ರಾಷ್ಟ್ರೀಯ ಖೋ ಖಖೋ ತಂಡವನ್ನು ಪ್ರತಿನಿಧಿಸಿದ್ದ ಶಿವಮೊಗ್ಗದ ಅರುಣ್ ಮೃತದೇಹ ಮಂಡಗದ್ದೆ ಸಮೀಪದ ತುಂಗಾನದಿಯಲ್ಲಿ ಪತ್ತೆಯಾಗಿದೆ. ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.02): ರಾಷ್ಟ್ರೀಯ ಖೋಖೋ ಆಟಗಾರ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಸಮೀಪದ ಮಂಡಗದ್ದೆ ಗ್ರಾಮದ ಬಳಿ ನಡೆದಿದೆ. ಮೃತನನ್ನು ಅರುಣ್(27) ಎಂದು ಹೇಳಲಾಗಿದೆ. ಅರುಣ್ ರಾಷ್ಟ್ರೀಯ ಖೋ ಖೋ ತಂಡ ಪ್ರತಿನಿಧಿಸಿದ್ದರು. ಸದ್ಯ ಶಿವಮೊಗ್ಗದ ಕೆಎಸ್‌ಆರ್‌ಟಿಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಶುಕ್ರವಾರ ಮನೆಯಿಂದ ಹೊರಗೆ ತೆರಳಿದ್ದ ಅವರು ಪುನಃ ವಾಪಸ್ಸು ಮನೆಗೆ ಬಂದಿರಲಿಲ್ಲ. ಶನಿವಾರ ಮಂಡಗದ್ದೆ ಕಾಡಿನ ಬಳಿ ಅವರ ಮೋಟಾರ್ ಬೈಕ್ ಸಿಕ್ಕರೆ, ಪಕ್ಕದಲ್ಲಿಯೇ ಹರಿಯುವ ತುಂಗಾ ನದಿಯ ದಂಡೆಯಲ್ಲಿದ್ದ ಹರಿಗೋಲಿನಲ್ಲಿ ಷರಟು, ಪರ್ಸ್, ಐಡಿ ಕಾರ್ಡ್ ಇತ್ಯಾದಿ ಸಿಕ್ಕಿದೆ. ಬಳಿಕ ಇವರಿಗಾಗಿ ಹುಡುಕಾಟ ನಡೆದಿತ್ತು. ಸೋಮವಾರ ಅರುಣ್ ಶವ ನದಿಯಲ್ಲಿ ಪತ್ತೆಯಾಗಿದೆ. ಈ ಸಾವಿನ ಹಿಂದೆ ಹಲವಾರು ಶಂಕೆ ವ್ಯಕ್ತವಾಗಿದ್ದು, ಅವರ ಕುಟುಂಬದವರು ಇದು ಸಹಜ ಸಾವಲ್ಲ, ಕೊಲೆ ಎನ್ನುತ್ತಿದ್ದಾರೆ.
ಕೃಷಿ ಉತ್ಪನ್ನ ಮಾರಾಟ, ಸಾಗಾಟಕ್ಕೆ ಮುಕ್ತ ಅವಕಾಶ; ಸಚಿವ ಸೋಮಶೇಖರ್
ಕೆಲ ವರ್ಷದ ಹಿಂದೆ ಅರುಣ್ ತಂದೆ ಚಿತ್ರದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಆ ನಂತರ ಇವರಿಗೆ ತಂದೆಯ ಕೆಲಸ ಸಿಕ್ಕಿತ್ತು. ಇತ್ತೀಚೆಗೆ ಅರುಣ್ ಇಷ್ಟಪಟ್ಟ ಯುವತಿಯೊಂದಿಗೆ ಮದುವೆ ನಿಶ್ಚಿತಾರ್ಥವಾಗಿತ್ತು. ಒಟ್ಟಾರೆ ಅರುಣ್ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿಯಾಗಲೀ, ಅಂತಹ ಪರಿಸ್ಥಿತಿಯಾಗಲೀ ಇರಲಿಲ್ಲ ಎನ್ನುತ್ತಾರೆ ಕುಟುಂಬ ವರ್ಗದವರು.
ಶುಕ್ರವಾರ ಮನೆಯಿಂದ ಹೊರಟವರು ತನ್ನ ಭಾವಿ ಪತ್ನಿಗೆ ಸೀರೆ ಉಡುಗೊರೆಯಾಗಿ ನೀಡಿ, ಆ ನಂತರ ಪಾಲಿಕೆಯ ಬಳಿ ತೆರಳುವುದಾಗಿ ತಿಳಿಸಿದ್ದರು. ಆದರೆ ಅರುಣ್ ನೇರವಾಗಿ ಹೊರಟಿದ್ದು ಮಂಡಗದ್ದೆಯ ಕಡೆಗೆ. ಅಲ್ಲಿನ ನೆಲ್ಲಿಸರ ಅವರ ಊರಾಗಿದ್ದು, ಅಲ್ಲಿ ಅವರ ಸಂಬಂಧಿಕರು ಇದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗುವ ಉದ್ದೇಶದಿಂದ ಮಂಡಗದ್ದೆ ಕಡೆಗೆ ಹೊರಟಿರಬಹುದು ಎನ್ನುತ್ತಾರೆ ಅವರ ಬಂಧುಗಳು. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.