
ಬೆಂಗಳೂರು(ಫೆ.25): ರಾಜಧಾನಿಯ ಪಾತಕ ಲೋಕದ ಮೇಲೆ ಮಂಗಳವಾರ ರಾತ್ರಿ ದಿಢೀರ್ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ, ಪ್ರತ್ಯೇಕ ಪ್ರಕರಣದಲ್ಲಿ ತಮ್ಮ ಎದುರಾಳಿಗಳ ಕೊಲೆಗೆ ಸಜ್ಜಾಗಿದ್ದ ಇಪ್ಪತ್ತು ರೌಡಿಗಳನ್ನು ಸೆರೆ ಹಿಡಿದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಅಟ್ಟಿದೆ.
ಡಿ.ಜೆ.ಹಳ್ಳಿ, ರಾಮಮೂರ್ತಿ ನಗರ ಹಾಗೂ ಮಾರತ್ತಹಳ್ಳಿ ವ್ಯಾಪ್ತಿಯಲ್ಲಿ ಸಂಘಟಿತ ಅಪರಾಧ ದಳ (ಓಸಿಡಬ್ಲ್ಯು) ಎಸಿಪಿ ಎಚ್.ಎನ್.ಧಮೇಂದ್ರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಬಸವರಾಜ್ ಎ.ತೇಲಿ ಹಾಗೂ ಗಿರೀಶ್ ನಾಯ್ಕ್ ತಂಡ ರೌಡಿಗಳ ಹೆಡೆಮುರಿ ಕಟ್ಟಿದೆ. ತನ್ಮೂಲಕ ಸಂಭವನೀಯ ಮೂರು ಕೊಲೆಗಳು ತಪ್ಪಿದಂತಾಗಿದೆ. ಆರೋಪಿಗಳಿಂದ ಲಾಂಗು ಮಚ್ಚುಗಳು ಹಾಗೂ ಕಾರುಗಳು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿಯಾಗಿವೆ.
ಬಾರ್ ಗಲಾಟೆಗೆ ಇಬ್ಬರ ಹತ್ಯೆಗೆ ಸಂಚು:
ದ್ವೇಷದ ಹಿನ್ನೆಲೆಯಲ್ಲಿ ಡಿ.ಜೆ.ಹಳ್ಳಿ ಸಮೀಪದ ಮೋದಿ ಗಾರ್ಡನ್‌ನ ಎದುರಾಳಿ ಗುಂಪಿನ ದಾಳಿಗೆ ಸಜ್ಜಾಗಿದ್ದ ರೌಡಿ ಮಜರ್ ಖಾನ್ ಅಲಿಯಾಸ್ ಭಟ್ಟಿಮಜರ್ ಮತ್ತು ಆತನ ಸಹಚರರಾದ ಯೋಗೇಶ, ರಿಜ್ವಾನ್, ಸುಮಿತ್ ಅಲಿಯಾಸ್ ರಾಹುಲ್, ಪುನೀತ್‌ನನ್ನು ಸಿಸಿಬಿ ಬಂಧಿಸಿದೆ. ಡಿ.ಜೆ.ಹಳ್ಳಿ ಠಾಣೆಯಲ್ಲಿ ಮಜರ್‌ಖಾನ್ ರೌಡಿಶೀಟರ್ ಆಗಿದ್ದಾನೆ.
ಡ್ರಗ್ ಮಾಫಿಯಾ: 9 ಕೋಟಿ ಬಿಟ್ ಕಾಯಿನ್ ಸಂಪಾದಿಸಿದ್ದ ಹ್ಯಾಕರ್ ಶ್ರೀಕಿ
ಕೆಲ ದಿನಗಳ ಹಿಂದೆ ಡಿ.ಜೆ.ಹಳ್ಳಿ ಹತ್ತಿರದ ಲೇಡಿಸ್ ಬಾರ್‌ನಲ್ಲಿ ಇಬ್ಬರು ಹುಡುಗರ ಜತೆ ಯೋಗೇಶ್ ಗಲಾಟೆ ನಡೆದಿತ್ತು. ಇದರಿಂದ ಕೆರಳಿದ ಯೋಗೇಶ್, ಆ ಇಬ್ಬರು ಹುಡುಗರ ಕೊಲೆಗೆ ಸಂಚು ರೂಪಿಸಿದ್ದ. ಇದಕ್ಕೆ ಆತನಿಗೆ ರೌಡಿ ಮಜರ್‌ಖಾನ್ ಸಹಕಾರ ಸಿಕ್ಕಿತು. ಮೋದಿ ಗಾರ್ಡನ್‌ನ ಸಮೀಪ ಬಾರ್‌ಗೆ ಬರಲಿರುವ ಹುಡುಗರಿಗೆ ಆರೋಪಿಗಳು ಕಾಯುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸೆರೆ ಹಿಡಿಯಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಜೈಲಿನಿಂದಲೇ ಅಂಕಲ್ ಹತ್ಯೆಗೆ ಸುಪಾರಿ
ರಾಮಮೂರ್ತಿ ನಗರದ ಎಫ್‌ಸಿಐ ರಸ್ತೆ ಶನಿಮಹಾತ್ಮ ದೇವಸ್ಥಾನದ ಸಮೀಪ ಸುಪಾರಿ ಕೊಲೆಗೆ ಹೊಂಚು ಹಾಕಿದ್ದ ರೌಡಿ ಮಂಜುನಾಥ ಅಲಿಯಾಸ್ ಮಂಜ ಹಾಗೂ ಆತನ ಬೆಂಬಲಿಗರಾದ ಮೋಹನ್ ಅಲಿಯಾಸ್ ಲಾಲು, ರಾಹುಲ್ ಹಾಗೂ ವಿನುತ್ ಅಲಿಯಾಸ್ ವಿನು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೌಡಿ ಮೂಲಕ ಮಂಜನಿಗೆ ‘ಅಂಕಲ್’ ಎಂಬಾತನ ಕೊಲೆಗೆ ಸುಪಾರಿ ಸಿಕ್ಕಿತು.
ಅಂತೆಯೇ ರಾಮಮೂರ್ತಿ ನಗರದ ಎಫ್‌ಸಿಐ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಅಂಕಲ್ ತೆರಳುವಾಗ ದೆಹಲಿ ನೋಂದಣಿ ಸಂಖ್ಯೆಯಿರುವ ಕಾರಿನಿಂದ ಗುದ್ದಿಸಿ ಹತ್ಯೆಗೈದು, ಬಳಿಕ ಅದನ್ನು ಅಪಘಾತ ಎಂಬಂತೆ ಬಿಂಬಿಸಲು ಆರೋಪಿಗಳು ಸಂಚು ರೂಪಿಸಿದ್ದರು. ಅಷ್ಟರಲ್ಲಿ ನಮಗೆ ಲಭ್ಯವಾದ ಮಾಹಿತಿ ಮೇರೆಗೆ ಸಂಚು ಕಾರ್ಯರೂಪಕ್ಕಿಳಿಸುವ ಕೆಲವೇ ಕ್ಷಣಗಳ ಮುನ್ನ ಮಂಜ ತಂಡವನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಳೆ ದ್ವೇಷ ಮಂಗಳೂರಿನ ರೌಡಿಗಳ ಬಳಕೆ
ಹಾರಿಜನ್ ರಸ್ತೆಯಲ್ಲಿ ಎರಡು ಕಾರುಗಳಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ತಮ್ಮ ಶತ್ರು ಕೊಲೆಗೆ ಹೊಂಚು ಹಾಕಿದ್ದ ಕುಖ್ಯಾತ ಪಾತಕಿ ಹರೀಶ್ ತಂಡವನ್ನು ಸಿಸಿಬಿ ಬಂಧಿಸಿದೆ. ಆನೇಕಲ್‌ನ ಕೆಎಸ್‌ಆರ್‌ಟಿಸಿ ಕಾಲೋನಿಯ ಹರೀಶ, ಮಾರತ್ತಹಳ್ಳಿಯ ವೆಂಕಟೇಶ್, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶಿಶಿಲಾ ಗ್ರಾಮದ ಕಿರಣ್ ಗೌಡ ಹಾಗೂ ಉಲ್ಲಾಳ ತಾಲೂಕಿನ ವಿಶ್ವನಾಥ ಭಂಡಾರಿ ಸೇರಿದಂತೆ 11 ಮಂದಿ ಸಿಕ್ಕಿಬಿದ್ದಿದ್ದಾರೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ರೋಹಿತ್ ಪತ್ತೆಗೆ ತನಿಖೆ ನಡೆದಿದೆ. ತನ್ನ ಶತ್ರು ಕಾಡುಬೀಸನಹಳ್ಳಿಯ ಸೋಮ ಹಾಗೂ ಆತನ ಸಹಚರರ ಕೊಲೆಗೆ ರೋಹಿತ್ ಸುಪಾರಿ ಕೊಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.
ನಗರದಲ್ಲಿ ಯಾವುದೇ ರೀತಿಯ ಗೂಂಡಾ, ರೌಡಿಸಂ ಚಟುವಟಿಕೆಗಳನ್ನು ಸಹಿಸುವುದಿಲ್ಲ. ದರೋಡೆ ಸಂಚು ಮತ್ತು ಎದುರಾಳಿ ತಂಡದವರನ್ನು ಕೊಲೆ ಮಾಡಲು ಹೊಂಚು ಹಾಕಿದ್ದ 20 ಆರೋಪಿಗಳನ್ನು ಬಂಧಿಸಲಾಗಿದೆ. ಸಂಘಟಿತ ಅಪರಾಧ ದಳ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯ ಶ್ಲಾಘನೀಯ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ