ಹುಬ್ಬಳ್ಳಿ ಗಲಭೆ: ಮತ್ತೆ ಎಂಟು ಜನರ ಬಂಧನ, ಕಟೀಲ್‌ ವಿರುದ್ಧ ದೂರು

By Girish Goudar  |  First Published Apr 28, 2022, 11:31 AM IST

*  ಗಲಭೆಗೆ ಹಿಂದೇ ಕಾಂಗ್ರೆಸ್‌ ಕೈವಾಡವೆಂದಿದ್ದ ಕಟೀಲ್‌ ವಿರುದ್ಧ ಕಾಂಗ್ರೆಸ್‌ ದೂರು
*  ಮತ್ತೆ ಇಬ್ಬರು ಪೊಲೀಸ್‌ ಕಸ್ಟಡಿಗೆ
*  ಇಬ್ಬರನ್ನೂ ಗೌಪ್ಯ ಸ್ಥಳಕ್ಕೆ ಕರೆದುಕೊಂಡು ಹೋದ ಪೊಲೀಸರು


ಹುಬ್ಬಳ್ಳಿ(ಏ.28):  ಹುಬ್ಬಳ್ಳಿ ಗಲಭೆಗೆ(Hubballi Riots) ಸಂಬಂಧಪಟ್ಟಂತೆ ಕಳೆದೆರಡು ದಿನಗಳಿಂದ ಬಂಧಿತರ ವಿಚಾರಣೆ, ಮಹಜರು ಕಾರ್ಯಗಳಲ್ಲಿ ನಿರತರಾಗಿದ್ದ ಪೊಲೀಸರು, ಇದೀಗ ಗಲಭೆಕೋರರ ಪತ್ತೆ ಕಾರ್ಯವನ್ನು ಮತ್ತೆ ಚುರುಕುಗೊಳಿಸಿದ್ದಾರೆ. ಗಲಭೆಗೆ ಸಂಬಂಧಪಟ್ಟಂತೆ ಬುಧವಾರ ಮತ್ತೆ 8 ಜನರನ್ನು ಬಂಧಿಸಿದ್ದಾರೆ(Arrest). ಇದರಿಂದ ಬಂಧಿತರ ಸಂಖ್ಯೆ 154ಕ್ಕೇರಿದೆ. ಈ ನಡುವೆ ಗಲಭೆ ಹಿಂದೆ ಕಾಂಗ್ರೆಸ್‌ ಕೈವಾಡವಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ಕಾಂಗ್ರೆಸ್‌ ದೂರು ದಾಖಲಿಸಿದೆ.

ಎಂಟು ಜನರ ಬಂಧನ:

Tap to resize

Latest Videos

ಗಲಭೆಗೆ ಸಂಬಂಧಿಸಿದಂತೆ ಬುಧವಾರ ದಿಡ್ಡಿ ಓಣಿಯ ಗೌಸಮೋದಿನ ಮುನವಳ್ಳಿ, ಮಂಟೂರ ರೋಡ್‌ನ ಮಹ್ಮದ್‌ ಸುಲ್ತಾನ ರಂಗರೇಸ, ಮಹ್ಮದ್‌ ಮುದ್ದಸ್ಸಿರ ಉಫ್‌ರ್‍ ಬಬ್ಲು ಹಿದಾಷಾ, ಖ್ವಾಜಾಮೈನುದ್ದೀನ್‌ ಮುದ್ದೇಬಿಹಾಳ, ಶಿವಪುತ್ರ ನಗರದ ಅಜರುದ್ದೀನ ಹಿದಾಷಾ, ರೋಷನ್‌ ಜಮೀರ ಕುಂದಗೋಳ, ಅಯೋಧ್ಯಾನಗರದ ಜುನೇದ ಹುಯಿಲಗೋಳ, ಯುಕೆಟಿ ಹಿಲ್ಸ್‌ನ ಅಪ್ತಾಭ ಬಾಗೇವಾಡಿ ಎಂಬುವವರನ್ನು ಬಂಧಿಸಿದೆ. ತೀವ್ರ ಕಾರ್ಯಾಚರಣೆ ನಡೆಸಿದ ಪೊಲೀಸರು(Police) ಕೆಲವರನ್ನು ಅವರ ಸ್ವ ನಿವಾಸದಲ್ಲಿ ಬಂಧಿಸಿದ್ದರೆ, ಇನ್ನು ಕೆಲವರನ್ನು ಬೇರೆ ಬೇರೆ ಸ್ಥಳಗಳಲ್ಲಿ ಬಂಧಿಸಿದ್ದಾರೆ. ಇನ್ನು ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಗಲಭೆಯಲ್ಲಿ ಪಾಲ್ಗೊಂಡವರ ಹುಡುಕಾಟ ಇನ್ನೂ ಮುಂದುವರಿಯಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Hubballi Riots: ಹುಬ್ಬಳ್ಳಿ ಗಲಭೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಪೊಲೀಸರು..!

ಈ ನಡುವೆ ಗಲಭೆಯ ರೂವಾರಿ ಎನ್ನಲಾದ ವಸೀಂ ಪಠಾಣ(Vaseem Pathan) ತಲೆ ಮರೆಸಿಕೊಳ್ಳಲು ಹಾಗೂ ಆತ ಹುಬ್ಬಳ್ಳಿಯಿಂದ ಪರಾರಿಯಾಗಲು ಕೆಲವರು ಸಹಾಯ ಮಾಡಿದ್ದಾರೆ ಎಂಬುದು ತನಿಖೆ ವೇಳೆ ಪೊಲೀಸರಿಗೆ ಗೊತ್ತಾಗಿದೆ. ಹೀಗಾಗಿ ಆತನಿಗೆ ಯಾರಾರ‍ಯರು ಸಹಾಯ ಮಾಡಿದ್ದರು ಎಂಬ ಸಂಗತಿ ಬಗ್ಗೆಯೂ ಪೊಲೀಸರು ಲಕ್ಷ್ಯ ವಹಿಸಿದ್ದಾರೆ. ಹೀಗೆ ನಾಪತ್ತೆಯಾಗಲು ನೆರವು ನೀಡಿದವರನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದು, ಈ ನಿಟ್ಟಿನಲ್ಲೂ ಶೋಧ ನಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ,.

ಕಟೀಲ್‌ ವಿರುದ್ಧ ದೂರು:

ಹುಬ್ಬಳ್ಳಿ ಗಲಭೆಗೆ ಮಾಜಿ ಮುಖ್ಯಮಂತ್ರಿ(Siddaramaiah) ಸಿದ್ದರಾಮಯ್ಯ ಪ್ರೇರಣೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್‌ ಕಟೀಲ ಆಧಾರ ರಹಿತ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಟೀಲ್‌(Nalin Kumar Kateel) ವಿರುದ್ಧ ಕಾಂಗ್ರೆಸ್‌ ದೂರು ದಾಖಲಿಸಿದೆ.

ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ವೇದವ್ಯಾಸ ಕೌಲಗಿ ಅವರು ಬುಧವಾರ ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ನೀಡಿ, ಕಟೀಲ ಅವರ ಹೇಳಿಕೆ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಏ. 16ರಂದು ಹಳೇ ಹುಬ್ಬಳ್ಳಿ ಗಲಭೆಗೆ ಸಿದ್ದರಾಮಯ್ಯ ಪ್ರೇರಣೆ ನೀಡಿದ್ದು, ಇವರ ಅಧಿಕಾರವಧಿಯಲ್ಲಿನ ವೈಫಲ್ಯತೆಗಳೇ ಕಾರಣ ಎಂದು ಕಟೀಲ್‌ ಆರೋಪಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುವ ಉದ್ದೇಶದಿಂದ ಕಟೀಲ್‌ ಆಧಾರ ರಹಿತ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿ ಗಲಭೆಗೆ ಸಿದ್ದರಾಮಯ್ಯ ಪ್ರೇರಣೆ: ನಳಿನ್‌ ಕುಮಾರ್‌ ಕಟೀಲ್‌

ಆದ್ದರಿಂದ ಪೊಲೀಸರು ಸಾಕ್ಷಿ, ಪುರಾವೆ ಸಲ್ಲಿಸುವಂತೆ ತಕ್ಷಣ ನೋಟಿಸ್‌ ಜಾರಿಗೊಳಿಸಬೇಕು. ಅಲ್ಲದೇ, ಕಟೀಲ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡುವ ಜತೆಗೆ ಪೊಲೀಸ್‌ ಆಯುಕ್‌್ತ ಲಾಭೂರಾಮ್‌ ಅವರಿಗೆ ಈ ಕುರಿತು ಮನವಿಯನ್ನು ಸಹ ಕೌಲಗಿ ಸಲ್ಲಿಸಿದ್ದಾರೆ.

ಮತ್ತೆ ಇಬ್ಬರು ಪೊಲೀಸ್‌ ಕಸ್ಟಡಿಗೆ

ಹಳೇ ಹುಬ್ಬಳ್ಳಿ ಗಲಭೆ ಸಂಬಂಧಿಸಿದಂತೆ ಮತ್ತೆ ಇಬ್ಬರನ್ನು ಪೊಲೀಸ್‌ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ. ಎಐಎಂಐಎಂ ಮಹಾನಗರ ಜಿಲ್ಲಾಧ್ಯಕ್ಷ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ(HDMC) ಸದಸ್ಯ ನಜೀರ್‌ ಅಹ್ಮದ್‌ ಹೊನ್ಯಾಳ ಹಾಗೂ ಆರೀಫ್‌ ನಾಗರಾಳ ಎಂಬಿಬ್ಬರನ್ನು ಪೊಲೀಸ್‌ ಕಸ್ಟಡಿಗೆ ನೀಡಿ ಇಲ್ಲಿನ 4ನೆಯ ಹೆಚ್ಚುವರಿ ದಿವಾಣಿ ನ್ಯಾಯಾಲಯವೂ ಆದೇಶಿಸಿದೆ. 5 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಈ ಇಬ್ಬರನ್ನು ಗೌಪ್ಯ ಸ್ಥಳಕ್ಕೆ ಕರೆದುಕೊಂಡು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. 

ಈ ಇಬ್ಬರು ಕಳೆದ ನಾಲ್ಕೈದು ದಿನಗಳ ಹಿಂದೆ ಅರೆಸ್ಟ್‌ ಆಗಿದ್ದರು. ಕಳೆದ 5 ದಿನಗಳ ಗಲಭೆಯ ರೂವಾರಿ ಎನ್ನಲಾದ ವಸೀಂ ಪಠಾಣ ಹಾಗೂ ತೌಫಿಲ್‌ ಮುಲ್ಲಾ ಅವರನ್ನು ಪೊಲೀಸ್‌ ಕಸ್ಟಡಿಗೆ ಕೊಟ್ಟಿತ್ತು. ಈ ವೇಳೆ ಇಬ್ಬರ ವಿಚಾರಣೆ ವೇಳೆ ನಜೀರ್‌ ಹೊನ್ಯಾಳ ಹಾಗೂ ಆರೀಫ್‌ ನಾಗರಾಳ ಬಗ್ಗೆ ಹೆಚ್ಚಿನ ವಿಷಯ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಇಬ್ಬರ ವಿಚಾರಣೆಗೆ ಪೊಲೀಸ್‌ ಕಸ್ಟಡಿಗೆ ನೀಡುವಂತೆ ಪೊಲೀಸರು ಕೋರಿದ್ದರು. ಅದರಂತೆ ನ್ಯಾಯಾಲಯವೂ ಕಸ್ಟಡಿಗೆ ನೀಡಿ ಆದೇಶಿಸಿದೆ.
 

click me!