ದೇಶದಲ್ಲಿ ನಿತ್ಯ 381 ಜನರ ಆತ್ಮಹತ್ಯೆ, ಕರ್ನಾಟಕ ನಂ.5!

By Suvarna NewsFirst Published Sep 2, 2020, 9:07 AM IST
Highlights

ಆತ್ಮಹತ್ಯೆಯಲ್ಲಿ ಕರ್ನಾಟಕ ನಂ.5!| 11288 ಮಂದಿ ಸಾವು| ದೇಶದಲ್ಲಿ ನಿತ್ಯ 381 ಜನರ ಆತ್ಮಹತ್ಯೆ| 53% ಜನರ ಆಯ್ಕೆ ನೇಣು| ಪುರುಷರೇ ಹೆಚ್ಚು ಸಾವಿಗೆ ಶರಣು

ನವದೆಹಲಿ(ಸೆ.02): ಭಾರತದಲ್ಲಿ ಪ್ರತಿನಿತ್ಯ ಸರಾಸರಿ 381 ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ ಎಂಬ ಕಳವಳಕಾರಿ ಸಂಗತಿ ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿ- ಅಂಶಗಳಿಂದ ಬೆಳಕಿಗೆ ಬಂದಿದೆ. ದೇಶದಲ್ಲಿ ಸಾವಿಗೆ ಶರಣಾಗುವವರ ಪೈಕಿ ಶೇ.50ಕ್ಕಿಂತ ಹೆಚ್ಚಿನವರ ಆಯ್ಕೆ ನೇಣು ಬಿಗಿದುಕೊಳ್ಳುವುದಾಗಿದೆ ಎಂದು ಎನ್‌ಸಿಆರ್‌ಬಿ ವರದಿ ತಿಳಿಸಿದೆ.

2019ರಲ್ಲಿ ಆತ್ಮಹತ್ಯೆ ಪ್ರಮಾಣ ಶೇ.3.4ರಷ್ಟುಏರಿಕೆ ಆಗಿದ್ದು, 1,39,123 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 18,916 ಮಂದಿ ಆತ್ಮಹತ್ಯೆಗೆ ಶರಣಾದರೆ, ನಂತರದ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 13,493 ಮಂದಿ, ಪಶ್ಚಿಮ ಬಂಗಾಳದಲ್ಲಿ 12,665 ಮಂದಿ, ಮಧ್ಯ ಪ್ರದೇಶದಲ್ಲಿ 12,457 ಮಂದಿ, ಕರ್ನಾಟಕದಲ್ಲಿ 11,288 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಐದು ರಾಜ್ಯಗಳಲ್ಲಿ ಶೇ.49.5ರಷ್ಟುಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಈ ಪೈಕಿ ಕರ್ನಾಟಕ ಶೇ. 8.1 ಪಾಲು ಹೊಂದಿದೆ.

ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳಿಗೆ ಕೌಟುಂಬಿಕ ಸಮಸ್ಯೆಯೇ(ಶೇ.32.4) ಪ್ರಮುಖ ಕಾರಣವಾಗಿದೆ. ಮದುವೆ ಸಂಬಂಧಿತ ಕಾರಣಗಳಿಗೆ ಶೇ.5.5ರಷ್ಟುಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.68.4 ಮಂದಿ ಪುರುಷರಾಗಿದ್ದರೆ ಶೇ.62.5ರಷ್ಟುಮಂದಿ ಮಹಿಳೆಯರಾಗಿದ್ದಾರೆ. ಆತ್ಮಹತ್ಯೆಯ ವಿಧಾನದಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದವರ ಪ್ರಮಾಣ ಶೇ.53.6ರಷ್ಟಿದ್ದರೆ, ವಿಷ ಸೇವಿಸಿದವರ ಪ್ರಮಾಣ ಶೇ.25.8ರಷ್ಟಿದೆ.

ರಸ್ತೆ ಅಪಘಾತದಲ್ಲಿ 1.54 ಲಕ್ಷ ಮಂದಿ ಬಲಿ:

ಇದೇ ವೇಳೆ ಎನ್‌ಸಿಆರ್‌ಬಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ 2019ರಲ್ಲಿ 4,37,396 ರಸ್ತೆ ಅಪಘಾತಗಳು ಸಂಭವಿಸಿದ್ದು, 1,54,732 ಮಂದಿ ಮೃತಪಟ್ಟಿದ್ದಾರೆ. ಶೇ.59.6ರಷ್ಟುರಸ್ತೆ ಅಪಘಾತಗಳಿಗೆ ಅತಿವೇಗವೇ ಕಾರಣ ಎಂದು ವರದಿ ತಿಳಿಸಿದೆ.

5 ರಾಜ್ಯಗಳಲ್ಲೇ ಹೆಚ್ಚು

1. ಮಹಾರಾಷ್ಟ್ರ 18,916

2. ತಮಿಳುನಾಡು 13,493

3. ಪಶ್ಚಿಮ ಬಂಗಾಳ 12,665

4. ಮಧ್ಯಪ್ರದೇಶ 12,457

5. ಕರ್ನಾಟಕ 11,288

click me!