ಮದ್ಯ ಸೇವಿಸುವಾಗ ಹಳೇ ದ್ವೇಷಕ್ಕೆ ಜಗಳ, ಅಡ್ಡಗಟ್ಟಿ ಮಾರಕಾಸ್ತ್ರ ಬೀಸಿದ ರಭಸಕ್ಕೆ ಎಡಗೈ ಕಟ್
ಬೆಂಗಳೂರು(ನ.03): ಕುಡಿದ ಅಮಲಿನಲ್ಲಿ ಬಾರ್‌ನಲ್ಲಿ ಗಲಾಟೆ ಬಳಿಕ ಅದೇ ದ್ವೇಷದಿಂದ ಯುವಕನೊಬ್ಬನ ಕೈ ಕತ್ತರಿಸಿ ದುಷ್ಕರ್ಮಿಗಳು ಪುಂಡಾಟಿಕೆ ನಡೆಸಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಡಲಪಾಳ್ಯದ ನಿವಾಸಿ ಪ್ರಜ್ವಲ್ ಹಲ್ಲೆಗೊಳಗಾಗಿದ್ದು, ಈ ಘಟನೆ ಸಂಬಂಧ ಲಗ್ಗೆರೆ ಕೆಂಪೇಗೌಡ ನಗರದ ಹರೀಶ್‌ನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನು ಕೆಲ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ನಾಲ್ಕು ದಿನಗಳ ಹಿಂದೆ ನಂದಿನಿ ಲೇಔಟ್‌ನ ಕದಂಬ ಬಾರ್‌ನಲ್ಲಿ ಮದ್ಯ ಸೇವಿಸುವಾಗ ಪ್ರಜ್ವಲ್ ಸ್ನೇಹಿತನಿಗೂ ಹರೀಶ್‌ಗೆ ಜಗಳವಾಗಿದೆ. ಇದಾದ ಬಳಿಕ ಮನೆಗೆ ಮರಳುವಾಗ ಪ್ರಜ್ವಲ್ ಮೇಲೆ ಹರೀಶ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಪತ್ನಿ ಕೊಲೆಗೈದು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾದ ಪತಿ?
ಕೆಲಸವಿಲ್ಲದೆ ಅಲೆಯುತ್ತಿದ್ದ ಮೂಡಲಪಾಳ್ಯದ ಪ್ರಜ್ವಲ್, ಇತ್ತೀಚೆಗೆ ಸ್ವಂತ ಉದ್ಯಮ ಆರಂಭಿಸುವ ಸಂಬಂಧ ತಯಾರಿ ನಡೆಸುತ್ತಿದ್ದ. ತನ್ನ ನಾಲ್ವರು ಸ್ನೇಹಿತರ ಜೊತೆ ಅ.28ರಂದು ನಂದಿನಿ ಲೇಔಟ್‌ನ ಕದಂಬ ಬಾರ್‌ಗೆ ಮದ್ಯ ಸೇವನೆಗೆ ಆತ ತೆರಳಿದ್ದ. ಅದೇ ವೇಳೆ ಆ ಬಾರ್‌ಗೆ ಹರೀಶ್ ಹಾಗೂ ಆತನ ಸ್ನೇಹಿತರು ಬಂದಿದ್ದರು. ಆಗ ಪ್ರತ್ಯೇಕ ಟೇಬಲ್‌ನಲ್ಲಿ ಕುಳಿತು ಎರಡು ತಂಡಗಳು ಮದ್ಯ ಸೇವಿಸುತ್ತಿದ್ದವು. ಮೊದಲಿನಿಂದಲೂ ಪ್ರಜ್ವಲ್ ಸ್ನೇಹಿತ ಮತ್ತು ಹರೀಶ್ ಮಧ್ಯೆ ಮನಸ್ತಾಪವಿತ್ತು. ಹೀಗಾಗಿ ಮದ್ಯ ಸೇವಿಸುವಾಗ ಅದೇ ದ್ವೇಷದಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಮಧ್ಯ ಪ್ರವೇಶಿಸಿದ ಬಾರ್ ಸಿಬ್ಬಂದಿ, ಗಲಾಟೆನಿರತನ್ನು ಶಾಂತಗೊಳಿಸಿ ಹೊರಕಳುಹಿಸಿದ್ದರು.
ಬಾರ್‌ನಿಂದ ಹೊರಬಂದ ಪ್ರಜ್ವಲ್, ತನ್ನ ಗೆಳೆಯರ ಜತೆ ಮನೆಗೆ ಮರಳುತ್ತಿದ್ದ. ಬಾರ್ ಗಲಾಟೆ ಹಿನ್ನಲೆಯಲ್ಲಿ ಕೆರಳಿದ ಹರೀಶ್ ಹಾಗೂ ಆತನ ಸ್ನೇಹಿತರು, ಕುರುಬರಹಳ್ಳಿ ಪೈಪ್‌ಲೈನ್ ರಸ್ತೆಯಲ್ಲಿ ಪ್ರಜ್ವಲ್‌ನನ್ನು ಅಡ್ಡಗಟ್ಟಿಆರೋಪಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಪ್ರಜ್ವಲ್ ಎಡಗೈ ತುಂಡಾಗಿದ್ದು, ಕೂಡಲೇ ಆತನನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.