ಬೆಂಗಳೂರಲ್ಲಿ ಆಫ್ರಿಕಾ ಪ್ರಜೆಗಳ ಗೂಂಡಾಗಿರಿ: ಎಸ್‌ಐ ಮೇಲೆ ಹಲ್ಲೆ!

By Kannadaprabha NewsFirst Published Aug 3, 2021, 7:45 AM IST
Highlights

* ಬೆಂಗಳೂರಲ್ಲಿ ಆಫ್ರಿಕಾ ಪ್ರಜೆಗಳ ಗೂಂಡಾಗಿರಿ

* ಕಾಂಗೋ ಪುಂಡಾಟ, ಡ್ರಗ್ಸ್‌ ಕೇಸಲ್ಲಿ ಬಂಧಿತ ಆಫ್ರಿಕಾ ವ್ಯಕ್ತಿ ಅನುಮಾನಾಸ್ಪದ ಸಾವು

* ಪೊಲೀಸರ ಜೊತೆ ಸ್ನೇಹಿತರ ಮಾರಾಮಾರಿ

* ಪೊಲೀಸ್‌ ಠಾಣೆಗೆ ಕಾಂಗೋ ಪ್ರಜೆಗಳ ಮುತ್ತಿಗೆ, ಎಸ್‌ಐ ಮೇಲೆ ಹಲ್ಲೆ

* ಪೊಲೀಸರಿಂದ ಲಾಠಿಚಾರ್ಜ್

ಬೆಂಗಳೂರು(ಆ.03): ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆಫ್ರಿಕನ್‌ ಪ್ರಜೆಯೊಬ್ಬ ಪೊಲೀಸ್‌ ವಶದಲ್ಲಿದ್ದ ವೇಳೆ ಅನುಮಾನಾಸ್ಪದವಾಗಿ ಮೃತಪಟ್ಟಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಇದರ ಬೆನ್ನಲ್ಲೇ ವಿದೇಶಿ ಪ್ರಜೆಗಳು ಸೋಮವಾರ ಜೆ.ಸಿ.ನಗರ ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಲ್ಲದೆ, ಪೊಲೀಸರ ಮೇಲೆ ಹಲ್ಲೆ ಮಾಡಿ ಠಾಣೆಗೆ ನುಗ್ಗಲು ಯತ್ನಿಸಿದ್ದಾರೆ. ಈ ಹಂತದಲ್ಲಿ ಪೊಲೀಸರು ಆಫ್ರಿಕನ್‌ ಪ್ರಜೆಗಳ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. ವಿದೇಶಿ ಪ್ರಜೆ ಮೃತಪಟ್ಟಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತರು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದಾರೆ.

"

ಆಫ್ರಿಕಾ ಖಂಡದ ಕಾಂಗೋ ದೇಶದ ಪ್ರಜೆ ಜೋಯೆಲ್‌ ಶಿಂದಾನಿ ಮಲ್ಲು (27) ಮೃತ ಯುವಕ. ಆಫ್ರಿಕನ್‌ ಪ್ರಜೆಗಳು ನಡೆಸಿದ ಹಲ್ಲೆಯಲ್ಲಿ ಕೆಲ ಪೊಲೀಸ್‌ ಸಿಬ್ಬಂದಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಐಡಿ ಅಧಿಕಾರಿಗಳು ಪಾರದರ್ಶಕವಾಗಿ ತನಿಖೆ ನಡೆಸಲಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದಾರೆ.

ಡ್ರಗ್ಸ್‌ ಕೇಸಲ್ಲಿ ಜೋಯೆಲ್‌ ಬಂಧನ:

ಭಾನುವಾರ ರಾತ್ರಿ ಆಫ್ರಿಕಾ ಪ್ರಜೆಗಳು ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಜೆ.ಸಿ.ನಗರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ರಘುಪತಿ ಅವರಿಗೆ ಬಂದ ಮಾಹಿತಿ ಮೇರೆಗೆ ಪಿಎಸ್‌ಐ ತಮ್ಮ ತಂಡದೊಂದಿಗೆ ರಾತ್ರಿ 12.30ರ ಸುಮಾರಿಗೆ ಬಂಜಾರು ಲೇಔಟ್‌ಗೆ ತೆರಳಿದ್ದರು. ಆದರೆ ಅಲ್ಲಿಂದ ಕಾಲ್ಕಿತ್ತಿದ್ದ ದಂಧೆಕೋರರು ಬಾಬುಸಾ ಪಾಳ್ಯದಲ್ಲಿರುವುದು ಗೊತ್ತಾಗಿದೆ. ಅಲ್ಲಿಗೆ ಹೋದಾಗ ಜೋಯೆಲ್‌ ಹಾಗೂ ಮತ್ತೊಬ್ಬ ಬೈಕ್‌ನಲ್ಲಿ ಬರುತ್ತಿದ್ದರು. ಪೊಲೀಸರನ್ನು ನೋಡಿದ ಕೂಡಲೇ ಹಿಂಬದಿ ಕುಳಿತಿದ್ದ ಜೋಯೆಲ್‌ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರ ತಂಡ ಆರೋಪಿಯನ್ನು ಬೆನ್ನಟ್ಟಿಹಿಡಿದಿದ್ದು, ತಪಾಸಣೆ ನಡೆಸಿದಾಗ ಐದು ಗ್ರಾಂ ಎಂಡಿಎಂಎ ಮಾದಕ ವಸ್ತು ಜಪ್ತಿಯಾಗಿದೆ. ಈ ವೇಳೆ ಜೋಯೆಲ್‌ ಜತೆಗಿದ್ದ ಮತ್ತೊಬ್ಬ ಪೆಡ್ಲರ್‌ ಬೈಕ್‌ನಲ್ಲಿ ಪರಾರಿಯಾಗಿದ್ದ.

ನಿನ್ನೆ ಬೆಳಗಿನ ಜಾವ ಸಾವು:

ಪೊಲೀಸರು ತಡರಾತ್ರಿ 2.30ರ ಸುಮಾರಿಗೆ ಆರೋಪಿಯನ್ನು ಠಾಣೆಗೆ ಕರೆ ತಂದು ಎನ್‌ಡಿಪಿಎಸ್‌ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆಗೆ ಸಹಕರಿಸದ ಆರೋಪಿ ತನ್ನ ಹೆಸರನ್ನು ಬಾಯ್ಬಿಟ್ಟಿರಲಿಲ್ಲ. ಈ ನಡುವೆ ಬೆಳಗಿನ ಜಾವ 5.30ರ ಸುಮಾರಿಗೆ ಆರೋಪಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಪೊಲೀಸರು ಕರೆದೊಯ್ದು ದಾಖಲಿಸಿದ್ದರು. ಈ ಬಗ್ಗೆ ಠಾಣಾ ಸಿಬ್ಬಂದಿ ಇನ್‌ಸ್ಪೆಕ್ಟರ್‌ಗೂ ಮಾಹಿತಿ ನೀಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಬೆಳಗ್ಗೆ 6.30ಕ್ಕೆ ಮೃತಪಟ್ಟಿದ್ದಾನೆ.

ಹೃದಯಾಘಾತದಿಂದ ಸಾವು-ವೈದ್ಯರು:

ಆರೋಪಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ಪ್ರಾಥಮಿಕ ತಪಾಸಣೆ ನಡೆಸಿ ತಿಳಿಸಿದ್ದಾರೆ. ಹೀಗಾಗಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತ ವಿದೇಶಿ ಪ್ರಜೆಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಇದೊಂದು ಆಕಸ್ಮಿಕ ಸಾವು ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್‌ ಮೀನಾ ತಿಳಿಸಿದರು. ಆಫ್ರಿಕನ್‌ ಪ್ರಜೆ ಬಗ್ಗೆ ಅವರ ಅಸೋಸಿಯೇಷನ್‌ನಿಂದ ಮಾಹಿತಿ ಪಡೆದುಕೊಳ್ಳಲಾಯಿತು. ಸಂಬಂಧಪಟ್ಟಅಧಿಕಾರಿಗಳಿಗೆ ವಿದೇಶಿ ಪ್ರಜೆ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ವಿವರಿಸಿದರು.

ಪ್ರತಿಭಟನೆ, ಹಲ್ಲೆ-ದಾಂಧಲೆ:

ಪೊಲೀಸರ ವಶದಲ್ಲಿದ್ದ ವೇಳೆ ಜೋಯೆಲ್‌ ಸಾವನ್ನಪ್ಪಿರುವ ವಿಷಯ ತಿಳಿದು ಐದಾರು ಮಂದಿ ಆಫ್ರಿಕಾ ಪ್ರಜೆಗಳು ಮಧ್ಯಾಹ್ನ 12 ಗಂಟೆ ಸುಮಾರಿಗೆ ಜೆ.ಸಿ.ನಗರ ಠಾಣೆ ಬಳಿ ಪ್ರತಿಭಟನೆ ನಡೆಸಿದರು. ಮಧ್ಯಾಹ್ನ 3.30ರ ಸುಮಾರಿಗೆ 15ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಠಾಣೆ ಬಳಿ ಜಮಾಯಿಸಿ ಪೊಲೀಸರನ್ನು ನಿಂದಿಸಿ, ಏಕಾಏಕಿ ಠಾಣೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಎಷ್ಟುಮನವೊಲಿಸಿದರೂ ಅವರು ಸಮಾಧಾನಗೊಳ್ಳಲಿಲ್ಲ. ಒಂದು ಹಂತದಲ್ಲಿ ಓರ್ವ ಆಫ್ರಿಕನ್‌ ವ್ಯಕ್ತಿ ಸಬ್‌ ಇನ್‌ಸ್ಪೆಕ್ಟರ್‌ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ವಿಷಯ ತಿಳಿದು ಡಿಸಿಪಿ ಧರ್ಮೇಂದ್ರ ಕುಮಾರ್‌ ಮೀನಾ ಠಾಣೆಗೆ ಆಗಮಿಸಿದ್ದರು. ಡಿಸಿಪಿ ಬಳಿಯೂ ವಿದೇಶಿ ಗ್ಯಾಂಗ್‌ ಕೂಗಾಡಿ, ತೀವ್ರ ಮಾತಿನ ಚಕಮಕಿ ನಡೆಸಿತು.

ಸ್ಥಳದಲ್ಲಿ ಬಿಗಿ ಭದ್ರತೆ:

ವಿದೇಶಿಗರ ಕೂಗಾಟ, ದಾಂಧಲೆ ಹೆಚ್ಚಾಗಿದ್ದರಿಂದ ಠಾಣೆ ಬಳಿ ಮುಂಜಾಗ್ರತಾ ಕ್ರಮವಾಗಿ ಎರಡು ಕೆಎಸ್‌ಆರ್‌ಪಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಈ ಮಧ್ಯೆಯೂ ಆರೋಪಿಗಳು ಮಹಿಳಾ ಪೊಲೀಸ್‌ ಸಿಬ್ಬಂದಿ ಬಳಿ ಅಸಭ್ಯವಾಗಿ ವರ್ತಿಸುತ್ತಾ ಕೂಗಾಡುತ್ತಿದ್ದರು. ಸಾರ್ವಜನಿಕವಾಗಿ ಅಧಿಕಾರಿಯೊಬ್ಬರ ಲಾಠಿ ಕಸಿದು ಬೆದರಿಸಿದ್ದಲ್ಲದೆ, ಮಹಿಳಾ ಸಬ್‌ ಇನ್‌ಸ್ಪೆಕ್ಟರ್‌ ಲತಾ ಅವರನ್ನು ಎಳೆದಾಡಿ ಹಲ್ಲೆಗೆ ಯತ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ತಿಳಿದ ಪೊಲೀಸರು ಆರೋಪಿಗಳ ವಿರುದ್ಧ ಲಾಠಿ ಪ್ರಹಾರ ನಡೆಸಿ ಚದುರಿಸಿದರು. ಈ ಸಂದರ್ಭದಲ್ಲಿ ಓಡಲು ಯತ್ನಿಸಿದವರನ್ನು ಬಂಧಿಸಲಾಯಿತು.

ಮೃತನ ವೀಸಾ ಮುಗಿದು 6 ವರ್ಷ!

ಪೊಲೀಸರ ವಶದಲ್ಲಿ ಸಾವನ್ನಪ್ಪಿರುವ ವಿದೇಶಿ ಪ್ರಜೆಯು ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ. ಈತನ ವೀಸಾ ಅವಧಿ 2015ರಲ್ಲಿಯೇ ಪೂರ್ಣಗೊಂಡಿದೆ. ಇನ್ನು 2017ರಲ್ಲಿ ಪಾಸ್‌ಪೋರ್ಟ್‌ ಅವಧಿ ಕೂಡ ಮುಗಿದಿದ್ದು, ಅಕ್ರಮವಾಗಿ ಬೆಂಗಳೂರು ನಗರದಲ್ಲಿ ನೆಲೆಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಗದ್ದಲಕ್ಕೇನು ಕಾರಣ?

- ಡ್ರಗ್ಸ್‌ ಮಾರುತ್ತಿದ್ದ ಕಾಂಗೋ ವ್ಯಕ್ತಿ ಭಾನುವಾರ ರಾತ್ರಿ ಬಂಧನ

- ಸೋಮವಾರ ಬೆಳಗಿನ ಜಾವ ಆತನಿಗೆ ಹೃದಯಾಘಾತ, ಸಾವು

- ಸಾವಿಗೆ ಪೊಲೀಸರು ಕಾರಣ ಎಂದು ಮೃತನ ಸ್ನೇಹಿತರ ಆರೋಪ

- ಪೊಲೀಸ್‌ ಠಾಣೆಗೆ ಮುತ್ತಿಗೆ, ಪೊಲೀಸರ ಮೇಲೆ ಹಲ್ಲೆಗೆ ಯತ್ನ

- ಈ ವೇಳೆ ಉದ್ರಿಕ್ತರನ್ನು ಓಡಿಸಲು ಪೊಲೀಸರಿಂದ ಲಾಠಿ ಪ್ರಹಾರ

click me!