ಚಾಮರಾಜನಗರದ ಮಡಹಳ್ಳಿ ಬಿಳಿಕಲ್ಲು ಗುಡ್ಡ ಕುಸಿತದಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದ ಘಟನೆ ನಡೆದು ಬರೋಬ್ಬರಿ 1 ವರ್ಷದ ಬಳಿಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಾಮರಾಜನಗರ (ಮಾ.29): ರಾಜ್ಯದಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಅತ್ಯಂತ ಭೀಕರ ಘಟನೆಯಾದ ಚಾಮರಾಜನಗರದ ಮಡಹಳ್ಳಿ ಬಿಳಿಕಲ್ಲು ಗುಡ್ಡ ಕುಸಿತದಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು. ಈ ಘಟನೆ ನಡೆದು ಬರೋಬ್ಬರಿ 1 ವರ್ಷದ ಬಳಿಕ ಜಿಲ್ಲಾ ಪೊಲೀಸರಿಂದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಹೌದು, ಚಾಮರಾಜನಗರ ಜಿಲ್ಲೆಯಲ್ಲಿ ಮಾ.4ರಂದು ನಡೆದಿದ್ದ ಮಡಹಳ್ಳಿಯಲ್ಲಿ ಗುಡ್ಡ ಕುಸಿತದಲ್ಲಿ ಉತ್ತರ ಪ್ರದೇಶದ ಗೋರಖ್ ಪುರದ ಕಾರ್ಮಿಕರಾದ ಹಜೀಂ ಉಲ್ಲ, ಮಿರಾಜ್ ಹಾಗೂ ಸರ್ಫ್ರಾಜ್ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು. ಆದರೆ, ಮಡಹಳ್ಳಿಯಲ್ಲಿ ಬಿಳಿಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಕೈವಾಡವಿದ್ದು, ಯಾರೊಬ್ಬರನ್ನೂ ಶಿಕ್ಷೆಗೆ ಗುರಿಪಡಿಸಿರಲಿಲ್ಲ. ಆದರೆ, ಬರೋಬ್ಬರಿ 1 ವರ್ಷದ ಬಳಿಕ ಈಗ ಜಿಲ್ಲಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
undefined
Chamarajanagar: ಮಡಹಳ್ಳಿ ದುರಂತ ಬಳಿಕವೂ ಷರತ್ತಿನಂತೆ ಗಣಿಗಾರಿಕೆ ನಡೆಯುತ್ತಿಲ್ಲ!
ಗಣಿಗಾರಿಕೆ ಉಪಗುತ್ತಿಗೆ ಪಡೆದಿದ್ದ ಆರೋಪಿಗಳು: ಈ ಕುರಿತು ಮಾತನಾಡಿದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ ಅವರು, ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಬಿಳಿಕಲ್ಲು ಗುಡ್ಡ ಕುಸಿತ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಗುಡ್ಡ ಕುಸಿತ ಘಟನೆಯಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು. ಇಲ್ಲಿ ಕಲ್ಲು ಕ್ವಾರಿಯಲ್ಲಿ ಗಣಿಗಾರಿಕೆ ಮಾಡಲು ಗುತ್ತಿಗೆ ಪಡೆದ ವ್ಯಕ್ತಿ ಅದನ್ನು ಉಪಗುತ್ತಿಗೆಗೆ ನೀಡಿದ್ದರು. ಆದರೆ, ಉಪಗುತ್ತಿಗೆ ಪಡೆದಿದ್ದ ವ್ಯಕ್ತಿಗಳು ಸ್ಥಳೀಯವಾಗಿ ನೆಲೆಸದೇ, ಕಾರ್ಮಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಕೆಲಸ ಮಾಡಿಸುತ್ತಿದ್ದರು. ಆದ್ದರಿಂದ ದುರಂತ ಸಂಭವಿಸಿತ್ತು ಎಂದು ಹೇಳಿದರು.
ಕೇರಳದ ಸಹೋದರರ ಬಂಧನ: ಚಾಮರಾಜನಗರದಲ್ಲಿನ ಮಡಹಳ್ಳಿಯ ಬಿಳಿಕಲ್ಲು ಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಉಪಗುತ್ತಿಗೆ ಪಡೆದಿದ್ದ ಕೇರಳ ಮೂಲದ ಹಕೀಂ ಹಾಗೂ ಆತನ ಸಹೋದರ ಮಹಮ್ಮದ್ ಇಲಾಲ್ ಬಂಧಿಸಲಾಗಿದೆ. ಇವರಿಬ್ಬರೂ ಕಳೆದ ಒಂದು ವರ್ಷದಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಹುಡುಕಾಟದ ಬಗ್ಗೆ ಕಾರ್ಯಾಚರಣೆ ಚುರುಕುಗೊಳಿಸಿದ್ದ ಗುಂಡ್ಲುಪೇಟೆ ಪೊಲೀಸರ ತಂಡ ಕೇರಳಕ್ಕೆ ಹೋಗಿ ಬೀಡು ಬಿಟ್ಟಿತ್ತು. ಕೇರಳದ ಗುರುವಾಯೂರಿನಲ್ಲಿ ಆರೋಪಿಗಳು ತಲೆ ಮರೆಸಿಕೊಂಡಿರುವುದನ್ನು ಖಚಿತಪಡಿಸಿಕೊಂಡು ಹೋದ ರಾಜ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇನ್ನು ಅವರಿಬ್ಬರನ್ನೂ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಮಾಹಿತಿ ನೀಡಿದರು.
Chamarajanagara: ಗಣಿ ಮಾಲೀಕರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಲ್ಲು ಕ್ವಾರಿಯಲ್ಲಿ ಬಂಡೆ ಬಿದ್ದು 3 ಬಲಿ!
100 ಅಡಿಗೂ ಹೆಚ್ಚು ಆಳದಲ್ಲಿ ಗಣಿಗಾರಿಕೆ: ಮಡಹಳ್ಳಿ ಗ್ರಾಮದ ಸರ್ವೇ ನಂ 192 ರಲ್ಲಿ 10 ಮಂದಿಗೆ ಗಣಿಗಾರಿಕೆಗೆ ಗುತ್ತಿಗೆ ನೀಡಲಾಗಿದೆ. ಗುಡ್ಡ ಕುಸಿತವಾದ ಗಣಿಯನ್ನ ಬೊಮ್ಮಲಾಪುರದ ಮಹೇಂದ್ರ ಎಂಬುವವರು ಗುತ್ತಿಗೆ ಪಡೆದಿದ್ದರು. ಬಳಿಕ ಅವರು ಕೇರಳದ ಹಕೀಂ ಹಾಗೂ ಆತನ ಸಹೋದರ ಮಹಮ್ಮದ್ ಇಲಾಲ್ಗೆ ಉಪಗುತ್ತಿಗೆ ನೀಡಿದ್ದು, ಗಣಿಯು ಅರ್ಧಚಂದ್ರಾಕೃತಿಯಲ್ಲಿದ್ದು, 100 ಅಡಿಗೂ ಹೆಚ್ಚು ಆಳವಿತ್ತು, ಕೆಳಭಾಗದಲ್ಲಿ ಗಣಿಗಾರಿಕೆ ನಡೆಸಿ ಟೊಳ್ಳಾಗಿದ್ದರಿಂದ ಮೇಲ್ಭಾಗದಲ್ಲಿ ಭಾರ ಹೆಚ್ಚಾಗಿ ಗುಡ್ಡ ಕುಸಿದಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಬಳಿಕ ಈ ಕೃತ್ಯಕ್ಕೆ ಕಾರಣರಾದ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಈಗ ಅವರನ್ನು ಗುಂಡ್ಲುಪೇಟೆ ಪೊಲಿಸರು ಬಂಧಿಸಿದ್ದಾರೆ ಎಂದು ತಿಳಿಸಿದರು.
ಆಕ್ಸಿಜನ್ ದುರಂತದಲ್ಲಿ 26 ಸಾವು: ಚಾಮರಾಜನಗರದಲ್ಲಿ ಕೋವಿಡ್ ವೇಳೆ ನಡೆದ ದುರಂತ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ರೋಗಿಗಳು ಆಕ್ಸಿಜಲ್ ಇಲ್ಲದೆ 26ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಇದರಲ್ಲಿ ಆಕ್ಸಿಜನ್ ದುರಂತಕ್ಕೆ ಅಧಿಕಾರಿಗಳೇ ಕಾರಣವೆಂದು ಸರ್ಕಾರ ವರದಿ ನೀಡಲಾಗಿದ್ದು, ಕೆಲವರನ್ನು ಅಮಾನತು ಮಾಡಲಾಗಿತ್ತು.