
ಬೆಂಗಳೂರು(ಮೇ.21): ಹಾಡಹಗಲೇ ಮನೆಯ ಬಾಗಿಲ ಬೀಗ ಮೀಟಿ ಒಳಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಖತರ್ನಾಕ್ ಕಳ್ಳನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಬ್ರಹ್ಮಣ್ಯಪುರದ ಅರೇಹಳ್ಳಿ ನಿವಾಸಿ ಮಣಿಕಂಠ ಅಲಿಯಾಸ್ ಮಣಿ (37) ಬಂಧಿತ. ಆರೋಪಿಯಿಂದ .2.30 ಲಕ್ಷ ಮೌಲ್ಯದ 41 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸಕೆರೆಹಳ್ಳಿ ನಿವಾಸಿ ಯೋಗೇಶ್ ಉರಾಳ್ ಎಂಬುವವರು ಮೇ 17ರ ಬೆಳಗ್ಗೆ 10ಕ್ಕೆ ಮನೆಯ ಬಾಗಿಲು ಬೀಗ ಹಾಕಿಕೊಂಡು ಕೆಲಸಕ್ಕೆ ತೆರಳಿದ್ದರು. ಸಂಜೆ 6ಕ್ಕೆ ಮನೆಗೆ ವಾಪಾಸಾದಾಗ ಬಾಗಿಲ ಲಾಕ್ ಮುರಿದಿರುವುದು ಕಂಡು ಬಂದಿದೆ. ಒಳಗೆ ತೆರಳಿ ಪರಿಶೀಲಿಸಿದಾಗ ಮನೆಯಲ್ಲಿದ್ದ ಚಿನ್ನಾಭರಣ ಕಳುವಾಗಿರುವುದು ಗೊತ್ತಾಗಿದೆ. ಬಳಿಕ ಅವರು ನೀಡಿದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್ ಬಿ.ಎನ್. ಸಂದೀಪ್‌ಕುಮಾರ್ ನೇತೃತ್ವದ ತಂಡ ಕೂಡಲೇ ಕಾರ್ಯಾಚರಣೆಗೆ ಇಳಿದು ಘಟನೆ ನಡೆದ 48 ತಾಸಿನೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.
ಮಗಳ ಅತ್ಯಾಚಾರಿ ಆರೋಪಿಗಳಿಗೆ ಶಿಕ್ಷೆ ನೀಡದೆ ಸಂಧಾನ ಮಾಡಿದ ಪೊಲೀಸರು; ಬೇಸತ್ತ ದಲಿತ ರೈತನ ಆತ್ಮಹತ್ಯೆ
ಬಂಧಿತ ಆರೋಪಿ ಮಣಿಕಂಠ ವೃತ್ತಿಪರ ಕಳ್ಳನಾಗಿದ್ದಾನೆ. ತಮಿಳುನಾಡು ಧರ್ಮಪುರಿ ಜಿಲ್ಲೆ ಮೂಲದ ಈತ ಈ ಹಿಂದೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಸುಬ್ರಹ್ಮಣ್ಯಪುರ, ಸಿ.ಕೆ.ಅಚ್ಚುಕಟ್ಟು, ಜಯನಗರ, ಹನುಮಂತನಗರ, ತಾವರೆಕೆರೆ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಎಸಗಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಬಳಿಕವೂ ಆರೋಪಿಯು ತನ್ನ ಚಾಳಿ ಮುಂದುವರೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ