BIG BREAKING, Police arrests Bengaluru acid attack accused: ಬೆಂಗಳೂರಿನಲ್ಲಿ ಪ್ರೀತಿ ನಿರಾಕರಿಸಿದ್ದ ಕಾರಣಕ್ಕೆ ಯುವತಿಯ ಮೇಲೆ ಆಸಿಡ್ ದಾಳಿ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್‌ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಬೆಂಗಳೂರು (ಮೇ 13): ರಾಜ್ಯ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ್ದ ಮತ್ತು ಇಡೀ ರಾಜ್ಯದ ಮನಕಲಕುವಂತೆ ಮಾಡಿದ ಆಸಿಡ್ ದಾಳಿ ಪ್ರಕರಣದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಪ್ರೀತಿಸಲು ಒಪ್ಪಲಿಲ್ಲ ಎಂಬ ಒಂದೇ ಕಾರಣಕ್ಕೆ ಮುಖಕ್ಕೆ ಆಸಿಡ್ ಎರಚಿ ತಲೆಮರೆಸಿಕೊಂಡಿದ್ದ ನಾಗೇಶ್‌ನನ್ನು ಪೊಲೀಸರು ತಮಿಳುನಾಡಿನಲ್ಲಿ ಇಂದು ಬಂಧಿಸಿದ್ದಾರೆ. ಈ ಮಾಹಿತಿ ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ EXCLUSIVE ಆಗಿ ಲಭ್ಯವಾಗಿದೆ. ಕೃತ್ಯ ನಡೆಸಿದ ತಕ್ಷಣ ಬೆಂಗಳೂರಿಂದ ಕಾಲುಕಿತ್ತಿದ್ದ ನಾಗೇಶ್ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಸ್ವಾಮೀಜಿಯ ವೇಶಧರಿಸಿಕೊಂಡಿದ್ದ. ಪೊಲೀಸರಿಗೆ ತಮಿಳುನಾಡಿನಲ್ಲಿ ಈತ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆದರೆ ಆತ ಕಾವಿಧಾರಿಯ ರೂಪದಲ್ಲಿ ಇದ್ದಾನೆ ಎಂಬ ಮಾಹಿತಿ ಇರಲಿಲ್ಲ. ಆದರೆ ಅಲ್ಲಿನ ಸ್ಥಳೀಯರಿಗೆ ನಾಗೇಶ್ ಹಾವಭಾವಗಳು ಮತ್ತು ಚಲನವಲನಗಳನ್ನು ನೋಡಿ ಸಂಶಯ ಬಂದಿತ್ತು. ಕರ್ನಾಟಕ ಪೊಲೀಸರು ಹೋದಾಗ, ಸ್ಥಳೀಯರು ಮಾಹಿತಿ ನೀಡಿದರು. ಮಾಹಿತಿ ಬೆನ್ನುಹತ್ತಿದ ಪೊಲೀಸರು ನಾಗೇಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ?:
ಪ್ರೀತಿ ನಿರಾಕರಿಸಿದ ಕಾರಣಕ್ಕೆ ಪ್ರೀತಿಸಿದ ಹುಡುಗಿಯ ಮೇಲೆ ಆಸಿಡ್ ದಾಳಿ ಮಾಡಿರುವ ದುರಂತ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿತ್ತು. 23 ವರ್ಷದ ಸಂತ್ರಸ್ಥೆಯ ಮೇಲೆ ಸುಂಕದಕಟ್ಟರ ಮುತ್ತೂಟು ಫಿನ್‌ಕಾರ್ಪ್ ಬಳಿ ಹುಚ್ಚು ಪ್ರೇಮಿ ನಾಗೇಶ್ ಆಸಿಡ್ ದಾಳಿ ನಡೆಸಿದ್ದ. ಮಾಹಿತಿಯ ಪ್ರಕಾರ ನಾಗೇಶ್ ಯುವತಿಯನ್ನು ಹಲವು ದಿನಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ. ಎಲ್ಲಿ ಹೋದರೂ ಹಿಂದೆ ಹಿಂದೆಯೇ ಸುತ್ತುತ್ತಿದ್ದ. ಹುಡುಗಿ ತನಗೆ ಇಷ್ಟವಿಲ್ಲ ಎಂದು ಎಷ್ಟು ಬಾರಿ ಹೇಳಿದರೂ ಕೇಳಲು ನಾಗೇಶ್ ಸಿದ್ಧನಿರಲಿಲ್ಲ. ಕಡೆಯಬಾರಿಗೆ ಪ್ರೀತಿಸುತ್ತೀಯಾ ಇಲ್ಲವಾ ಎಂದು ಧಮಕಿ ಹಾಕಿದ್ದಾನೆ, ಹುಡುಗಿ ನಿರಾಕರಿಸಿದಾಗ ಆಸಿಡ್ ಎರಚಿದ್ದಾನೆ ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿವೆ. ಯುವತಿ ಇಂದು (ಗುರುವಾರ) ಬೆಳಗ್ಗೆ ಕಚೇರಿಗೆ ತೆರಳಲು ಮುತ್ತೂಟು ಫಿನ್‌ಕಾರ್ಪ್ ಬಳಿ ಹೋದಾಗ ವಿಕೃತ ಪ್ರೇಮಿ ನಾಗೇಶ್ ಈ ಕೃತ್ಯ ಎಸಗಿದ್ದ.
ಸದ್ಯ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಇಂದು ಸಂತ್ರಸ್ಥೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ. ಘಟನೆಯ ಬಳಿಕ ನಾಗೇಶ್ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಹಲವು ವಿಶೇಷ ತಂಡಗಳನ್ನು ಸಹ ರಚಿಸಲಾಗಿತ್ತು. ಈ ಸಂಬಂಧ ಈಗಾಗಲೇ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಏಳು ವರ್ಷಗಳ ಪ್ರೀತಿ:
ಇದು ಒಂದೆರಡು ದಿನದ ಪ್ರೇಮ ನಿವೇದನೆಯಲ್ಲ, ಬರೋಬ್ಬರಿ ಏಳು ವರ್ಷಗಳಿಂದ ಪ್ರೀತಿಸುವಂತೆ, ಮದುವೆಯಾಗುವಂತೆ ನಾಗೇಶ್ ಪೀಡಿಸುತ್ತಿದ್ದ. ಮತ್ತೆ ಮದುವೆಯಾಗುವಂತೆ ಆತ ಕೇಳಿದಾಗ, ಇಬ್ಬರ ನಡುವೆ ಜಗಳವಾಗಿದೆ. ಹುಡುಗಿ ಸಾಧ್ಯವೇ ಇಲ್ಲವೆಂದು ಹೇಳಿದ್ದಾಳೆ. ಇದಾದ ನಂತರ ಇಂದು ಮುಂಜಾನೆ ನಾಗೇಶ್ ಆಸಿಡ್ ದಾಳಿ ಮಾಡಿದ್ದ.
ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಏಷಿಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದರು. "ಯುವತಿ ಮುತ್ತೂಟ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಎಂಟುವರೇ ಸುಮಾರಿಗೆ ಯುವತಿ ತಂದೆ ಬೈಕ್ ನಲ್ಲಿ ಕರೆದುಕೊಂಡು ಬಂದು ಡ್ರಾಪ್ ಮಾಡಿ ಹೋಗಿದ್ದರು. ಯುವತಿ ತಂದೆ ಡ್ರಾಪ್ ಮಾಡಿ ಹೋದ ಕೆಲವೇ ಕ್ಷಣದಲ್ಲಿ ಯುವತಿ ಮೇಲೆ ಆರೋಪಿ ನಾಗೇಶ್ ಆಸಿಡ್ ಎರಚಿದ್ದಾನೆ. ಆರೋಪಿ ನಾಗೇಶ್ ಮೊದಲೇ ಆಸಿಡ್ ಹಾಕಲು ಸಿದ್ದತೆ ಮಾಡ್ಕೊಂಡು ಬಂದಿದ್ದ. ಸದ್ಯ ಯುವತಿಯ ಪರಿಸ್ಥಿತಿ ಗಂಭೀರವಾಗಿದೆ. ಒಂದು ವಾರಗಳ ಕಾಲ ತ್ರೀವ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ," ಎಂದು ಘಟನೆ ನಡೆದ ದಿನ (ಏಪ್ರಿಲ್ 28) ದಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಹಣಕ್ಕಾಗಿ ಮಗುವನ್ನೇ ಮಾರಾಟ ಮಾಡಿದ ತಾಯಿ: ಐವರ ಬಂಧನ
ಸಂತ್ರಸ್ಥೆಯ ತಂದೆ ಈ ಹಿಂದೆ ನೀಡಿದ ಹೇಳಿಕೆ ಪ್ರಕಾರ, ಅವರು ಬೈಕ್ ನಲ್ಲಿ ಆಫೀಸ್ ಬಿಟ್ಟು ಬಂದಿದ್ದಾರೆ. ಬಿಟ್ಟು ಬಂದು ಗ್ಯಾಸ್ ತೆಗೆದುಕೊಳ್ಳಲು ಅಂಗಡಿಗೆ ಹೋದಾಗ ಮಗಳು ಕರೆ ಮಾಡಿದ್ದಾಳೆ. "ನಾಗೇಶ್ ಆಸಿಡ್ ಹಾಕಿದ್ದಾನೆ ಅಂತ ಕಾಲ್ ಮಾಡಿದ್ಲು. ತಕ್ಷಣ ಸ್ಥಳಕ್ಕೆ ಹೋಗಿ ಮಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇನೆ," ಎಂದು ತಮ್ಮ ಅಳಲು ತೋಡಿಕೊಂಡಿದ್ದರು.
ಅಣ್ಣ ಅಂದಿದ್ದೇ ತಪ್ಪಾಯ್ತು:
ಸಂತ್ರಸ್ಥ ಯುವತಿ ಮತ್ತು ನಾಗೇಶ್‌ಗೆ ಪರಿಚಯವೇನೋ ಇತ್ತು. ಆತ ಯಾವಾಗಲೂ ಪ್ರೀತಿಸು ಅನ್ನುತ್ತಿದ್ದ, ಆದರೆ ಈಕೆ ನೀನು ನನ್ನ ಅಣ್ಣನಂತೆ ಅಂದುಬಿಟ್ಟಿದ್ದಳು. ಇದೇ ಕಾರಣಕ್ಕೆ ಅವನ ಕೋಪ ಹೆಚ್ಚಾಗಿತ್ತು. ಯುವತಿ ಹೆಗ್ಗನಹಳ್ಳಿ ನಿವಾಸಿ. ಅವರ ಮನೆಯ ಪಕ್ಕದಲ್ಲೇ ನಾಗೇಶ್ ಕೂಡ ಬಾಡಿಗೆ ಮನೆಯಲ್ಲಿದ್ದ. ಹುಡುಗಿ ಎಂ ಕಾಂ ವಿದ್ಯಾಭ್ಯಾಸ ಮುಗಿಸಿ ಮುತ್ತೂಟು ಫಿನ್‌ಕಾರ್ಪ್ ಸೇರಿಕೊಂಡಿದ್ದಳು. 9 ತಿಂಗಳಿಂದ ಹಿಂದಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದಳು.