ ಲಕ್ಮೀದೇವಮ್ಮ ಮನೆಯಲ್ಲಿದ್ದಂತಹ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಕಳೆದ ಗುರುವಾರ ಆತ್ಮಹತ್ಯೆ ಯತ್ನ ನಡೆಸಿದ್ದು, ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆಂದ ಲಕ್ಷ್ಮೀದೇವಮ್ಮ ರನ್ನ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದಕ್ಕೆ ಕಾರಣ ಏನು ಅನ್ನುವುದಾದರೆ, ಹುಲಿಬೆಲೆ ಗ್ರಾಮದ ವೀಣಾ ವೆಂಕಟೇಶ್, ಲಕ್ಷ್ಮೀ, ಅರುಣ್ ಮತ್ತಿತರರ ಬಳಿ ಲಕ್ಷ್ಮೀದೇವಮ್ಮ ಮನೆಯವರಿಗೂ ತಿಳಿಸದೆ ಹಣದ ಲೇವಾದೇವಿ ವ್ಯವಹಾರ ಮಾಡಿದ್ದಾರಂತೆ, ಅದರಲ್ಲೂ ಹತ್ತು ದಿನದ ಬಡ್ಡಿ, ಹದಿನೈದು ದಿನಕ್ಕೆ ಬಡ್ಡಿ ನೀಡುವ ರೀತಿಯಲ್ಲಿ ಲೇವಾದೇವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ವ್ಯವಹಾರದ ಮೊದ ಮೊದಲು ಎಲ್ಲವೂ ಸರಿ ಆಗಿಯೇ ಇತ್ತು, ಇತ್ತೀಚಿಗೆ ಬಡ್ಡಿದಾರರಿಂದ ಪಡೆದ ಹಣಕ್ಕೆ ವಾಪಾಸ್ ಬಡ್ಡಿ ಕಟ್ಟಲಾಗದೆ, ಸಮಸ್ಯೆಗಳು ಒಂದೊಂದಾಗಿ ಹೆಚ್ಚಾಗಿದೆ. ಬಡ್ಡಿದಾರರು ಕೊಡುವ ಮಾನಸಿಕ ಹಿಂಸೆ ಸಹಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ವೀಣಾ ವೆಂಕಟೇಶ್, ಅರುಣ್, ಲಕ್ಷ್ಮಿ ಎಂಬ ಮೂವರ ವಿರುದ್ದ ಪ್ರಕರಣ ದಾಖಲು ಮಾಡಿದ್ದಾರೆ, ಆದರೆ ಬಡ್ಡಿ ವ್ಯವಹಾರದ ಪ್ರಮುಖ ಆರೋಪಿ ವೀಣಾ ವೆಂಕಟೇಶ್, ಅರುಣ್, ಲಕ್ಷ್ಮೀ ಪರಾರಿಯಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸುರತ್ಕಲ್ ಎನ್‌ಐಟಿಕೆ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಮಂಗಳೂರು: ಸುರತ್ಕಲ್ ಎನ್‌ಐಟಿಕೆಯಲ್ಲಿ ಬಿಇ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ದ್ವಿತೀಯ ವರ್ಷದ ಎಂಜಿನಿಯರಿಂಗ್ ವ್ಯಾಸಂಗ್ ಮಾಡುತ್ತಿದ್ದ ಬಿಹಾರ ರಾಜ್ಯದ ಪಾಟ್ನಾ ನಗರದ ಸೌರವ್ (19) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.
ಸೌರವ್ ಅವರ ತಂದೆಯ ಹೆಸರಿನಲ್ಲಿ ಡೆತ್‌ನೋಟ್ ಬರೆದಿದ್ದು, ಶೈಕ್ಷಣಿಕ ಸಾಲ ಪಡೆದು ಬಿಇ ವ್ಯಾಸಂಗ ಮಾಡುತ್ತಿದ್ದು, ಓದು ಮುಗಿಯುವವರೆಗೆ ಸಾಲ ಹೆಚ್ಚಾಗುವ ಭಯ ಹಾಗೂ ಉದ್ಯೋಗ ಸಿಗದೇ ಇದ್ದರೆ ಹೇಗೆ ಎಂಬ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ನನ್ನ ಸಾವಿಗೆ ಯಾರೂ ಕೂಡ ಕಾರಣರಲ್ಲ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಸೌರವ್ ಪೋಷಕರು ತುಂಬಾ ಬಡವವರು ಎಂದು ತಿಳಿದು ಬಂದಿದ್ದು, ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅವರು ನಮಗೆ ಬರುವುದಕ್ಕೆ ಆಗುವುದಿಲ್ಲ ಸುರತ್ಕಲ್‌ನಲ್ಲಿಯೇ ಅಂತ್ಯಕ್ರಿಯೆ ಮಾಡಿ ಎಂದು ತಿಳಿಸಿದ್ದಾರೆ. ಆದರೆ, ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮೃತ ದೇಹವನ್ನು ಪಾಟ್ನಾಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ. ಮಗನ ಸಾವಿನ ಬಗ್ಗೆ ಪೋಷಕರು ಕೂಡ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಸೌರವ್ ಎಸ್ಸೆಸ್ಸೆಲ್ಸಿ ಓದುತ್ತಿದ್ದಾಗ ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎಂದು ಪೋಷಕರು ಮಾಹಿತಿ ನೀಡಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.
ರಾಜಧಾನಿ ಬೆಂಗಳೂರಿನಲ್ಲಿ ನಕಲಿ ನೋಟುಗಳ ಹಾವಳಿ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ಜೆರಾಕ್ಸ್ ನೋಟ್ ನೀಡಿ ಯಾಮಾರಿಸಿರುವ ಘಟನೆ ಕಾಟನ್ ಪೇಟೆಯಲ್ಲಿ ನಡೆದಿದೆ. ಕಿಡಿಗೇಡಿಗಳು ಜೆರಾಕ್ಸ್ ಮಾಡಿದ 100 ರೂ. ನೋಟು ಕೊಟ್ಟು ವಂಚನೆ ಮಾಡುತ್ತಿದ್ದಾರೆ.
ಇನ್ನೂ ಸಣ್ಣ ಹೋಟೆಲ್, ಬೀಡ ಅಂಗಡಿ, ಜನರಲ್ ಸ್ಟೋರ್ ಹೀಗೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಜೆರಾಕ್ಸ್ ನೋಟುಗಳನ್ನ ನೀಡಿದ್ದು,
ಹೊರಗಿನಿಂದ ಬಂದು ಲಾಡ್ಜ್ನಲ್ಲಿ ಉಳಿದುಕೊಂಡವರು ಈ ಕೃತ್ಯ ಎಸಗಿರಬಹುದು ಎಂಬ ಅನುಮಾನವಿದೆ ಎನ್ನಲಾಗಿದೆ. ಇನ್ನೂ ಹೆಚ್ಚು ಜನರಿರುವ ಸಮಯ ನೋಡಿ ಜೆರಾಕ್ಸ್ ನೋಟು ಕೊಟ್ಟು ಮೋಸ ಮಾಡಿದ್ದಾರೆ ಅಂತ ಸ್ಥಳೀಯರು ಆರೋಪಿಸುತ್ತಿದ್ದು. ಘಟನೆ ಸಂಬಂಧ ಕಾಟನ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ದೂರಿನ ಅನ್ವಯ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.