* ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು. ಬದುಕುವುದಕ್ಕೂ ಬಿಡುತ್ತಿರಲಿಲ್ಲ
* ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಆರೋಪಿಗಳು
* ಕೋರ್ಟ್‌ಗೆ ಹಾಜರ್
ಹುಬ್ಬಳ್ಳಿ(ಜು.07): ಚಂದ್ರಶೇಖರ ಗುರೂಜಿ ನಮಗೆ ಮಾನಸಿಕವಾಗಿ ಸಾಕಷ್ಟು ಕಿರುಕುಳ ನೀಡ್ತಾ ಇದ್ದರು. ಅದಕ್ಕಾಗಿ ನಾವೇ ಕೊಂದಿದ್ದೇವೆ..! ಇದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹಂತಕರು ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಚಂದ್ರಶೇಖರ ಗುರೂಜಿ ಕೊಲೆ ಬಳಿಕ ರಾಮದುರ್ಗ ಮಾರ್ಗವಾಗಿ ಬಾಗಲಕೋಟೆಗೆ ತೆರಳುತ್ತಿದ್ದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಅವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲಿಂದ ಅರೆಸ್ಟ್ ಮಾಡಿ ಕರೆದುಕೊಂಡು ಬಂದ ಮೇಲೆ ಬರೋಬ್ಬರಿ 20 ಗಂಟೆಗೂ ಅಧಿಕ ಕಾಲ ಅಜ್ಞಾತ ಸ್ಥಳದಲ್ಲಿಟ್ಟು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸರ ಪ್ರಶ್ನೆಗಳ ಸುರಿಮಳೆಗೆ ಅತ್ಯಂತ ಸರಳವಾಗಿಯೇ ಉತ್ತರ ನೀಡಿರುವ ಆರೋಪಿಗಳಿಬ್ಬರು, ಗುರೂಜಿ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಹತ್ಯೆ: ಎಫ್‌ಐಆರ್‌ನಲ್ಲಿ ಏನಿದೆ?
ಚಂದ್ರಶೇಖರ ಗುರೂಜಿ ಬಳಿಯೇ 10ರಿಂದ12 ವರ್ಷ ಕೆಲಸ ಮಾಡಿದ್ದೇವೆ. 2016ರಲ್ಲೇ ಕೆಲಸ ಬಿಟ್ಟಿದ್ದೇವೆ. ಅಲ್ಲಿಂದ ಹೊರಬಂದ ಬಳಿಕ ‘ನಮ್ಮ ಪಾಡಿಗೆ ನಾವು ಸ್ವಂತ ಉದ್ಯೋಗ ಮಾಡುತ್ತಾ ಜೀವನ ಸಾಗಿಸುತ್ತಿದ್ದೇವು. ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು. ಬದುಕುವುದಕ್ಕೂ ಬಿಡುತ್ತಿರಲಿಲ್ಲ, ಅಷ್ಟೊಂದು ಕಿರುಕುಳ ನೀಡುತ್ತಿದ್ದರು. ಮಾನಸಿಕವಾಗಿ ಬಹಳಷ್ಟು ಕಿರುಕುಳ ನೀಡಿದ್ದಾರೆ. ನಾವು ಎಲ್ಲೇ ಯಾವುದೇ ಬಿಜಿನೆಸ್ ಮಾಡಿದರೂ ಅವರ ಪಟಾಲಂ ನಮಗೆ ಬೆದರಿಕೆ ಹಾಕುತ್ತಿತ್ತು. ಒಂದಿಲ್ಲೊಂದು ಸಮಸ್ಯೆಯನ್ನು ತಂದಿಡುತ್ತಿತ್ತು’ ಎಂದು ಹೇಳಿಕೊಂಡಿದ್ದಾರೆ.
‘ಇವರಿಂದ ನಾವು ಹಲವು ಸಮಸ್ಯೆ ಎದುರಿಸಿದ್ದೇವೆ. ಬೇರೆ ಬೇರೆ ಊರುಗಳಲ್ಲಿ ಬಿಜಿನೆಸ್ ಮಾಡಿದರೂ ಇವರ ಕಿರಿಕಿರಿ ಮಾತ್ರ ತಪ್ಪಿರಲಿಲ್ಲ. ಹೀಗಾಗಿ ತಾಳ್ಮೆಗೆಟ್ಟು ನಾವೇ ಕೊಲೆ ಮಾಡಿದ್ದೇವೆ’ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೀಗೆ ಏಕೆ, ಕೊಲೆಗೆ ಕಾರಣವೇನು? ಅಲ್ಲಿ ಕೆಲಸದಲ್ಲಿದ್ದಾಗ ಯಾವ್ಯಾವ ಹುದ್ದೆಯಲ್ಲಿದ್ದರು? ಕೆಲಸದಲ್ಲಿದ್ದಾಗ ಗುರೂಜಿ ಮತ್ತು ಇವರ ನಡುವೆ ವ್ಯವಹಾರ ಹೇಗಿತ್ತು?. ಆಗ ಹಣಕಾಸಿನ ವ್ಯವಹಾರ ಏನಾದರೂ ನಡೆದಿದೆಯೇ? ಸರಳವಾಸ್ತು ಸಂಸ್ಥೆಯಿಂದ ಹೊರಬಂದ ಬಳಿಕ ಆರೋಪಿಗಳಿಬ್ಬರು ಯಾವ ಬಗೆಯ ಉದ್ಯೋಗ ನಡೆಸುತ್ತಿದ್ದರು? ಎಂಬ ಬಗ್ಗೆ ಪೊಲೀಸರು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆನ್ನಲಾಗಿದೆ. ಆದರೆ ಕೆಲವೊಂದಕ್ಕೆ ಉತ್ತರ ನೀಡಿರುವ ಆರೋಪಿಗಳು, ಕೆಲವೊಂದಕ್ಕೆ ಉತ್ತರ ನೀಡುವ ಗೋಜಿಗೆ ಹೋಗಿಲ್ಲ ಎಂದು ಮೂಲಗಳು ತಿಳಿಸಿವೆ.
ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಮುಗಿಸಿ ತೆರಳುವಾಗ ನಿಡಸೋಸಿ ಮಠದ ಸ್ವಾಮೀಜಿ ಕಾರು ಅಪಘಾತ
ಕೋರ್ಟ್‌ಗೆ ಹಾಜರ್:
ಬಳಿಕ ಆರೋಪಿಗಳಿಬ್ಬರನ್ನು 1ನೇ ಅಧಿಕ ದಿವಾಣಿ ಮತ್ತು ಜೆಎಂಎಫ್ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಆರೋಪಿಗಳನ್ನು 10 ದಿನ ಕಸ್ಟಡಿಗೆ ನೀಡುವಂತೆ ಪೊಲೀಸರು ಕೋರಿಕೊಂಡಿದ್ದರು. ಆದರೆ ನ್ಯಾಯಾಲಯ 6 ದಿನ ಮಾತ್ರ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಕ್ರೈಂ ಸೀನ್ ಕ್ಲೀನ್
ಈ ನಡುವೆ ಹತ್ಯೆ ನಡೆದಿರುವ ಇಲ್ಲಿನ ಉಣಕಲ್‌ನ ಪ್ರೆಸಿಡೆಂಟ್ ಹೋಟಲ್‌ನಲ್ಲಿನ ಕ್ರೈಂ ಸೀನ್ ಕ್ಲೀನ್ ಮಾಡಲಾಗಿದೆ. ಮಂಗಳವಾರ ರಾತ್ರಿಯೇ ಆರೋಪಿಗಳಿಬ್ಬರನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋದ ಪೊಲೀಸರು ಮಹಜರು ಮಾಡಿಸಿದ್ದರು. ಬಳಿಕ ಪೊಲೀಸರ ನಿರ್ದೇಶನದಂತೆ ಕ್ರೈಂ ಸೀನ್‌ನನ್ನು ಹೋಟೆಲ್ ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ. ಪ್ರೆಸಿಡೆಂಟ್ ಇಲ್ಲಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಒಂದಾಗಿದೆ. ಪ್ರತಿನಿತ್ಯ ಇಲ್ಲಿ ಜನಜಂಗುಳಿಯಿಂದ ಕೂಡಿರುತ್ತಿತ್ತು. ಗಣ್ಯಾತಿಗಣ್ಯರು ಇಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆದರೆ ಯಾವಾಗ ಚಂದ್ರಶೇಖರ ಗುರೂಜಿ ಹತ್ಯೆಯಾಗಿದೆಯೋ ಆಗಿನಿಂದ ಇಲ್ಲಿ ಜನರ ಓಡಾಟ ಕಡಿಮೆಯಾಗಿದೆ.