
ಬೆಂಗಳೂರು(ಫೆ.05): ಮನೆಗಳ್ಳತನ ಕೃತ್ಯದಲ್ಲಿ ಸಂಪಾದಿಸಿದ ಸ್ನೇಹಿತೆಗೆ 3 ಕೋಟಿ ಮೌಲ್ಯದ ಮನೆ ಹಾಗೂ ನಟಿಯರಿಗೆ ದುಬಾರಿ ಬೆಲೆಯ ಉಡುಗೊರೆ ಕೊಡುತ್ತಿದ್ದ ಶೋಕಿಲಾಲ ಖದೀಮನೊಬ್ಬನನ್ನು ಮಡಿವಾಳ ಠಾಣೆ ಪೊಲೀಸರ ಬಂಧಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಪಂಚಾಕ್ಷರಿ ಬಂಧಿತನಾಗಿದ್ದು, ಆರೋಪಿಯಿಂದ 181 ಗ್ರಾಂ ಚಿನ್ನ ಹಾಗೂ 333 ಗ್ರಾಂ ಬೆಳ್ಳಿ ಸೇರಿ 12.25 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಮಾರುತಿ ನಗರದಲ್ಲಿ ಮನೆ ಬೀಗ ಮುರಿದು ಕಿಡಿಗೇಡಿಗಳು ಚಿನ್ನಾಭರಣ ದೋಚಿದ್ದರು. ಈ ಬಗ್ಗೆ ತನಿಖೆಗಿಳಿದ ಇನ್‌ಸ್ಪೆಕ್ಟರ್ ಎಂ.ಎ.ಮೊಹಮ್ಮದ್ ನೇತೃತ್ವದ ತಂಡವು, ಬೆರಳಚ್ಚು ಹಾಗೂ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದೆ.
ಅನೈತಿಕ ಸಂಬಂಧದ ಅನುಮಾನ: ಹೆಂಡತಿಯನ್ನು ಕೊಂದು ಪೊಲೀಸರಿಗೆ ಶರಣಾದ ಗಂಡ!
ರೈಲ್ವೆ ಉದ್ಯೋಗಿ ಮಗ ಕಳ್ಳನಾದ:
ರೈಲ್ವೆ ಇಲಾಖೆಯಲ್ಲಿ ಪಂಚಾಕ್ಷರಿ ತಾಯಿ ನೌಕರಿಯಲ್ಲಿದ್ದು, ತನ್ನ ಕುಟುಂಬದ ಜತೆ ಸೊಲ್ಲಾಪುರದಲ್ಲಿ ಅವರು ನೆಲೆಸಿದ್ದರು. ಅಪ್ರಾಪ್ತ ವಯಸ್ಸಿನಿಂದಲೇ ಹಾದಿ ತಪ್ಪಿದ್ದ ಪಂಚಾಕ್ಷರಿ, ತನ್ನ 16ನೇ ವರ್ಷದಲ್ಲೇ ಅಪರಾಧ ಆರೋಪ ಹೊತ್ತು ಬಾಲಮಂದಿರದಲ್ಲಿದ್ದ. ಆನಂತರ ಮನೆಗಳ್ಳತನವನ್ನು ಆತ ವೃತ್ತಿಯಾಗಿಸಿಕೊಂಡಿದ್ದು, ಗುಜರಾತ್, ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಅವನ ಮೇಲೆ 150ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.
ಹಗಲು ಹೊತ್ತಿನಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿಯಲ್ಲಿ ಆ ಮನೆಗಳ ಬೀಗ ಮುರಿದು ಕೈಗೆ ಸಿಕ್ಕಿದ್ದನ್ನು ಆತ ದೋಚುತ್ತಿದ್ದ. ಅಂತೆಯೇ ಮಾರುತಿ ನಗರದಲ್ಲಿ ಸಹ ಮನೆ ಬೀಗ ಮುರಿದು 410 ಗ್ರಾಂ ಚಿನ್ನವನ್ನು ಆರೋಪಿ ಕಳವು ಮಾಡಿದ್ದ.
ಶೋಕಿಲಾಲ-ನಟಿಯರಿಗೆ ಗಿಫ್ಟ್:
ಆರೋಪಿ ಪಂಚಾಕ್ಷರಿಗೆ ವಿವಾಹವಾಗಿದ್ದು, ಆತನಿಗೆ ಓರ್ವ ಮಗನಿದ್ದಾನೆ. ಆದರೆ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಆತನ ಪತ್ನಿ ಪ್ರತ್ಯೇಕವಾಗಿದ್ದಾಳೆ. 2016ರಲ್ಲಿ ಮನೆಗಳ್ಳತನ ಪ್ರಕರಣದಲ್ಲಿ ಪಂಚಾಕ್ಷರಿಯನ್ನು ಬಂಧಿಸಿ ಗುಜರಾತ್ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಆಗ 6 ವರ್ಷಗಳು ಆತ ಜೈಲಿನಲ್ಲಿದ್ದ.
ಚಾಮರಾಜನಗರ: ಪ್ರಿಯಕರೊಂದಿಗೆ ಸೇರಿ ಪತಿ ಕೊಲೆ, ಶವ ಬಿಸಾಡಿ ನಾಪತ್ತೆ ನಾಟಕವಾಡಿದ ಪತ್ನಿ!
'ಇನ್ನು ಮೊದಲಿನಿಂದಲೂ ಪಂಚಾಕರಿಗೆ ವಿಪರೀತ ಹೆಂಗಸರ ಖಯಾಲಿ ಈ ವ್ಯಸನವು ಆತನ ಕೌಟುಂಬಿಕ ಕಲಹಕ್ಕೂ ಮೂಲ ಕಾರಣವಾಗಿದೆ. ಮನೆಗಳ್ಳತನ ಕೃತ್ಯದಲ್ಲಿ ದೋಚಿದ್ದ ಬಂಗಾರವನ್ನು ಕರಗಿಸಿ ಆರೋಪಿ ಮಾರುತ್ತಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಸಿನಿಮಾ ನಟಿಯರನ್ನು ಪರಿಚಯಿಸಿಕೊಂಡು ಅವರಿಗೆ ದುಬಾರಿ ಮೌಲ್ಯದ ಉಡುಗೊರೆ ಕೊಟ್ಟು ಆತ ಓಲೈಸಿಕೊಳ್ಳುತ್ತಿದ್ದ. ಇದೇ ರೀತಿ 2012ರಲ್ಲಿ ಬಾಲಿವುಡ್ ನಟಿಯೊಬ್ಬಳಿಗೆ 15 ಲಕ್ಷ, ಧಾರಾವಾಹಿ ನಟಿಗೆ 22 ಲಕ್ಷ ಮೌಲ್ಯದ ಅಕ್ಟೋರಿಯಂ ಹಾಗೂ ಕೋಲ್ಕತ್ತಾದಲ್ಲಿರುವ ಗೆಳತಿಗೆ 3 ಕೋಟಿ ಬೆಲೆಯ ಮನೆ ಕಟ್ಟಿಸಿಕೊಟ್ಟಿರುವುದಾಗಿ ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದಾನೆ.
ಆದರೆ ಆತನ ಉಡುಗೊರೆ ಹಾಗೂ ಮನೆ ಕೊಟ್ಟಿರುವುದ್ದಕ್ಕೆ ತನಿಖೆಯಲ್ಲಿ ಪುರಾವೆಗಳು ಲಭ್ಯವಾಗಿಲ್ಲ. ಹಳೇ ಕತೆಯನ್ನು ಪಂಚಾಕ್ಷರಿ ಹೇಳಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ