₹7.11 Crore Robbery Case in bengaluru: ಸಿದ್ದಾಪುರ ATM ದರೋಡೆ ಪ್ರಕರಣ; ಪೊಲೀಸ್ ಪೇದೆಯೇ ಕಿಂಗ್‌ಪಿನ್!

Kannadaprabha News, Ravi Janekal |   | Kannada Prabha
Published : Feb 13, 2026, 05:39 AM IST
Bengaluru ATM Heist Police Constable Annappa Identified as Mastermind in Rs 7 11 Crore Robbery Case

ಸಾರಾಂಶ

₹7.11 Crore Robbery Case in bengaluru: ಬೆಂಗಳೂರಿನಲ್ಲಿ ನಡೆದಿದ್ದ ಎಚ್‌ಡಿಎಫ್‌ಸಿ ಬ್ಯಾಂಕಿನ 7.11 ಕೋಟಿ ರು. ದರೋಡೆ ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಸಿದ್ದಾಪುರ ಪೊಲೀಸರು, ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ಒಂಬತ್ತು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

ಬೆಂಗಳೂರು (ಫೆ.13): ಮೂರು ತಿಂಗಳ ಹಿಂದೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಎಚ್‌ಡಿಎಫ್‌ಸಿ ಬ್ಯಾಂಕಿನ 7.11 ಕೋಟಿ ರು. ದರೋಡೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿದ್ದಾಪುರ ಠಾಣೆ ಪೊಲೀಸರು ಎಸಿಎಂಎಂ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾದ ಒಂಬತ್ತು ಆರೋಪಿಗಳ ವಿರುದ್ಧ ನಗರದ 56ನೇ ಎಸಿಎಂಎಂ-ಸಿಸಿಎಚ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಗುರುವಾರ ಸಲ್ಲಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ- 2023 ರಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್‌ ತಿಳಿಸಿದ್ದಾರೆ.

ದರೋಡೆ, ಅಕ್ರಮ ತಡೆ-ಬಂಧನ, ಸಾಕ್ಷ್ಯ ನಾಶ, ಅಪರಾಧದ ಒಳಸಂಚು, ಬೆದರಿಕೆ ಸೇರಿದಂತೆ ಇತರೆ ಸಂಬಂಧಿತ ವಿಧಿಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಿಗದಿತ ಕಾಲಮಿತಿಯೊಳಗೆ ತನಿಖೆಯನ್ನು ಪೂರ್ಣಗೊಳಿಸಿದ ತನಿಖಾಧಿಕಾರಿಯಾದ ಜಯನಗರ ಉಪ ವಿಭಾಗದ ಎಸಿಪಿ ನಾರಾಯಣಸ್ವಾಮಿ ಮತ್ತು ಅವರ ತಂಡವನ್ನು ಅವರು ಶ್ಲಾಘಿಸಿದ್ದಾರೆ.

1,328 ಪುಟ, 129 ಸಾಕ್ಷ್ಯಗಳು:

ಈ ದರೋಡೆ ಪ್ರಕರಣ ಸಂಬಂಧ ಗೋವಿಂದಪುರ ಠಾಣೆಯ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯಕ್ ಸೇರಿ ಒಂಬತ್ತು ಆರೋಪಿಗಳ ವಿರುದ್ಧ 1328 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಈ ಕೃತ್ಯ ರುಜುವಾತುಪಡಿಸಲು 129 ಪುರಾವೆಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ. ಇದರಲ್ಲಿ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು, ಮಹತ್ವದ ತಾಂತ್ರಿಕ ಸಾಕ್ಷ್ಯಗಳು ಹಾಗೂ ಆರೋಪಿಗಳ ಬೆರಳಚ್ಚು ಸೇರಿದಂತೆ ಇತರೆ ವೈಜ್ಞಾನಿಕ ಸಾಕ್ಷ್ಯಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿಗಳ ವಿವರ:

ಗೋವಿಂಪುರ ಪೊಲೀಸ್ ಠಾಣೆ ಕಾನ್‌ಸ್ಟೇಬಲ್‌ ಅಣ್ಣಪ್ಪ ನಾಯಕ್, ಸಿಎಂಎಸ್‌ ಮಾಜಿ ಉದ್ಯೋಗಿ ಕ್ಸೇವಿಯರ್ ಅಲಿಯಾಸ್ ಪ್ರಜನ್‌, ನೌಕರ ಗೋಪಿ, ಕಮ್ಮನಹಳ್ಳಿ ರವಿ, ಬಾಣಸವಾಡಿ ನವೀನ್‌, ನೆಲ್ಸನ್‌, ರಾಕೇಶ್.

ಪ್ರಕರಣದ ವಿವರ: 

ನ.20 ರಂದು ಜೆ.ಪಿ. ನಗರದಿಂದ ಗೋವಿಂದಪುರ ವ್ಯಾಪ್ತಿಯ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂಗಳಿಗೆ ಹಣ ತುಂಬಿಸಲು ಸಿಎಂಎಸ್ ಸಿಬ್ಬಂದಿ ತೆರಳುತ್ತಿದ್ದರು. ಹಣ ಸಾಗಿಸುವ ಮಾರ್ಗದಲ್ಲಿ ಜಯನಗರದ ಅಶೋಕ ಸ್ತಂಭ ಸಮೀಪ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ ದರೋಡೆ ಮಾಡಿದ್ದರು. ಈ ಕೃತ್ಯ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಕೊನೆಗೆ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಇತರೆಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಅಲ್ಲದೆ ದರೋಡೆಗೊಳಗಾಗಿದ್ದ ಬಹುತೇಕ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಐಷಾರಾಮಿ ಜೀವನದ ದುರಾಸೆ

ಮೋಜು ಮಸ್ತಿ ಜೀವನ ನಡೆಸುವ ದುರುದ್ದೇಶದಿಂದಲೇ ಈ ದರೋಡೆಗೆ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯಕ್ ಹಾಗೂ ಆತನ ಸ್ನೇಹಿತರು ಸಂಚು ರೂಪಿಸಿ ಕಾರ್ಯರೂಪಕ್ಕಿಳಿಸಿದ್ದರು. ಈ ದರೋಡೆ ಹಣದಲ್ಲಿ ಕೆಲವರು ಸಾಲ ತೀರಿಸಲು ಸಹ ಯೋಜಿಸಿದ್ದರು. ಸುಲಭವಾಗಿ ಹಣ ಸಂಪಾದಿಸಿ ಶ್ರೀಮಂತ ಜೀವನ ನಡೆಸುವ ದುರಾಸೆ ಪಟ್ಟಿದ್ದರು ಎಂದು ಆರೋಪ ಪಟ್ಟಿಯಲ್ಲಿ ಪೊಲೀಸರು ಹೇಳಿದ್ದಾರೆ.

ದರೋಡೆ ಪ್ರಕರಣವನ್ನು ಕಾನೂನಿನ ಮೂಲಕ ತಾರ್ಕಿಕ ಅಂತ್ಯ ಕಾಣುವವರೆಗೆ ನ್ಯಾಯಾಲಯದ ವಿಚಾರಣೆಯ ಮೇಲೆ ನಿಗಾ ಇರಿಸಲಾಗುತ್ತದೆ.

-ಲೋಕೇಶ್ ಜಗಲಾಸರ್,\B ಡಿಸಿಪಿ, ದಕ್ಷಿಣ ವಿಭಾಗ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Online Shopping Scam: ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದು ಬ್ಲೇಡ್‌, ಮನೆಗೆ ಬಂದಿದ್ದು ಹಳೆ ಬಟ್ಟೆ!
ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ದರೋಡೆ : ಕೃತ್ಯದ ಕಾರಣ ಬಯಲು- ಪೊಲೀಸ್‌ ಅಣ್ಣಪ್ಪ ಕಿಂಗ್‌ಪಿನ್‌!