
ಬೆಂಗಳೂರು (ಜ.3): ಕಷ್ಟಪಟ್ಟು ದುಡಿದ ಸಂಬಳವನ್ನು ಕೇಳಿದ ತಪ್ಪಿಗೆ ಆಂಬ್ಯುಲೆನ್ಸ್ ಚಾಲಕನೊಬ್ಬನ ಮೇಲೆ ಮಾಲೀಕ ಹಾಗೂ ಮತ್ತೊಬ್ಬ ಚಾಲಕ ಸೇರಿ ಹಲ್ಲೆ ಮಾಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಸಂಬಳ ನೀಡುತ್ತೇನೆ ಎಂದು ನಂಬಿಸಿ ಕರೆಸಿಕೊಂಡ ಮಾಲೀಕ, ಚಾಲಕನ ಮೇಲೆ ನೈಸ್ ರಸ್ತೆಯಲ್ಲಿ ದೌರ್ಜನ್ಯ ಎಸಗಿದ್ದಾನೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಕಿರಣ್ ಎಂದು ಗುರುತಿಸಲಾಗಿದೆ. ಕಿರಣ್ ಅವರು 'ಆಂಬ್ಯೂಲೆನ್ಸ್ ಕೇರ್ ಸರ್ವಿಸ್' ಎಂಬ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ಸಂಬಳ ನೀಡದ ಹಿನ್ನೆಲೆಯಲ್ಲಿ ಕಿರಣ್ ಕೆಲಸ ಬಿಟ್ಟಿದ್ದರು. ಬಾಕಿ ಇರುವ ಸಂಬಳವನ್ನು ಕೇಳಲು ಹೋದಾಗ, ಮಾಲೀಕ ನಾಗರಾಜ್ ಹಾಗೂ ಮತ್ತೊಬ್ಬ ಚಾಲಕ ಮಂಜುನಾಥ್ ಎಂಬುವವರು ಕಿರಣ್ ಮೇಲೆ ನೈಸ್ ರಸ್ತೆಯ ಟೋಲ್ ಬಳಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಈ ಭೀಕರ ಹಲ್ಲೆಯ ದೃಶ್ಯಗಳನ್ನು ಅಲ್ಲಿಯೇ ಇದ್ದ ಮತ್ತೊಬ್ಬ ಚಾಲಕ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ.
ಸಂಬಳದ ವಿಚಾರವಾಗಿ ನಿನ್ನೆಯಷ್ಟೇ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ಕಿರಣ್ ಮತ್ತು ಮಾಲೀಕ ನಾಗರಾಜ್ ನಡುವೆ ಗಲಾಟೆಯಾಗಿತ್ತು. ಬಳಿಕ ಈ ಪ್ರಕರಣ ವಿಧಾನಸೌಧ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಪೊಲೀಸರು ಇಬ್ಬರ ನಡುವೆ ರಾಜಿ ಸಂಧಾನ ನಡೆಸಿ ಕಳಿಸಿದ್ದರು. ಆದರೆ, ಪೊಲೀಸರ ಮುಂದೆ ಸಂಬಳ ಕೊಡಲು ಒಪ್ಪಿಕೊಂಡಿದ್ದ ಮಾಲೀಕ ನಾಗರಾಜ್, ಇಂದು 'ಸಂಬಳ ಕೊಡುತ್ತೇನೆ ಬಾ' ಎಂದು ನೈಸ್ ರಸ್ತೆಗೆ ಕರೆಸಿಕೊಂಡು ತನ್ನ ಅಸಲಿ ರೂಪ ತೋರಿಸಿದ್ದಾನೆ.
'ಸಂಬಳ ಕೇಳಿದರೆ ಪ್ರಾಣ ಬೆದರಿಕೆ ಹಾಕ್ತಾರೆ' ಎಂದು ಸಂತ್ರಸ್ತ ಕಿರಣ್ ಅಳಲು
ಹಲ್ಲೆಗೊಳಗಾದ ಕಿರಣ್ ತಮ್ಮ ನೋವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. 'ನನಗೆ ಬರಬೇಕಾದ ಎರಡು ತಿಂಗಳ ಸಂಬಳವನ್ನು ಕೇಳಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಕೆಲಸಕ್ಕೆ ಸೇರಿಸಿಕೊಳ್ಳುವಾಗ ಕೈಕಾಲು ಹಿಡಿದು ಕರೆಸಿಕೊಳ್ಳುತ್ತಾರೆ, ಆದರೆ ದುಡಿದ ಮೇಲೆ ಹಣ ಕೇಳಿದರೆ ಪ್ರಾಣ ಬೆದರಿಕೆ ಹಾಕುತ್ತಾರೆ. ನಿನ್ನೆ ಪೊಲೀಸ್ ಠಾಣೆಯಲ್ಲಿ ಸಂಧಾನವಾಗಿದ್ದರೂ, ಇಂದು ಮತ್ತೆ ಮೋಸದಿಂದ ಕರೆಸಿಕೊಂಡು ಹೊಡೆದಿದ್ದಾರೆ, ಎಂದು ಕಿರಣ್ ವಿವರಿಸಿದ್ದಾರೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ನೈಸ್ ರಸ್ತೆಯ ಟೋಲ್ ಬಳಿ ನಡೆದ ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್ ಈಗ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಲ್ಲೆಯ ವೀಡಿಯೋ ಸಾಕ್ಷ್ಯವಾಗಿ ಲಭ್ಯವಿರುವುದರಿಂದ ಪೊಲೀಸರು ನಾಗರಾಜ್ ಹಾಗೂ ಮಂಜುನಾಥ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ದುಡಿದ ಸಂಬಳಕ್ಕಾಗಿ ಡ್ರೈವರ್ ಒಬ್ಬರು ಇಂತಹ ಸ್ಥಿತಿ ಎದುರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ