
ಬೆಂಗಳೂರು (ಫೆ.23): ಜೀವನದಲ್ಲಿ ಜಿಗುಪ್ಸೆಗೊಂಡು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಬನಶಂಕರಿ 3ನೇ ಹಂತದ ಕೃಷ್ಣಯ್ಯ ಲೇಔಟ್ ನಿವಾಸಿಗಳಾದ ಆರ್.ಕೃಷ್ಣನಾಯ್ಡು (85) ಹಾಗೂ ಸರೋಜಮ್ಮ (74) ಮೃತ ದುರ್ದೈವಿಗಳು. ತಮ್ಮ ಮನೆ ಮಹಡಿ ಕೋಣೆಯಲ್ಲಿ ಕೃಷ್ಣನಾಯ್ಡು ದಂಪತಿ ಪ್ರತ್ಯೇಕವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ ಮೃತರ ಸೊಸೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಂಧ್ರಪ್ರದೇಶ ಮೂಲದ ಮೃತ ಕೃಷ್ಣ ನಾಯ್ಡು ಅವರು, ದಶಕಗಳ ಹಿಂದೆಯೇ ನಗರಕ್ಕೆ ಬಂದು ನೆಲೆಸಿದ್ದರು. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ. ಬನಶಂಕರಿಯ ಕೃಷ್ಣಯ್ಯಲೇಔಟ್‌ನಲ್ಲಿ ಅವರಿಗೆ ಸೇರಿದ ಮೂರು ಅಂತಸ್ತಿನ ಮನೆ ಕಟ್ಟಡವಿದೆ. ಇದರಲ್ಲಿ ಮೊದಲ ಮಹಡಿಯಲ್ಲಿ ಅವರ ಪುತ್ರ ಅಶೋಕ್ ಕುಟುಂಬ ನೆಲೆಸಿದ್ದು, ಮಹಡಿಯ ಕೋಣೆಯಲ್ಲಿ ಕೃಷ್ಣನಾಯ್ಡು ಹಾಗೂ ಸರೋಜಮ್ಮ ವಾಸವಾಗಿದ್ದರು.
ಈ ವೃದ್ಧ ತಂದೆ-ತಾಯಿಗೆ ಪುತ್ರ ಅಶೋಕ್ ಊಟೋಪಚಾರ ನೋಡಿಕೊಳ್ಳುತ್ತಿದ್ದರು. ಎಂದಿನಂತೆ ಬೆಳಗ್ಗೆ 9.30ರ ಸುಮಾರಿಗೆ ಅತ್ತೆ-ಮಾವನಿಗೆ ಉಪಾಹಾರ ನೀಡಲು ಮೃತರ ಸೊಸೆ ತೆರಳಿದ್ದರು. ಆಗ ನೇಣಿನ ಕುಣಿಕೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೀವನದಲ್ಲಿ ಬೇಸರಗೊಂಡು ವೃದ್ಧರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ