ಕಾಲಿಂಗ್‌ ಬೆಲ್‌ ಸದ್ದಿಗೆ ಪ್ರಕ್ರಿಯೆ ನೀಡದಿದ್ದರೆ ಮನೆ ಕಳ್ಳತನ ಖಚಿತ: ಎಚ್ಚರ ವಹಿಸಿ..!

By Kannadaprabha NewsFirst Published Nov 26, 2022, 8:30 AM IST
Highlights

ಬೀಗ ಹಾಕಿದ ಮನೆಗಳಿಗೆ ಹಾಡಹಗಲೇ ನುಗ್ಗಿ ಕಳವು ಮಾಡುತ್ತಿದ್ದ ಕಳ್ಳನನ್ನು ಬಂಧಿಸಿದ ಮಾಗಡಿ ರಸ್ತೆ ಠಾಣೆ ಪೊಲೀಸರು 

ಬೆಂಗಳೂರು(ನ.26):  ಬೀಗ ಹಾಕಿದ ಮನೆಗಳಿಗೆ ಹಾಡಹಗಲೇ ನುಗ್ಗಿ ಕಳವು ಮಾಡುತ್ತಿದ್ದ ಕಳ್ಳನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶನಗರ ನಿವಾಸಿ ಮಂಜುನಾಥ ಅಲಿಯಾಸ್‌ ಮಂಜ(40) ಬಂಧಿತ. ಆರೋಪಿಯಿಂದ .6.20 ಲಕ್ಷ ಮೌಲ್ಯದ 115 ಗ್ರಾಂ ತೂಕದ ಚಿನ್ನಾಭರಣಗಳು, 30 ಗ್ರಾಂ ತೂಕದ ಬೆಳ್ಳಿಯ ಕಾಲು ಚೈನು, ಒಂದು ಐಫೋನ್‌, ಎರಡು ವಾಚ್‌ಗಳನ್ನು ಜಪ್ತಿ ಮಾಡಲಾಗಿದೆ. 

ಇತ್ತೀಚೆಗೆ ರಾಜಾಜಿನಗರ 6ನೇ ಬ್ಲಾಕ್‌ ನಿವಾಸಿ ಶವರಣನ್‌ ಎಂಬುವವರ ಮನೆಯಲ್ಲಿ ಹಾಡಹಗಲೇ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಮಂಜ ವೃತ್ತಿಪರ ಕಳ್ಳನಾಗಿದ್ದು, ಈತನ ವಿರುದ್ಧ ಈ ಹಿಂದೆ ನಂದಿನಿ ಲೇಔಟ್‌, ಮಹಾಲಕ್ಷ್ಮಿ ಲೇಔಟ್‌, ಚಾಮರಾಜಪೇಟೆ, ಶ್ರೀರಾಮಪುರ, ಜೆ.ಪಿ.ನಗರ ಸೇರಿದಂತೆ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಮನೆಗಳವು ಸೇರಿದಂತೆ 15 ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿ ಜಾಮೀನು ಪಡೆದು ಹೊರಬಂದ ಬಳಿಕವೂ ತನ್ನ ಹಳೇ ಚಾಳಿ ಮುಂದುವರೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯ, ಹೆಣ್ಣಿನ ಸಂಗಕ್ಕಾಗಿ ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರ ಸೆರೆ

ಆರೋಪಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ಹಾಡಹಗಲೇ ಬೀಗ ಮುರಿದು ನುಗ್ಗಿ ಕಳ್ಳತನ ಮಾಡುತ್ತಿದ್ದ. ಮೊದಲು ಮನೆ ಬಳಿ ತೆರಳಿ ಕಾಲಿಂಗ್‌ ಬೆಲ್‌ ಒತ್ತುತ್ತಾನೆ. ಮನೆಯಲ್ಲಿ ಯಾರಾದರೂ ಇದ್ದಲ್ಲಿ ನೀರು, ಊಟ ಕೊಡಿ ಎಂದು ಕೇಳುತ್ತಾನೆ. ಯಾರು ಇಲ್ಲದಿರುವುದು ಖಚಿತವಾದರೆ, ಬೀಗ ಮೀಟಿ ಕಳವು ಮಾಡಿ ಪರಾರಿಯಾಗುತ್ತಾನೆ. ಆರೋಪಿ ಕಳ್ಳತನಕ್ಕೆ ಹೋಗುವಾಗ ಯಾವುದೇ ವಾಹನ ಬಳಸುವುದಿಲ್ಲ. ಪೊಲೀಸರಿಗೆ ಸಿಕ್ಕಿ ಬೀಳುವ ಭೀತಿಯಿಂದ ಮೊಬೈಲ್‌ ಉಪಯೋಗಿಸುವುದಿಲ್ಲ.

ಕದ್ದ ಬಳಿಕ 4 ಕಿ.ಮೀ. ವಾಕಿಂಗ್‌ ಹೋದ!

ರಸ್ತೆಯಲ್ಲಿ ಓಡಾಡಿಕೊಂಡು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬಳಿಕ ಬೀಗ ಮುರಿದು ನಗದು, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ. ರಾಜಾಜಿನಗರ ಮನೆಗಳವು ಪ್ರಕರಣದಲ್ಲಿಯೂ ಆರೋಪಿಯು ಕಳ್ಳತನ ಮಾಡಿಕೊಂಡು ಸುಮಾರು 4 ಕಿ.ಮೀ. ನಡೆದುಕೊಂಡೇ ಹೋಗಿದ್ದಾನೆ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಸಿಕ್ಕಿ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!