Belagavi Crime News: ಪ್ರೇಯಸಿಯನ್ನು ಕೊಂದು ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಬಸವ ಕಾಲೋನಿಯಲ್ಲಿ ನಡೆದಿದೆ.
ಬೆಳಗಾವಿ (ಜು. 22): ಪ್ರೆಯಸಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಳಗಾವಿಯ ಬಸವ ಕಾಲೋನಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಗ್ರಾಮದ ನಿವಾಸಿ ರಾಮಚಂದ್ರ ತೆಣಗಿ ಹಾಗೂ ಮದ್ಲೂರು ಗ್ರಾಮದ ರೇಣುಕಾ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಂದೇ ಸಮುದಾಯಕ್ಕೆ ಸೇರಿದ ಇಬ್ಬರ ಕುಟುಂಬಗಳು ಪರಿಚಯಸ್ಥರು ಆಗಿದ್ದರು. ಯುವತಿ ರೇಣುಕಾ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದು ಬೆಳಗಾವಿಯ ಬಸವ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಇನ್ನು ಯುವಕ ರಾಮಚಂದ್ರ ತೆಣಗಿ ಕಿತ್ತೂರು ರಾಣಿ ಚನ್ನಮ್ಮ ವಿವಿಯಲ್ಲಿ ಎಂಎ ವ್ಯಾಸಂಗ ಮಾಡ್ತಿದ್ದ.
ನಿನ್ನೆ ರಾತ್ರಿ ರೇಣುಕಾ ಮನೆಗೆ ಬಂದಿದ್ದ ರಾಮಚಂದ್ರ ತೇಣಗಿ ಕತ್ತು ಹಿಸುಕಿ ರೇಣುಕಾ ಹತ್ಯೆ ಮಾಡಿದ್ದಾನೆ. ಬಳಿಕ ಡೆತ್‌ನೋಟ್ ಬರೆದು ತನ್ನ ಮಾವನಿಗೆ ಮೆಸೆಜ್ ಮಾಡಿ ಫ್ಯಾನ್ ಗೆ ವಯರ್ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂದು ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಠಾಣೆ ಪೊಲೀಸರು ಮೃತದೇಹಗಳನ್ನು ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರ ಮಾಡಿದ್ದಾರೆ.
ದುರಂತಕ್ಕೆ ಕಾರಣವಾಯಿತಾ ಲವ್ ಬ್ರೇಕಪ್?: ಇನ್ನು ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿರುವ ರಾಮಚಂದ್ರ "ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಇಬ್ಬರ ನಡುವಿನ ವಿರಸವೇ ಸಾವಿಗೆ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ" ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾನು ಅವಳನ್ನು ಲವ್ ಮಾಡಿ ಹುಚ್ಚ ಆಗಿದ್ದೆ. ಬ್ರೇಕ್ ಅಪ್ ಮಾಡಿ ಮರೆತು ಬಿಡು ಅಂದಳು. ಪ್ರೀತಿ ಒಂದು ಕೆಟ್ಟ ಕನಸು ಎಂದು ಮರೆತುಬಿಡು ಎಂದಳು. ನನ್ನ ಟೈಂ, ಜೀವನ ಎರಡು ಹಾಳಾಗಲು ಯುವತಿ ಕಾರಣ ಎಂದು ಡೆತ್ ನೋಟ್‌ನಲ್ಲಿ ಯುವಕ ಉಲ್ಲೇಖಿಸಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ನೇಣು ಬಿಗಿದುಕೊಂಡು ಸ್ಟಾಫ್ ನರ್ಸ್ ಆತ್ಮಹತ್ಯೆ
ನನ್ನ ಮಗ ಏನೂ ಹೇಳಿರಲಿಲ್ಲ: ಯುವಕನ ತಂದೆ ಕಣ್ಣೀರು: ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಇಬ್ಬರೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ವೇಳೆ ಮಾತನಾಡಿದ ಆತ್ಮಹತ್ಯೆ ಮಾಡಿಕೊಂಡ ರಾಮಚಂದ್ರ ತಂದೆ ಬಸವಂತ ತೆಣಗಿ ಕಣ್ಣೀರಿಡುತ್ತಾ, 'ನನ್ನ ಮಗ ಏನೂ ಹೇಳಿರಲಿಲ್ಲ, ಹೇಳಿದ್ರೆ ಏನಾದರೂ ಮಾಡ್ತಿದ್ವಿ. ಮಂಗಳವಾರ ಊರಿನಿಂದ ಬೆಳಗಾವಿಗೆ ಬಂದಿದ್ದ. ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಹಾಸ್ಟೆಲ್ ನಲ್ಲಿ ಇರ್ತಿದ್ದ. ಎಂಎ ವ್ಯಾಸಂಗ ಮಾಡ್ತಿದ್ದ" ಎಂದು ಹೇಳಿದ್ದಾರೆ
"ಎಎಸ್ಐ ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿದ್ದ. ಲಿಖಿತ ಪರೀಕ್ಷೆಗೆ ಎಂದು ಸಿಇಟಿ ಪರೀಕ್ಷೆಗೆ ಓದುತ್ತಿದ್ದ. ಪೊಲೀಸ್ ಹುದ್ದೆಗೆ ಸೇರಬೇಕು ಎಂದು ಓದುತ್ತಿದ್ದ. ಆ ಹುಡುಗಿ ಸಹ ನಮ್ಮ ಸಮಯದಾಯದವಳೇ, ಪರಿಚಯಸ್ಥರು. ಅವಳಾದರೂ ನಮ್ಮ ಬಳಿ ಹೇಳಬೇಕಿತ್ತು. ನಿನ್ನೆ ಸಂಜೆ 4 ಗಂಟೆಗೆ ಫೋನ್ ಹಚ್ಚಿದಾಗ ವಾಪಸ್ ಮಾಡ್ತೀನಿ ಎಂದಿದ್ದ. ರಾತ್ರಿ ತನ್ನ ಮಾವನಿಗೆ ಏನೋ ಮೆಸೆಜ್ ಹಾಕಿದ್ದನಂತೆ.ಹೇಗೆ ಏನಾಯ್ತು ಎಂಬುದು ದೇವರಿಗೆ ಗೊತ್ತು" ಎಂದು ತಂದೆ ಬಸವಂತ ತೆಣಗಿ ಕಣ್ಣೀರು ಹಾಕಿದರು.
ಇನ್ನು ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಆತ್ಮಹತ್ಯೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದ್ದಾರೆ.