
ಬೆಂಗಳೂರು (ಜ.10): ಬೆಂಗಳೂರಿನ ಬನಶಂಕರಿ ವ್ಯಾಪ್ತಿಯಲ್ಲಿ ನಡೆದ ವಿಚ್ಛೇದಿತ ಮಹಿಳೆಯ ಮೇಲಿನ ವಂಚನೆ ಹಾಗೂ ಲಿವಿಂಗ್ ರಿಲೇಷನ್‌ಶಿಪ್ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ. ನಟ ಮೋಹನ್ ರಾಜ್ ವಿರುದ್ಧ ಮಹಿಳೆ ಗಂಭೀರ ಆರೋಪಗಳನ್ನು ಮಾಡಿದ್ದರೆ, ಇತ್ತ ಮೋಹನ್ ರಾಜ್ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
ಬನಶಂಕರಿ ನಿವಾಸಿಯಾದ ವಿಚ್ಛೇದಿತ ಮಹಿಳೆಯೊಬ್ಬರಿಗೆ ಕಳೆದ ಹತ್ತು ವರ್ಷಗಳಿಂದ ಮೋಹನ್ ರಾಜ್ ಪರಿಚಯವಿತ್ತು. 2021ರಲ್ಲಿ ಆಕೆಗೆ ಮೊದಲ ಪತಿಯಿಂದ ವಿಚ್ಛೇದನ ಕೊಡಿಸುವಲ್ಲಿಯೂ ಮೋಹನ್ ರಾಜ್ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. 2022ರಲ್ಲಿ ಇಬ್ಬರೂ ವಿವಾಹವಾಗಿದ್ದು, 2023ರಲ್ಲಿ ಇವರಿಗೊಂದು ಹೆಣ್ಣು ಮಗು ಕೂಡ ಜನಿಸಿದೆ. ಆದರೆ, 2025ರಲ್ಲಿ ಮೋಹನ್ ರಾಜ್ ಮನೆ ಬಿಟ್ಟು ಹೋದವನು ಮತ್ತೆ ಮರಳಿ ಬಂದಿಲ್ಲ. ಈ ಬಗ್ಗೆ ಕೇಳಲು ಹೋದರೆ ಹಲ್ಲೆ ನಡೆಸಲಾಗುತ್ತಿದೆ ಎಂದು ಮಹಿಳೆ ದೂರಿದ್ದಾರೆ.
ಮನೆ ಕಟ್ಟಿ ಹೊಸ ಜೀವನ ಶುರು ಮಾಡೋಣ ಎಂದು ನಂಬಿಸಿದ ಮೋಹನ್ ರಾಜ್, ಮಹಿಳೆಯಿಂದ ಹಂತ ಹಂತವಾಗಿ ಸುಮಾರು 36 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ಪಡೆದುಕೊಂಡು ಎಸ್ಕೇಪ್ ಆಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. 'ಈಗ ಕೇಳಿದರೆ ನೀನು ಯಾರು ಎಂದೇ ಗೊತ್ತಿಲ್ಲ ಎಂದು ಉದ್ಧಟತನ ತೋರುತ್ತಿದ್ದಾನೆ, ಅಲ್ಲದೆ ಬೇರೆ ಯುವತಿಯರ ಜೊತೆಗೂ ಸಂಬಂಧ ಹೊಂದಿದ್ದಾನೆ' ಎಂದು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಹಿಳೆಯ ಆರೋಪಗಳೆಲ್ಲ ಸುಳ್ಳು ಎಂದ ನಟ ಮೋಹನ್ ರಾಜ್!
ತನ್ನ ವಿರುದ್ಧ ಕೇಳಿಬಂದಿರುವ ವಂಚನೆಯ ಆರೋಪಗಳನ್ನು ನಟ ಮೋಹನ್ ರಾಜ್ ನಿರಾಕರಿಸಿದ್ದಾರೆ. ನಾನು ಆಕೆಯನ್ನು ಮದುವೆಯಾಗಿಲ್ಲ, ನಾವಿಬ್ಬರೂ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದೆವು ಎಂಬುದು ಸತ್ಯ. ಆ ಮಗು ನಂದೇ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಆಕೆ ಹೇಳುತ್ತಿರುವುದೆಲ್ಲ ಸುಳ್ಳು. ಸಿನಿಮಾ ಪ್ರೊಮೋಷನ್‌ಗೆ ತೆಗೆಸಿದ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಜಾತಿ ನಿಂದನೆ ಸುಳ್ಳು, ಉಲ್ಟಾ ಹಣ ಕೊಡಬೇಕಿದೆ ಎಂದ ಮೋಹನ್
ಮಹಿಳೆಯ ಜಾತಿ ನಿಂದನೆ ಆರೋಪ ಸುಳ್ಳು ಎಂದಿರುವ ಮೋಹನ್ ರಾಜ್, ಆಕೆಯೇ ನಮಗೆ 12 ಲಕ್ಷ ರೂಪಾಯಿ ಹಣ ನೀಡಬೇಕಿದೆ. ನಮ್ಮ ತಂದೆ ಮನೆ ಕಟ್ಟಿದ ನಂತರ ಆಕೆ ಕಿರುಕುಳ ನೀಡಲು ಆರಂಭಿಸಿದಳು. ಒಮ್ಮೆ ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಕೂಡ ಬಂದಿದ್ದಳು. ಈ ಸಂಬಂಧ ನಾವು ಕೂಡ ಆಕೆಯ ವಿರುದ್ಧ ಎರಡು ದೂರುಗಳನ್ನು ನೀಡಿದ್ದೇವೆ. ಆಕೆ ಪದೇ ಪದೇ ಪೊಲೀಸರಿಗೆ ಸುಳ್ಳು ದೂರು ನೀಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.
ಪೊಲೀಸ್ ನಿರ್ಲಕ್ಷ್ಯದ ವಿರುದ್ಧ ಸಂತ್ರಸ್ತೆಯ ಆಕ್ರೋಶ
ಇದುವರೆಗೆ ನಾಲ್ಕು ಬಾರಿ ದೂರು ನೀಡಿದರೂ ಪೊಲೀಸರಿಂದ ನ್ಯಾಯ ಸಿಗುತ್ತಿಲ್ಲ. ಬದಲಾಗಿ ನಿನ್ನನ್ನೇ ಜೈಲಿಗೆ ಹಾಕುತ್ತೇವೆ ಎಂದು ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಮೋಹನ್ ರಾಜ್ ಈ ಹಿಂದೆ 'ಬೆಂಗಳೂರು ಆಕಾಶವಾಣಿ ನಿಲಯ', 'ಆ್ಯಪಲ್ ಕೇಕ್' ಹಾಗೂ 'ಮುಖ್ಯಮಂತ್ರಿ ಕಳೆದೊದ್ನಪ್ಪ' ಎಂಬ ಸಿನಿಮಾಗಳಲ್ಲಿ ನಟಿಸಿದ್ದು, ಅದಕ್ಕೂ ಮುನ್ನ ಸಿನಿಮಾಗಳಲ್ಲಿ ಫೈಟರ್ ಆಗಿ ಕೆಲಸ ಮಾಡಿದ್ದರು. ಸದ್ಯ ಬನಶಂಕರಿ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ