
ಆನೇಕಲ್ (ನ.19): ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಸಹೋದರ ಸಂಬಂಧಿಯನ್ನು ಕೊಂದು ಶವವನ್ನು ಮನೆಯಲ್ಲೇ ಹೂತಿಟ್ಟ ಪ್ರಕರಣವನ್ನು ಅತ್ತಿಬೆಲೆ ಠಾಣಾ ಪೊಲೀಸರು ಭೇದಿಸಿದ್ದು ಇಬ್ಬರನ್ನು ಬಂಧಿಸಿದ್ದಾರೆ.
ದೃಶ್ಯ ಸಿನಿಮಾ ಮಾದರಿಯಲ್ಲಿ ನಡೆದಿರುವ ಈ ಹತ್ಯೆ, ಶವ ಹೂತಿಟ್ಟ ಘಟನೆ ಆಂಧ್ರಪ್ರದೇಶದ ಕುಪ್ಪಮ್ ನಲ್ಲಿ ನಡೆದಿದೆ.
ಆಂಧ್ರ ಕುಪ್ಪಮ್ ಮೂಲದ ಟೆಕ್ಕಿ ಶ್ರೀನಾಥ್ (30) ಕೊಲೆಯಾದ ದುರ್ದೈವಿ. ದಾಯಾದಿ ಅಣ್ಣ ಪ್ರಭಾಕರ್ ಹಣದ ದುರಾಸೆಗೆ ಬಿದ್ದು ಕೊಲೆ ಮಾಡಿದವನು. ಈತನಿಗೆ ಜಗದೀಶ್ ಎಂಬುವವನು ಸಾಥ್ ನೀಡಿದ್ದಾನೆ.
ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಶ್ರೀನಾಥ್ ಪತ್ನಿ, ಮಗುವಿನೊಂದಿಗೆ ಅತ್ತಿಬೆಲೆ ವ್ಯಾಪ್ತಿಯ ನೆರಳೂರಿನಲ್ಲಿ ವಾಸವಾಗಿದ್ದರು.
ಸ್ವಂತ ದೊಡ್ಡಪ್ಪನ ಮಗನಾದ ಹಂತಕ ಪ್ರಭಾಕರ್ ಆರ್ಥಿಕವಾಗಿ ಸ್ಥಿತಿವಂತರಾಗಿದ್ದ ಶ್ರೀನಾಥ್ ಬಳಿ 40 ಲಕ್ಷ ರು. ಹಣ ಪಡೆದು ದ್ವಿಗುಣ ಮಾಡಿ ಕೊಡುವುದಾಗಿ ನಂಬಿಸಿದ್ದರು. ಬಹಳ ದಿನಗಳಾದರೂ ಏನೂ ಮಾಡದೇ ಹೋದ ಕಾರಣ ಕೊಟ್ಟ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದರು. ಅದಕ್ಕೆ ಹಂತಕ ಪ್ರಭಾಕರ್ ಹಣವನ್ನು ವಾಪಸ್ ಕೊಡುತ್ತೇನೆಂದು ಶ್ರೀನಾಥನನ್ನು ಆಂಧ್ರದ ಕುಪ್ಪಮ್ ನಲ್ಲಿರುವ ಮನೆಗೆ ಕರೆಸಿಕೊಂಡಿದ್ದನು. ಮನೆಗೆ ಬರುತ್ತಿದ್ದಂತೆಯೇ ಶ್ರೀನಾಥನ ತಲೆ ಮೇಲೆ ಸುತ್ತಿಗೆಯಿಂದ ಹೊಡೆದು ಕೊಂದ ಪ್ರಭಾಕರ್ ಮತ್ತು ಸಹಚರ ಜಗದೀಶ್, ಮೊದಲೇ ಮನೆಯೊಳಗೇ ಸಿದ್ಧಪಡಿಸಿದ್ದ ಗುಂಡಿಯಲ್ಲಿ ಮೃತದೇಹವನ್ನು ಹಾಕಿ ಮುಚ್ಚಿದ್ದರು.
ಪತ್ನಿಯಿಂದ ದೂರು: ಶ್ರೀನಾಥ್ ಕುಪ್ಪಮ್ ಗೆ ಹೋಗುವುದಾಗಿ ತಮ್ಮ ಪತ್ನಿಗೆ ಅ.27ರಂದು ಕರೆ ಮಾಡಿ ತಿಳಿಸಿದ್ದರು. ಎರಡು, ಮೂರು ದಿನವಾದರೂ ಪತಿ ಮನೆಗೆ ಬಾರದಿದ್ದಾಗ ಪ್ರಭಾಕರ್‌ಗೆ ಕರೆ ಮಾಡಿ ವಿಚಾರಿಸಿದಾಗ ಮುಗ್ಧನಂತೆ ತನಗೇನೂ ತಿಳಿಯದು ಎಂದು ತಿಳಿಸಿದ್ದಾನೆ. ಇದರಿಂದ ಅನುಮಾನಗೊಂಡ ಪತ್ನಿ ಅತ್ತಿಬೆಲೆ ಪೊಲೀಸರಿಗೆ ನ.1 ರಂದು ಪತಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು.
ಪತ್ನಿ ದೂರಿನ ಮೇರೆಗೆ ಅತ್ತಿಬೆಲೆ ಪೊಲೀಸರ ತಂಡ ಕೊಲೆಗಾರರ ಪತ್ತೆಗೆ ಕಾರ್ಯಾಚರಣೆ ಕೈಗೊಂಡರು. ಅದರಂತೆ ಇನ್‌ಸ್ಪೆಕ್ಟರ್ ಎಸ್. ರಾಘವೇಂದ್ರ ಮತ್ತು ತಂಡ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಹಂತಕರ ಜಾಡು ಹಿಡಿದು ಕುಪ್ಪಮ್ ಗೆ ತೆರಳಿತು. ಅಲ್ಲಿ ಹಂತಕರನ್ನು ಬಂಧಿಸಿ ವಿಚಾರಿಸಿದಾಗ ಬಾಯಿಬಿಟ್ಟ ಹಂತಕರು ದೃಶ್ಯ ಸಿನಿಮಾ ಮಾದರಿಯಲ್ಲಿ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡರು. ನಂತರ ಮನೆಯಲ್ಲೇ ಗುಂಡಿ ತೋಡಿ ಹೂತ್ತಿದ್ದ ಶವವನ್ನು ಕುಪ್ಪಂ ತಹಶೀಲ್ದಾರ್ ಸಮಕ್ಷಮದಲ್ಲಿ ಹೊರತೆಗೆಲಾಯಿತು. ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿ ಇಲ್ಲಿಗೆ ಕರೆದುಕೊಂಡು ಬಂದಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ