ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದ ಘಟನೆ| ಗ್ರೇಡ್ 2 ತಹಸೀಲ್ದಾರ್ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನ| ಹೊರಗಡೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡ ನಾಗಪ್ಪ ಬಿರಡಿ| ಇಬ್ಬರು ಆರೋಪಿಗಳ ಬಂಧನ|
ಬಾಗಲಕೋಟೆ(ಫೆ.25): ಸಹೋದರರ ಮಧ್ಯೆ ಆಸ್ತಿ ವಿವಾದದಲ್ಲಿ ತಮ್ಮ ಹೆಸರಿಗೆ ಆಸ್ತಿ ಪತ್ರ ಮಾಡಿಕೊಡದ ಹಿನ್ನೆಲೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ. ಫೆ. 20 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಜಮಖಂಡಿ ನಗರದ ತಹಸೀಲ್ದಾರ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ನಾಗಪ್ಪ ಬಿರಡಿ ಅವರ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನ ನಡೆದಿದೆ. ರೈತ ಲಕ್ಷ್ಮಣ ಕಿತ್ತೂರ(70) ಹಾಗೂ ಮಗ ಬಸವರಾಜ ಕಿತ್ತೂರು(48) ಎಂಬುವರು ನಾಗಪ್ಪ ಬಿರಡಿ ಅವರ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ತಹಸೀಲ್ದಾರ ನಾಗಪ್ಪ ಬಿರಡಿ ಅವರು ಹೊರಗಡೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಗಾಜಿನ ಚೂರಿಂದ ಪತ್ತೆಯಾಯ್ತು ಸ್ವಿಗ್ಗಿ ಹುಡುಗರ ಕೊಂದ ಕಾರು..!
ಈ ಸಂಬಂಧ ತಹಸೀಲ್ದಾರ ನಾಗಪ್ಪ ಬಿರಡಿ ಅವರು ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ಫೆ. 22 ರಂದು ದೂರು ದಾಖಲು ದಾಖಲಿಸಿದ್ದಾರೆ. ಘಟನೆಯನ್ನ ಖಂಡಿಸಿದ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಹೀಗಾಗಿ ಆರೋಪಿಗಳಾದ ತಂದೆ-ಮಗನನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.