ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಲೆತ್ನಿಸಿದ ಖತರ್ನಾಕ್‌ ಚಡ್ಡಿಗ್ಯಾಂಗ್ ಮೇಲೆ ಮಂಗಳೂರಿನಲ್ಲಿ ಶೂಟೌಟ್

By Gowthami KFirst Published Jul 10, 2024, 2:13 PM IST
Highlights

ಮಂಗಳೂರಿನಲ್ಲಿ ಆತಂಕ ಹುಟ್ಟಿಸಿದ್ದ ಚಡ್ಡಿ ಗ್ಯಾಂಗ್  ಅನ್ನು  ಪೊಲೀಸರು ಮಂಗಳವಾರ ಬಂಧಿಸಿದ್ದರು. ಆದರೆ ಬಂಧಿತ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಶೂಟ್‌ ಔಟ್‌ ನಡೆದಿದೆ. 

ದಕ್ಷಿಣ ಕನ್ನಡ (ಜು.10): ಮಂಗಳೂರಿನಲ್ಲಿ ಆತಂಕ ಹುಟ್ಟಿಸಿದ್ದ ಚಡ್ಡಿ ಗ್ಯಾಂಗ್  ಅನ್ನು  ಪೊಲೀಸರು ಮಂಗಳವಾರ ಬಂಧಿಸಿದ್ದರು. ಆದರೆ ಬಂಧಿತ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಶೂಟ್‌ ಔಟ್‌ ನಡೆದಿದೆ. ಮಂಗಳೂರು ಹೊರವಲಯದ ಮುಲ್ಕಿ ಎಂಬಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿ ಪರಾರಿಯಾಗಲು ಯತ್ನಿಸಿದ ಸಂದರ್ಭ ಶೂಟ್‌ ಔಟ್‌ ಮಾಡಲಾಗಿದೆ. 

ಮಂಗಳೂರಿನಲ್ಲಿ ಸರಣಿ ದರೋಡೆ ಬೆನ್ನಲ್ಲೇ  ಸಕಲೇಶಪುರದಲ್ಲಿ ನಿನ್ನೆ ಅವರನ್ನು ಬಂಧಿಸಲಾಗಿತ್ತು. ಮಧ್ಯಪ್ರದೇಶದ  ರಾಜು ಸಿಂಗ್ವಾನಿಯ (24), ಮಯೂರ್ (30), ಬಾಲಿ (22), ವಿಕ್ಕಿ (21) ಬಂಧಿತವಾಗಿರುವ ಆರೋಪಿಗಳಾಗಿದ್ದಾರೆ. ಆದರೆ ಸಕಲೇಶಪುರದಿಂದ ಬಂಧಿಸಿ ಕರೆತಂದಿದ್ದ ಆರೋಪಿಗಳನ್ನು ಮುಲ್ಕಿ ಸಮೀಪ ಸ್ಥಳ ಮಹಜರಿಗೆ ತೆರಳಿದ ಸಂದರ್ಭ ಎಎಸ್ ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಕಾರಣಕ್ಕೆ  ಮಂಗಳೂರು ಪೊಲೀಸರು ಚಡ್ಡಿ ಗ್ಯಾಂಗ್ ಮೇಲೆ ಗುಂಡು ಹಾರಿಸಿದ್ದು, ಇಬ್ಬರಿಗೆ ಕಾಲಿಗೆ ಗುಂಡು ತಗುಲಿ  ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Latest Videos

ಮಂಗಳವಾರ ನಸುಕಿನ ಜಾವ ಬಿಜೈನ ದಡ್ಡಲ್‌ಕಾಡ್‌ ಬಳಿ ಮನೆಗೆ ನುಗ್ಗಿದ ದರೋಡೆಕೋರರು ನಸುಕಿನ 1.50ರ ಸುಮಾರಿಗೆ ಬೆಡ್ ರೂಂ ನ ಕಿಟಕಿಯ ರಾಡ್ ಕಟ್ ಮಾಡಿ ಮನೆಗೆ ನುಗ್ಗಿ ವಿಕ್ಟರ್ ಮೆಂಡೋನ್ಸಾ(71) ಮತ್ತು ಪ್ಯಾಟ್ರಿಷಾ ಮೆಂಡೋನ್ಸಾ(60) ಎಂಬ ದಂಪತಿಯನ್ನು ಕಟ್ಟಿ ಹಾಕಿ ನಗ, ನಗದು ದರೋಡೆ ಮಾಡಿ ಮನೆಯವರ ಕಾರಿನಲ್ಲಿ ಪರಾರಿಯಾಗಿದ್ದರು. ಬಳಿಕ ಕಾರನ್ನು ಮೂಲ್ಕಿಯಲ್ಲಿ ಬಿಟ್ಟು ಹೋಗಿದ್ದರು.  ಇದು ಹೊರ ರಾಜ್ಯದ ‘ಚಡ್ಡಿ ಗ್ಯಾಂಗ್‌’ನ ಕೃತ್ಯ ಎಂದು ಪೊಲೀಸರು ಶಂಕಿಸಿದ್ದರು. 

ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ್ದ  4 ಜನ ಯುವಕರ (ಚೆಡ್ಡಿ ಗ್ಯಾಂಗ್) ಟೀಂ ಮಂಗಳೂರಿನಲ್ಲಿ ಹಲವು ಕಡೆ ದರೋಡೆ ನಡೆಸಿತ್ತು. ಪ್ರಕರಣ ನಡೆದ ಮಾಹಿತಿ ಬಂದ ಕೂಡಲೇ ಉರ್ವಾ ಠಾಣೆಯ ಪೊಲೀಸ್ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಕೆ.ಎಸ್.ಅರ್.ಟಿ.ಸಿ ಬಸ್ಸಿನಲ್ಲಿ ವ್ಯಕ್ತಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು.  ಕೆ.ಎಸ್.ಅರ್.ಟಿ.ಸಿ ಬಸ್ ಸಿಬ್ಬಂದಿ ವಿಚಾರಿಸಿದಾಗ ಬಸ್ ಹಾಸನ ಕಡೆ ತೆರಳ್ತಿರೋದು ಪತ್ತೆಯಾಗಿತ್ತು. ಈ ವಿಷಯವನ್ನು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಿಳಿಸಿ ಸಕಲೇಶಪುರ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ಜನರು ವಶಕ್ಕೆ ಪಡೆದು ಮಂಗಳೂರಿಗೆ ಕರೆತರಲಾಗಿತ್ತು.

ಬಂಧಿತರಿಂದ 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್  ಮೊಬೈಲ್ ಫೋನ್, ರೂ 1 ಲಕ್ಷ  ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, ರೂ 3000  ನಗದು ಹಣ ವಶಕ್ಕೆ ಪಡೆದಿದ್ದಾರೆ.

ಶೂಟೌಟ್‌ ಬಗ್ಗೆ ಕಮಿಷನರ್ ಹೇಳಿಕೆ:
ಮಂಗಳೂರಿನಲ್ಲಿ ಚಡ್ಡಿ ಗ್ಯಾಂಗ್ ಮೇಲೆ ಪೊಲೀಸರ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ , ಮಂಗಳೂರಿನಲ್ಲಿ ಅಂತಾರಾಜ್ಯ ಚಡ್ಡಿ, ಬನಿಯನ್ ದರೋಡೆ ಗ್ಯಾಂಗ್ ಇತ್ತು

ಐದು ಜನರ ತಂಡ ಮೊದಲು ಜು.6ರಂದು ಕೋಡಿಕಲ್ ಮನೆಗೆ ನುಗ್ಗಿತ್ತು. ಸಿಸಿ ಟಿವಿ ಆಧಾರದಲ್ಲಿ ನಾವು ಅವರ ಹುಡುಕಾಟ ಆರಂಭಿಸಿದ್ದೆವು. ಆದರೆ ಜು.9ರಂದು ಮತ್ತೆ ಕೊಟ್ಟಾರ ಬಳಿ ಮನೆಯ ಗ್ರಿಲ್ ಕಟ್ ಮಾಡಿ ದರೋಡೆ ಮಾಡಿದ್ರು. ಅದೇ ತಂಡ ಮನೆಯಲ್ಲಿದ್ದ ವೃದ್ದರಿಗೆ ಹಲ್ಲೆ ಮಾಡಿ ಚಿನ್ನಾಭರಣ ದರೋಡೆ ಮಾಡಿದ್ರು. ಹೋಗುವಾಗ ಅವರ ಕಾರನ್ನೇ ಕಳವು ಮಾಡಿಕೊಂಡು ಹೋಗಿದ್ರು. ತಕ್ಷಣ ನಮ್ಮ ಸ್ಥಳೀಯ ಅಧಿಕಾರಿಗಳು ತಪಾಸಣೆ ನಡೆಸಿ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ರು. ಈ ವೇಳೆ ಅವರು ಮುಲ್ಕಿಯಲ್ಲಿ ಕಾರು ಬಿಟ್ಟು ಕೆಎಸ್ಸಾರ್ಟಿಸಿ ಬಸ್ ಹತ್ತಿದ್ರು. ಬಸ್ ಚಾಲಕರೊಬ್ಬರ ಮಾಹಿತಿ ಪ್ರಕಾರ ಹಾಸನ ಸಕಲೇಶಪುರ ಭಾಗಕ್ಕೆ ಹೋಗ್ತಾ ಇರೋದು ಗೊತ್ತಾಯ್ತು. ಹಾಸನ ಎಸ್ಪಿ‌ ಹಾಗೂ ತಂಡದ ಸಹಕಾರದಿಂದ ಅವರ ಬಂಧನ ಆಗಿದೆ.
 

click me!