
ಬೀದರ್(ಜೂ.16): ಕಳ್ಳತನ, ದರೋಡೆ ಸೇರಿ ಇನ್ನಿತರ ಅಪರಾಧ ಪ್ರಕರಣಗಳನ್ನು ಕೂಡಲೇ ಪತ್ತೆ ಹಚ್ಚಲು ಅಮೆರಿಕದ ಡಲ್ಲಾಸ್ ಪೊಲೀಸರು ಜಾರಿಗೆ ತಂದಿರುವ ಸಿಸಿ ಕ್ಯಾಮೆರಾ ಯೋಜನೆಯನ್ನು ಜನರ ಸಹಭಾಗಿತ್ವದೊಂದಿಗೆ ಜಿಲ್ಲೆಯಲ್ಲೂ ಜಾರಿಗೆ ತರಲಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿರುವ ಅವರು, ಈಗಾಗಲೇ ಸಿಸಿ ಕ್ಯಾಮೆರಾಗಳನ್ನು ಎಲ್ಲ ಮನೆಗಳಲ್ಲಿ, ಅಂಗಡಿ ಮುಗ್ಗಟ್ಟುಗಳಲ್ಲಿ ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದು, ಇನ್ಮುಂದೆ ಜನ ಖಾಸಗಿಯಾಗಿ ಅಳವಡಿಸಿಕೊಂಡಿರುವ ಸಿಸಿ ಕ್ಯಾಮೆರಾಗಳನ್ನು ನಮ್ಮ ಪೊಲೀಸ್ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು ಅಪರಾಧವಾದ ಸಂದರ್ಭದಲ್ಲಿ ಆಯಾ ಸಿಸಿ ಕ್ಯಾಮೆರಾಗಳಲ್ಲಿನ ದಾಖಲೆಯನ್ನು ಪಡೆದು ಆರೋಪಿಗಳನ್ನು ಪತ್ತೆ ಹಚ್ಚುವ ಯತ್ನ ಮಾಡಲಾಗುವುದು. ಇದರಿಂದ ಸಿಸಿ ಕ್ಯಾಮೆರಾಗಳು ಅಳವಡಿಕೆ ಆಗಿರುವ ಕುರಿತು ಹುಡುಕಾಟದಲ್ಲಿ ಸಮಯ ವ್ಯರ್ಥ ಆಗುವುದನ್ನು ತಪ್ಪಿಸಬಹುದಾಗಿದೆ ಎಂದರು.
ಜೈ ಶ್ರೀರಾಮ್ ಹಾಡು ಹಾಕಿದ್ದಕ್ಕೆ ಬೀದರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಾರಾಮಾರಿ
ಇಲ್ಲಿ ಸಿಸಿ ಕ್ಯಾಮೆರಾಗಳಲ್ಲಿನ ಮಾಹಿತಿಯನ್ನು ಅಪರಾಧ ನಡೆದ ಸಂದರ್ಭದಲ್ಲಿ ಮಾತ್ರ ಆಯಾ ಪ್ರದೇಶದ ಮನೆ ಅಥವಾ ಅಂಗಡಿಗಳಲ್ಲಿ ಅಳವಡಿಸಲಾಗಿರುವ ಮನೆಗಳ ಮಾಲೀಕರಿಗೆ ಮನವಿ ಮಾಡಿ ಪಡೆಯಲಾಗುವುದೇ ಹೊರತು ಮತ್ಯಾವುದಕ್ಕೂ ಅಲ್ಲ. ಹಾಗೆಯೇ ಸಿಸಿ ಕ್ಯಾಮೆರಾಗಳ ಅಳವಡಿಕೆ ತಪ್ಪಾಗಿದ್ದರೆ ಅವುಗಳನ್ನು ಸರಿಪಡಿಸಲು ಸಲಹೆ ಸಹ ನೀಡಲಾಗುವುದು ಎಂದರು.
ಇಂತಹ ವ್ಯವಸ್ಥೆ ಅಮೆರಿಕದ ಡಲ್ಲಾಸ್ ಪೊಲೀಸರು ನಿರ್ವಹಿಸುತ್ತಿದ್ದಾರೆ. ಈ ಯೋಜನೆಯ ಮಾದರಿಯನ್ನು ನಾವು ಅನುಸರಿಸಲಿದ್ದೇವೆ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡವರು ಪೊಲೀಸರಿಗೆ ಮಾಹಿತಿ ನೀಡಿ ನೋಂದಣಿ ಮಾಡಿಕೊಂಡಲ್ಲಿ ಅಂಥವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಎಸ್ಪಿ ಚನ್ನಬಸವಣ್ಣ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ