Bengaluru Crime: ಪ್ರಿಯಾಂಕ್‌ ಖರ್ಗೆ ಪತ್ನಿ ಮೊಬೈಲ್‌ ಕದ್ದಿದ್ದವರ ಸೆರೆ

By Kannadaprabha News  |  First Published Feb 15, 2022, 5:27 AM IST

*   ವಾಕಿಂಗ್‌ ಮಾಡುವಾಗ ಫೋನ್‌ ದೋಚಿದ್ದ ಕಳ್ಳರು
*   ಆಂಧ್ರದಿಂದ ಗಾಂಜಾ ತಂದು ನಗರದಲ್ಲಿ ಮಾರ್ತಿದ್ದ ಗ್ಯಾಂಗ್‌
*   ಗಿರಾಕಿಗಳಿಗೆ ದುಬಾರಿ ದರಕ್ಕೆ ಗಾಂಜಾ ಮಾರಾಟ 


ಬೆಂಗಳೂರು(ಫೆ.15):  ವಾಕಿಂಗ್‌ ಮಾಡುವಾಗ ಶಾಸಕ ಪ್ರಿಯಾಂಕ್‌ ಖರ್ಗೆ(Piryank Kharge) ಅವರ ಪತ್ನಿ ಶ್ರುತಿ ಅವರ ಐಫೋನ್‌(iPhone) ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಸದಾಶಿವನಗರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಶಿವಾಜಿನಗರ ಖಾಜಾ ಮೋಯಿನ್‌(30) ಮತ್ತು ಕಾವಲ್‌ ಬೈರಸಂದ್ರದ ಶೇಕ್‌ ಇಲಿಯಾಜ್‌(25) ಬಂಧಿತರು. ಶ್ರುತಿ ಅವರು ಫೆ.6ರಂದು ಬೆಳಗ್ಗೆ 6.45ರಲ್ಲಿ ಸದಾಶಿವನಗರದ ಅಫಿನಿಟಿ ಜಿಮ್‌ ಬಳಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ವಾಕಿಂಗ್‌(walking) ಮಾಡುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಆರೋಪಿಗಳು(Accused) ಏಕಾಏಕಿ ಮೊಬೈಲ್‌ ಕಿತ್ತುಕೊಂಡು ಸ್ಯಾಂಕಿ ಕೆರೆ ಕಡೆಗೆ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ತನಿಖೆ ಕೈಗೊಂಡು ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ(CCTV) ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಇದರ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

Drugs Case: ಬೆಂಗ್ಳೂರಲ್ಲಿ ಗಾಂಜಾ ಮಾರಾಟ: ಮೂವರು ಅಂತಾರಾಜ್ಯ ಪೆಡ್ಲರ್‌ಗಳ ಬಂಧನ

ದರೋಡೆ ಪ್ರಕರಣ ಬೆಳಕಿಗೆ:

ಮೊಬೈಲ್‌ ದರೋಡೆ(Mobile Robbery) ಪ್ರಕರಣದ ವಿಚಾರಣೆ ವೇಳೆ ಆರೋಪಿಗಳು ಇತ್ತೀಚೆಗೆ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಕ್ಯಾಬ್‌ ಚಾಲಕನ ಸುಲಿಗೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸಹಚರರಾದ ಶಿವಾಜಿನಗರದ ಜಬೀ(28), ಅಸ್ಲಂ(24) ಮತ್ತು ಶಾಹೀದ್‌(26) ಎಂಬುವವರನ್ನು ಬಂಧಿಸಿ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಂಟಿ ನಡಿಗೆದಾರರೇ ಟಾರ್ಗೆಟ್‌:

ಆರೋಪಿಗಳಾದ ಖಾಜಾ ಮೋಯಿನ್‌ ಮತ್ತು ಶೇಕ್‌ ಇಲಿಯಾಜ್‌ ಅಪರಾಧ(Crime) ಹಿನ್ನೆಲೆವುಳ್ಳವರಾಗಿದ್ದಾರೆ. ಈ ಹಿಂದೆ ಮೊಬೈಲ್‌ ಕಳವು, ಸುಲಿಗೆ, ದರೋಡೆ ಮೊದಲಾದ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿದ್ದರು. ಜಾಮೀನಿನ ಮೇಲೆ ಹೊರಬಂದ ಬಳಿಕವೂ ಅಪರಾಧಕೃತ್ಯಗಳಲ್ಲಿ ತೊಡಗಿದ್ದರು. ಆರೋಪಿಗಳು ದ್ವಿಚಕ್ರವಾಹನ ಕಳವು ಮಾಡಿ ನಗರದ ವಿವಿಧ ಬಡಾವಣೆಗಳಲ್ಲಿ ಸುತ್ತಾಡುತ್ತಿದ್ದರು. 

ಒಂಟಿಯಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಾ ರಸ್ತೆಯಲ್ಲಿ ನಡೆದು ಹೋಗುವವರನ್ನು ಗುರಿಯಾಗಿಸಿ ಮೊಬೈಲ್‌ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಕದ್ದ ಮೊಬೈಲ್‌ಗಳನ್ನು ಗಿರಾಕಿ ಹುಡುಕಿ ಕಡಿಮೆ ದರಕ್ಕೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದರು. ಬಳಿಕ ಆ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ರಿಕ್ಷಾದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ನಾಲ್ವರು ಪೆಡ್ಲ​ರ್ಸ್‌ ಸೆರೆ

ಬೆಂಗಳೂರು:  ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ನೆರೆಯ ಆಂಧ್ರಪ್ರದೇಶದ(Andhra Pradesh) ಇಬ್ಬರು ಸೇರಿದಂತೆ ನಾಲ್ವರು ಡ್ರಗ್ಸ್‌ ಪೆಡ್ಲರ್‌ಗಳನ್ನು(Drugs Peddlers) ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಲ್ಲಾಳ ಉಪನಗರದ ಅಲ್ಲಾಬಕಾಸ್‌(35) ಮತ್ತು ನಾಯಂಡಹಳ್ಳಿಯ ಸಲೀಮ್‌ ಖಾನ್‌(27), ಆಂಧ್ರಪ್ರದೇಶದ ಚಿತ್ತೂರು ಮೂಲದ ಚಂದು(19) ಮತ್ತು ಶೇಕ್‌ ಮನ್ಸೂರ್‌(19) ಬಂಧಿತರು. ಆರೋಪಿಗಳಿಂದ 43.30 ಕೆ.ಜಿ. ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru Drugs Racket: ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರ ಸೆರೆ

ಕಳೆದ ಗುರುವಾರ ಸಂಜೆ ಉಪ್ಪಾರಪೇಟೆ ಠಾಣಾ ವ್ಯಾಪ್ತಿಯ ಗಾಂಧಿನಗರದ ವೈ.ರಾಮಚಂದ್ರ ರಸ್ತೆಯಲ್ಲಿ ಇಬ್ಬರು ಅಪರಿಚಿತರು ಆಟೋರಿಕ್ಷಾದಲ್ಲಿ ಗಾಂಜಾ(Marijuana) ಇರಿಸಿಕೊಂಡು ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳಾದ ಅಲ್ಲಾಬಕಾಸ್‌ ಮತ್ತು ಸಲೀಮ್‌ ಖಾನ್‌ನನ್ನು ಮಾಲು ಸಹಿತ ಬಂಧಿಸಲಾಗಿತ್ತು. ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಭಾನುವಾರ ಆಂಧ್ರ ಮೂಲದ ಚಂದು ಮತ್ತು ಶೇಕ್‌ ಮನ್ಸೂರ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಗಳಾದ ಚಂದು ಮತ್ತು ಶೇಖ್‌ ಮನ್ಸೂರ್‌ ಆಂಧ್ರದಿಂದ ನಗರಕ್ಕೆ ಗಾಂಜಾ ತಂದು, ಅಲ್ಲಾಬಕಾಸ್‌ ಮತ್ತು ಸಲೀಮ್‌ ಖಾನ್‌ಗೆ ಮಾರಾಟ ಮಾಡುತ್ತಿದ್ದರು. ಈ ಇಬ್ಬರು ಆರೋಪಿಗಳು ನಗರದಲ್ಲಿ ಗಿರಾಕಿಗಳನ್ನು ಹುಡುಕಿ ದುಬಾರಿ ಮೊತ್ತಕ್ಕೆ ಗಾಂಜಾ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಡ್ರಗ್ಸ್‌ ಪೆಡ್ಲಿಂಗ್‌ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹೆಚ್ಚಿನ ತನಿಖೆಯಿಂದ ಈ ಗಾಂಜಾ ಮೂಲ ಹಾಗೂ ದಂಧೆಯಲ್ಲಿ ತೊಡಗಿರುವವರ ಮತ್ತಷ್ಟು ಮಾಹಿತಿ ಹೊರಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!