ಆರೋಪಿಗಳಿಂದ 20 ಲಕ್ಷ ಮೌಲ್ಯದ ಚಿನ್ನಾಭರಣ ವಶ| ಮೇ ತಿಂಗಳಿನಲ್ಲಿ ಸರಗಳ್ಳತನ ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು| ತಮಿಳುನಾಡಿನ ಜೈಲಿನಲ್ಲಿ ಸ್ನೇಹ|
ಬೆಂಗಳೂರು(ಸೆ.13): ಇತ್ತೀಚಿಗೆ ರಾಜಾಜಿನಗರ ಬಳಿ ಗುಂಡಿನ ದಾಳಿ ನಡೆಸಿ ಕುಖ್ಯಾತ ಸರಗಳ್ಳರ ನಾಲ್ವರು ಸಹಚರರನ್ನು ಬಂಧಿಸಿದ್ದ ಉತ್ತರ ವಿಭಾಗದ ಪೊಲೀಸರು, ಆರೋಪಿಗಳಿಂದ 20 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಸುಭಾಷ್ ಕುಮಾರ್ ಅಲಿಯಾಸ್ ಸುಭಾಷ್, ಪಂಜಾಬ್ ರಾಜ್ಯದ ಸಂಜಯ್ ಅಲಿಯಾಸ್ ರವಿ, ಚಾಮರಾಜಪೇಟೆಯ ಚಗನ್ ಲಾಲ್ ಡಿ.ಮಾಲಿ ಅಲಿಯಾಸ್ ಚಗನ್.ಸಿ, ಅರ್ಜುನ್ ಸಿಂಗ್ ಅಲಿಯಾಸ್ ಚೇತನ್, ರಾಕೇಶ್ ಅಲಿಯಾಸ್ ರಾಕಿ, ಸೋನು ಕುಮಾರ್ ಕನೌಜಿಯಾ ಅಲಿಯಾಸ್ ಸೋನು ಬಂಧಿತರು. ಆರೋಪಿಗಳಿಂದ 20 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಎರಡು ಬೈಕ್‌ಗಳು, ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.
ಬೆಳಗಾವಿ; ಮನೆಯ ಮುಂದೆಯೇ ಹೆಣ ಹೂತರು, ಹಂತಕ ಕುಟುಂಬ!
ಆ.31ರಂದು ರಾಜಾಜಿನಗರ ಬಳಿ ಸರಗಳ್ಳತನ ಎಸಗಿ ಪರಾರಿಯಾಗುವ ವೇಳೆ ಗುಂಡಿನ ದಾಳಿ ನಡೆಸಿ ಸುಭಾಷ್ ಮತ್ತು ಸಂಜಯ್‌ನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿಗಳ ಮಾಹಿತಿ ಆಧರಿಸಿ ಉಳಿದವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಮಿಳುನಾಡಿನ ಜೈಲಿನಲ್ಲಿ ಸ್ನೇಹ:
2014ರಲ್ಲಿ ತಮಿಳುನಾಡು ರಾಜ್ಯದ 15 ಸರಗಳ್ಳತನ ಪ್ರಕರಣಗಳ ಸಂಬಂಧ ವೃತ್ತಿಪರ ಸರಗಳ್ಳರಾದ ಅರ್ಜುನ್ ಸಿಂಗ್ ಹಾಗೂ ಸಂಜಯ್ ಆರು ವರ್ಷ ಶಿಕ್ಷೆಗೆ ಗುರಿಯಾಗಿದ್ದರು. ಅದೇ ವೇಳೆ ವಂಚನೆ ಪ್ರಕರಣದಲ್ಲಿ ಬಂಧಿತನಾಗಿದ್ದ ಚಗನ್‌ಗೆ ತಮಿಳುನಾಡಿನ ಜೈಲಿನಲ್ಲಿ ಅರ್ಜುನ್ ಗ್ಯಾಂಗ್ ಪರಿಚಯವಾಗಿದೆ. ಬಳಿಕ ಇದೇ ವರ್ಷದ ಫೆಬ್ರವರಿಯಲ್ಲಿ ಆರೋಪಿಗಳು ಬಿಡುಗಡೆಯಾಗಿದ್ದು, ನಂತರ ಬೆಂಗಳೂರಿಗೆ ಬಂದು ತಮ್ಮ ಚಾಳಿ ಮುಂದುವರೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ ತಿಂಗಳಿನಲ್ಲಿ ಸರಗಳ್ಳತನ ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಬಂಧಿತರಾಗಿ 10 ದಿನಗಳು ಜೈಲಿನಲ್ಲಿದ್ದು ಬಿಡುಗಡೆಯಾಗಿದ್ದರು. ಆರೋಪಿಗಳಿಂದ 8 ಸರಗಳ್ಳತನ ಹಾಗೂ 1 ಬೈಕ್ ಕಳ್ಳತನಗಳು ಪತ್ತೆಯಾಗಿವೆ.