• ಪ್ರವಾದಿ ಮೊಹಮ್ಮದ್‌ರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ
• ಬೆಳಗಾವಿಯ ಫೋರ್ಟ್ ರಸ್ತೆಯಲ್ಲಿ ನೂಪುರ್ ಪ್ರತಿಕೃತಿ ನೇತು ಹಾಕಿದ್ದ ಕಿಡಿಗೇಡಿಗಳು
• ಟೆಕ್ನಿಕಲ್ ಎವಿಡೆನ್ಸ್ ಆಧಾರದಲ್ಲಿ ಮೂವರನ್ನ ವಶಕ್ಕೆ ಪಡೆದು ವಿಚಾರಣೆ
ಬೆಳಗಾವಿ, (ಜೂನ್.12): ನೂಪುರ್ ಶರ್ಮಾರ ಪ್ರತಿಕೃತಿಯನ್ನು ನಡುರಸ್ತೆಯಲ್ಲೇ ಎರಡು ಬದಿಯ ಕಟ್ಟಡಗಳಿಗೆ ಹಗ್ಗಕಟ್ಟಿ ನೇತುಹಾಕಿದ್ದ ಮೂರು ಕಿಡಿಗೇಡಿಗಳನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೇಶಪಾಂಡೆ ಗಲ್ಲಿಯ ನಿವಾಸಿಗಳಾದ ಮೊಹಮ್ಮದ್ ಶೋಯೆಬ್ ಅಬ್ದುಲ್ ಗಫರ್ ಹಕೀಮ್, ಅಮನ್ ಮೊಕಾಶಿ ಹಾಗೂ ಅರ್ಬಾಜ್ ಮೊಕಾಶಿ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಳಗಾವಿಯ ದೇಶಪಾಂಡೆ ಗಲ್ಲಿಯ ಫೋರ್ಟ್ ರಸ್ತೆಯ ಬಳಿ ಮಸೀದಿಯ ಕೂಗಳತೆ ದೂರದಲ್ಲೇ ನೂಪುರ್ ಶರ್ಮಾ ಪ್ರತಿಕೃತಿ ನೇತುಹಾಕಲಾಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಜೂನ್ 9ರ ರಾತ್ರಿ 10.54ರ ಸುಮಾರಿಗೆ ದೇಶಪಾಂಡೆ ಗಲ್ಲಿ ಫೋರ್ಟ್ ರಸ್ತೆ ಬದಿಯ ಬಹುಮಹಡಿ ಕಟ್ಟಡಕ್ಕೆ ನುಗ್ಗಿದ ಮೂವರು ಆರೋಪಿಗಳು ರಸ್ತೆಯ ಎರಡು ಬದಿಯ ಬಹುಮಹಡಿ ಕಟ್ಟಡಗಳ ಟೆರಸ್ ಮೇಲೆ ತೆರಳಿ ಹಗ್ಗ ಕಟ್ಟಿ ಬಳಿಕ ನೂಪುರ್ ಶರ್ಮಾ ಭಾವಚಿತ್ರ ಇದ್ದ ಪ್ರತಿಕೃತಿ ನೇತು ಹಾಕಿದ್ದರು.
ನೂಪುರ್ ಶರ್ಮ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ, ಕರ್ನಾಟಕದಲ್ಲೂ ಹಿಂಸಾಚಾರ
ಪ್ರವಾದಿ ಮೊಹಮ್ಮದ್‌ರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಬಿಜೆಪಿಯಿಂದ ಉಚ್ಛಾಟಿತಗೊಂಡಿದ್ದ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ಅಷ್ಟೇ ಅಲ್ಲದೇ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಆಕ್ರೋಶವಾಗಿತ್ತು. ದೇಶದ ಹಲವೆಡೆ ಹಿಂಸಾಚಾರ ಆಗಿತ್ತು. ಇದರಿಂದ ಪ್ರೇರೇಪಿತಗೊಂಡು ಮೂವರು ಆರೋಪಿಗಳು ಈ ಕೃತ್ಯವೆಸಗಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಪೊಲೀಸರು
ಜೂನ್ 10ರ ಬೆಳಗ್ಗೆ ರಸ್ತೆ ಮಧ್ಯೆ ನೂಪುರ್ ಶರ್ಮಾ ಪ್ರತಿಕೃತಿ ನೇತು ಹಾಕಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ್ದ ಮಾರ್ಕೆಟ್ ಠಾಣೆ ಪೊಲೀಸರು ಪ್ರತಿಕೃತಿ ತೆರವುಗೊಳಿಸಿದ್ದರು. ಈ ಬಗ್ಗೆ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿತ್ತು. ಮಾರ್ಕೆಟ್ ಠಾಣೆ ಪಿಎಸ್ಐ ವಿಠ್ಠಲ್ ಹಾವಣ್ಣವರ್ ನೀಡಿದ ದೂರಿನ ಮೇರೆಗೆ FIR ದಾಖಲಾಗಿತ್ತು. IPC ಸೆಕ್ಷನ್ 1860(u/s - 153, 109), ಕರ್ನಾಟಕ ಓಪನ್ ಪ್ಲೇಸ್ ಡಿಸ್ಫಿಗರ್ಮೆಂಟ್ ಆಕ್ಟ್ 1951 & 1981 (U/s-3,4)ನಡಿ ಕೇಸ್ ದಾಖಲಾಗಿತ್ತು. ದುರುದ್ದೇಶದಿಂದ ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿ ಪ್ರತಿಕೃತಿ ತೂಗು ಹಾಕಿ ಉದ್ದೇಶಪೂರ್ವಕವಾಗಿ ನಗರದಲ್ಲಿ ದೊಂಬಿ ಮಾಡಿ ಸಾರ್ವಜನಿಕ ಶಾಂತತಾ ಭಂಗಪಡಿಸುವ ಹುನ್ನಾರ ಮಾಡಿದ ಆರೋಪದಡಿ ಸುಮೋಟೋ ಕೇಸ್ ದಾಖಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.
ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಮುತಾಲಿಕ್
ಇನ್ನು ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸರ್ಕಾರ ಹಾಗೂ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದರು. ನೈಟ್ ಬೀಟ್ ಪೊಲೀಸರು ಏನ್ ಮಾಡ್ತಿದ್ರು. ಸಿಸಿ ಕ್ಯಾಮರಾ ಪರಿಶೀಲನೆ ಮಾಡಿ ಬಂಧಿಸಲಾಗಲ್ವಾ ಅಂತಾ ಪ್ರಶ್ನಿಸಿದ್ದರು. ಮತ್ತೊಂದೆಡೆ ನೂಪುರ ಶರ್ಮಾ ಹೇಳಿಕೆ ಖಂಡಿಸಿ ಬೆಳಗಾವಿ ಡಿಸಿ ಕಚೇರಿ ಎದುರು ಎಸ್‌ಡಿಪಿಐ ಪ್ರತಿಭಟನೆ ಸಹ ನಡೆದಿತ್ತು. ನೂಪುರ್ ಶರ್ಮಾ ಬೆಂಬಲಿಸಿ ಮಾತನಾಡಿದ್ದ ಪ್ರಮೋದ್ ಮುತಾಲಿಕ್, ನೂಪುರ್ ಶರ್ಮಾ ಸತ್ಯವನ್ನೇ ಹೇಳಿದ್ದಾರೆ. ನೂಪುರ್ ಶರ್ಮಾರನ್ನು ಉಚ್ಚಾಟಿಸಿರುವ ಬಿಜೆಪಿ ಕ್ರಮವನ್ನು ಖಂಡಿಸುವೆ. ಹೇಳಿಕೆ ಸತ್ಯವಾದರೂ ಸಮರ್ಥನೆ ಮಾಡಿಕೊಳ್ಳಲಿಲ್ಲ. ಯಾರದೋ ಒತ್ತಡಕ್ಕೆ ಮಣಿದು ಉಚ್ಚಾಟನೆ ಮಾಡಿದ್ದು ಅಕ್ಷಮ್ಯ ಅಪರಾಧ. ನೂಪುರ್ ಅತ್ಯಂತ ಪ್ರಖರ ವಾಗ್ಮಿ ಆಗಿದ್ದರು. ವಿರೋಧಿಗಳಿಗೆ ಸಮರ್ಪಕ ಉತ್ತರ ಕೊಡ್ತಿದ್ದರು. ಯಾವುದೋ ಒಂದು ಹೇಳಿಕೆಗೆ ಉಚ್ಚಾಟನೆ ಮಾಡಿದ್ದು ಸರಿಯಲ್ಲ. ಅಧರ್ಮಿಗಳನ್ನು, ಅನ್ಯಾಯ ಅಸತ್ಯವನ್ನು ಮೇಲೇತ್ತುದ್ದೀರೆಂದಿ ಬಿಜೆಪಿವರಿಗೆ ಹೇಳ್ತೇನೆ. ಖತಾರ್, ಇರಾಕ್, ಅರಬ್ ಸೇರಿ ಮುಸ್ಲಿಂ ರಾಷ್ಟ್ರಗಳು ವಿರೋಧ ಮಾಡಿದ್ದಾರೆ. ಮುಸ್ಲಿಂ ರಾಷ್ಟ್ರಗಳಿಗೆ ನಮ್ಮ ದೇಶದಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ನೂಪುರ್ ಶರ್ಮಾ ಹೇಳಿಕೆ ವಿರೋಧಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆ ಹಾಗೂ ಬೆಳಗಾವಿಯಲ್ಲಿ ನೂಪುರ ಶರ್ಮಾ ಪ್ರತಿಕೃತಿ ನೇತು ಹಾಕಿದ್ದ ವಿಚಾರಕ್ಕೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, 'ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮಾಡಿದ್ದು, ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಹಲವು ಸೂಚನೆ ಕೊಟ್ಟಿದ್ದೇನೆ.ಕಟ್ಟೆಚ್ಚರ ಪ್ರಾರಂಭ ಆಗಿದ್ದು, ಕೆಎಸ್‌ಆರ್‌ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ. ಕರ್ನಾಟಕದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತೇವೆ' ಎಂದಿದ್ದರು.
ಬೆಳಗಾವಿ ನಗರದಾದ್ಯಂತ ಖಾಕಿ ಹೈ ಅಲರ್ಟ್
ಇನ್ನು ನೂಪುರ ಶರ್ಮಾ ಹೇಳಿಕೆಯ ಕಿಚ್ಚು ಬೆಳಗಾವಿಯಲ್ಲಿ ಹೊತ್ತಿಕೊಳ್ಳುತ್ತಿದ್ದಂತೆ ಬೆಳಗಾವಿ ಪೊಲೀಸರು ಅಲರ್ಟ್ ಆಗಿದ್ದಾರೆ. ಬೆಳಗಾವಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದು, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.