
ಬೆಂಗಳೂರು : ಚರ್ಮ ರೋಗ ತಜ್ಞ ವೈದ್ಯೆ ಡಾ.ಕೃತಿಕಾ ಕೊಲೆ ಪ್ರಕರಣದ ಸಂಬಂಧ ಮೃತಳ ಪತಿ ಡಾ.ಮಹೇಂದ್ರ ರೆಡ್ಡಿ ವಿರುದ್ಧ ನ್ಯಾಯಾಲಯಕ್ಕೆ 3,700 ಪುಟಗಳ ಬೃಹತ್ ಆರೋಪಪಟ್ಟಿಯನ್ನು ಮಾರತ್ತಹಳ್ಳಿ ಪೊಲೀಸರು ಶುಕ್ರವಾರ ಸಲ್ಲಿಸಿದ್ದಾರೆ.
ಈ ಹತ್ಯೆಗೆ ಪತ್ನಿ ಅನಾರೋಗ್ಯದ ಬಗ್ಗೆ ಬೇಸರ ಹಾಗೂ ಹಲವು ಮಹಿಳೆಯರ ಜತೆ ಆರೋಪಿಯ ‘ಆಪ್ತ’ ಸ್ನೇಹವು ಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಮನೆಯಲ್ಲೇ ತನ್ನ ಪತ್ನಿಗೆ ಅರವಳಿಕೆ ಮದ್ದು ಕೊಟ್ಟು ಮಹೇಂದ್ರ ರೆಡ್ಡಿ ಹತ್ಯೆ ಕೃತ್ಯ ಮಾಡಿದ್ದ. ಈ ಕೊಲೆ ನಡೆದು ಆರು ತಿಂಗಳ ಬಳಿಕ ಬಯಲಾಗಿತ್ತು. ಈ ಪ್ರಕರಣವು ರಾಷ್ಟ್ರ ಮಟ್ಟದಲ್ಲಿ ಚರ್ಚೆ ನಡೆದು ತೀವ್ರ ಸಂಚಲನ ಸೃಷ್ಟಿಸಿತ್ತು. ಮೂರು ತಿಂಗಳ ಸುದೀರ್ಘ ತನಿಖೆ ನಡೆಸಿದ ಮಾರತ್ತಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡವು, ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿ ರೆಡ್ಡಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ದೋಷಾರೋಪ ಪಟ್ಟಿಯಲ್ಲಿ ಮರಣೋತ್ತರ ವರದಿ ಹಾಗೂ ಎಫ್‌ಎಸ್‌ಎಲ್ ವರದಿಗಳನ್ನು ಸಹ ಲಗತ್ತಿಸಿದ್ದಾರೆ ಎಂದು ಮೂಲಗಳು ಹೇಳಿವೆ.
2024ರ ಮೇ 26ರಂದು ಮುನೇಕೊಳಲುವಿನ ಕೃತಿಕಾ ರೆಡ್ಡಿ ಹಾಗೂ ಮಹೇಂದ್ರ ರೆಡ್ಡಿ ವಿವಾಹವಾಗಿದ್ದರು. ಮದುವೆ ಬಳಿಕ ಆರಂಭದಲ್ಲಿ ಅನ್ಯೋನವಾಗಿಯೇ ದಂಪತಿ ಇದ್ದರು. ಆದರೆ ಬಾಲ್ಯದಿಂದಲೂ ಕೃತಿಕಾ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಳು. ಈ ವಿಚಾರ ತಿಳಿದ ಮಹೇಂದ್ರ ರೆಡ್ಡಿ, ತನಗೆ ಅನಾರೋಗ್ಯ ಬಗ್ಗೆ ಹೇಳದಂತೆ ಮೋಸದಿಂದ ಮದುವೆ ಮಾಡಿದ್ದಾರೆ ಎಂದು ಮೃತಳ ಪೋಷಕರ ಮೇಲೆ ಬೇಸರಗೊಂಡಿದ್ದ. ಇದಾದ ಬಳಿಕ ದಂಪತಿ ಮಧ್ಯೆ ಮನಸ್ತಾಪ ಮೂಡಿತ್ತು. ಬಳಿಕ 10ಕ್ಕೂ ಹೆಚ್ಚಿನ ವೈದ್ಯೆಯರು ಸೇರಿದಂತೆ ಕೆಲ ಮಹಿಳೆಯರ ಜತೆ ಮಹೇಂದ್ರ ರೆಡ್ಡಿಗೆ ಸಲುಗೆ ಇತ್ತು. ಈ ಸ್ನೇಹ ವಿಷಯ ತಿಳಿದು ಕೃತಿಕಾ ಆಕ್ಷೇಪ ವ್ಯಕ್ತಪಡಿಸಿದ್ದಳು.
ಈ ಬೆಳವಣಿಗೆಯಿಂದ ಕೆರಳಿದ ಆರೋಪಿ, ತನ್ನ ಸ್ವೇಚ್ಛಾರಾದ ಬದುಕಿಗೆ ಅಡ್ಡಿಯಾಗಿದ್ದಾಳೆ ಎಂದು ಭಾವಿಸಿ ಪತ್ನಿ ಕೊಲೆಗೆ ನಿರ್ಧರಿಸಿದ್ದ. ಅಂತೆಯೇ ಅನಾರೋಗ್ಯಕ್ಕೀಡಾಗಿದ್ದ ಕೃತಿಕಾ ರೆಡ್ಡಿಗೆ ಕಾನೂನುಬಾಹಿರವಾಗಿ ನಿಗದಿತ ಪ್ರಮಾಣಕ್ಕಿಂತ ಅರವಳಿಕೆ ಮದ್ದು ನೀಡಿ ಹತ್ಯೆ ಮಾಡಿದ್ದ. ಈ ಹತ್ಯೆ ಬಳಿಕ ಸಭ್ಯಸ್ಥನಂತೆ ಆತ ನಟಿಸಿದ್ದ. ಆದರೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅರವಳಿಕೆ ಚುಚ್ಚು ಮದ್ದು ಸಾವಿಗೆ ಕಾರಣವಾದ ಅಂಶ ಉಲ್ಲೇಖವಾಯಿತು.
ಆರು ತಿಂಗಳ ಬಳಿಕ ಕೃತಿಕಾ ಸಾವಿನ ರಹಸ್ಯ ಬಯಲಾಗಿ ಭಾರಿ ಸಂಚಲನ ಸೃಷ್ಟಿಸಿತು. ಈ ಹತ್ಯೆ ಸಂಗತಿ ತಿಳಿದು ಆಘಾತಗೊಂಡ ಮೃತ ಕೃತಿಕಾ ತಂದೆ, ತಕ್ಷಣವೇ ಮಾರತ್ತಹಳ್ಳಿ ಠಾಣೆಗೆ ದೂರು ಸಲ್ಲಿಸಿದರು. ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸರು, ಉಡುಪಿಯಲ್ಲಿ ಆರೋಪಿಯನ್ನು ಬಂಧಿಸಿ ಕರೆತಂದಿದ್ದರು. ಬಳಿಕ ತನಿಖೆ ವೇಳೆ ಆತನ ಸ್ನೇಹಿತೆಯರ ಸಂಗವು ಬಯಲಾಯಿತು. ಈ ಸಂಬಂಧ ಮಹೇಂದ್ರ ರೆಡ್ಡಿಯ ಆಪ್ತ ಗೆಳೆತಿಯರನ್ನು ಸಹ ಪೊಲೀಸರು ತನಿಖೆಗೊಳಪಡಿಸಿದ್ದರು. ತಾನು ವೈದ್ಯ ಎಂದು ಹೇಳಿಕೊಂಡು ಅಕ್ರಮವಾಗಿ ಅರವಳಿಕೆ ಚುಚ್ಚು ಮದ್ದು ಖರೀದಿಸಿ ತಂದು ಪತ್ನಿಗೆ ರೆಡ್ಡಿ ನೀಡಿದ್ದು ಪತ್ತೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ