ಕಾಲೇಜು ಬಳಿ ನಿಲ್ಲಿಸದ ಬಸ್ ಡ್ರೈವರ್: ಚಲಿಸುತ್ತಿದ್ದ ಬಸ್‌ನಿಂದ ಇಳಿದು ವಿದ್ಯಾರ್ಥಿನಿ ಸಾವು!

By Kannadaprabha NewsFirst Published Apr 14, 2023, 11:02 AM IST
Highlights

ಬಸ್ಸಿನಿಂದ ಇಳಿಯುವಾಗ ಜಾರಿ ಬಿದ್ದು ತೀವ್ರ ಗಾಯಗೊಂಡಿದ್ದ ತಾಲೂಕಿನ ಹುಲಿಗುಡ್ಡದ ಬಳಿ ಇರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದಾಳೆ.

ಹೂವಿನಹಡಗಲಿ (ಏ.14) : ಬಸ್ಸಿನಿಂದ ಇಳಿಯುವಾಗ ಜಾರಿ ಬಿದ್ದು ತೀವ್ರ ಗಾಯಗೊಂಡಿದ್ದ ತಾಲೂಕಿನ ಹುಲಿಗುಡ್ಡದ ಬಳಿ ಇರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದಾಳೆ.

ಶ್ವೇತಾ ಎಲ್‌. ಶಾಂತಪ್ಪ(Shwetha L Shantappa)ನವರ ಮೃತಪಟ್ಟವಿದ್ಯಾರ್ಥಿನಿ. ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿ(Govt engineering collage)ನಲ್ಲಿ ಇ ಆ್ಯಂಡ್‌ ಸಿ ವಿಭಾಗದಲ್ಲಿ ಪ್ರಥಮ ವರ್ಷ ಅಭ್ಯಾಸ ಮಾಡುತ್ತಿದ್ದಳು.

ರಾತ್ರಿ ಹೃದಯಾಘಾತಕ್ಕೆ ತಂದೆ ಸಾವು: 700 ಕಿಮೀ ಕ್ರಮಿಸಿ ಅಂತಿಮ ದರ್ಶನ ಪಡೆದ ಮಗಳು ಬೆಳಗ್ಗೆ ಪರೀಕ್ಷೆಗೆ ಹಾಜರು!

ಈ ವಿದ್ಯಾರ್ಥಿನಿ ತಾಲೂಕಿನ ಹೊಳಲು ಗ್ರಾಮದವರಾಗಿದ್ದು, ಬುಧವಾರ ಹೊಳಲಿನಿಂದ ಕಾಲೇಜು ಶುಲ್ಕ ಪಾವತಿ ಮಾಡಲು ರಾಣೆಬೆನ್ನೂರು ಘಟಕದ ಬಸ್ಸಿನಲ್ಲಿ ಸಂಚರಿಸುತ್ತಿದ್ದಳು. ಕಾಲೇಜು ಹತ್ತಿರ ನಿಲುಗಡೆ ಇಲ್ಲದಿದ್ದರೂ ಇಳಿಯಲು ಯತ್ನಿಸಿದ ಕಾರಣ ಆಯತಪ್ಪಿ ಬಿದ್ದು ತೀವ್ರ ಗಾಯಗೊಂಡಿದ್ದಳು. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ.

ಈ ಕುರಿತು ಹೂವಿನಹಡಗಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಹಾರಕ್ಕೆ ಒತ್ತಾಯ:

ಶ್ವೇತಾಗೆ ತಂದೆ ಇಲ್ಲ, ಅಂಗವಿಕಲ ತಾಯಿಯನ್ನು ಪಾಲನೆ ಮಾಡುವ ಜವಾಬ್ದಾರಿ ಹೊತ್ತಿದ್ದಳು. ಈ ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಕೊಡಿಸುವ ಜತೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಎಬಿವಿಪಿ ನಗರ ಘಟಕ ಒತ್ತಾಯಿಸಿ ರಸ್ತೆತಡೆ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಮುಖಂಡರು. ಪಟ್ಟಣದಿಂದ 5 ಕಿಮೀ ದೂರದ ಸರ್ಕಾರಿ ಎಂಜಿಯರಿಂಗ್‌ ಕಾಲೇಜಿಗೆ ವಿದ್ಯಾರ್ಥಿಗಳು ಹೋಗಲು ಬಸ್ಸಿನ ಸೌಕರ್ಯ ಇಲ್ಲ. ಇಲ್ಲಿನ ಸಾರಿಗೆ ಘಟಕದಿಂದ ಸರಿಯಾಗಿ ಬಸ್‌ ಸೌಕರ್ಯದ ಜತೆಗೆ, ವಿವಿಧ ಘಟಕಗಳಿಂದ ಸಂಚರಿಸುವ ಪ್ರತಿ ಬಸ್‌ ಕಾಲೇಜು ಬಳಿ ನಿಲುಗಡೆ ಮಾಡಬೇಕು. ಎಂಜಿನಿಯರಿಂಗ್‌ ಕಾಲೇಜು ಬಳಿ ಬಸ್‌ ನಿಲುಗಡೆ ನಾಮಫಲಕ ಅಳವಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್‌ ಕೆ. ಶರಣಮ್ಮ ವಿದ್ಯಾರ್ಥಿಗಳ ಬೇಡಿಕೆಗಳನ್ನು ಆಲಿಸಿದರು. ಜತೆಗೆ ಕಾಲೇಜು ಪ್ರಾಚಾರ್ಯರಿಂದ ಸಮಸ್ಯೆಗಳ ಕುರಿತು ಮಾಹಿತಿ ಪಡೆದ ಅವರು, ಜತೆಗೆ ವಿವಿಧ ಸಾರಿಗೆ ಘಟಕಗಳ ಅಧಿಕಾರಿಗಳಿಗೆ ಪತ್ರ ಬರೆದು ಪ್ರತಿಯೊಂದು ಬಸ್‌ ಕಾಲೇಜು ಬಳಿ ನಿಲುಗಡೆ ಮಾಡಬೇಕು. ಇಲ್ಲದಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಕಾಲೇಜು ಕಡ್ಡಾಯ ನಿಲುಗಡೆ ನಾಮಫಲಕ ಹಾಕಬೇಕು ಎಂದು ಹೂವಿನಹಡಗಲಿ ಸಾರಿಗೆ ಘಟಕಾಧಿಕಾರಿ ವೆಂಕಟಚಲಪತಿ ಅವರಿಗೆ ತಾಕೀತು ಮಾಡಿದರು.

ಡ್ಯಾಂನಲ್ಲಿ ಈಜಲು ಹೋಗಿ ಕಾಲೇಜು ವಿದ್ಯಾರ್ಥಿನಿಯರು ಸಾವು: ಟ್ರಿಪ್‌ಗೆ ಹೋದವರು ಮಸಣ ಸೇರಿದರು

ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ತಾತ್ಕಾಲಿಕವಾಗಿ .15 ಸಾವಿರ ಪರಿಹಾರ ಕೊಡುತ್ತೇವೆ. ಜತೆಗೆ ಉಳಿದ ಪರಿಹಾರವನ್ನು ಆನಂತರದಲ್ಲಿ ನೀಡಲಾಗುತ್ತದೆ ಎಂದು ವೆಂಕಟಚಲಪತಿ ಹೇಳಿದರು.

ಎಬಿವಿಪಿ ನಗರ ಘಟಕದ ಅಧ್ಯಕ್ಷ ರವಿ ಸೊಪ್ಪಿನ, ಜಿಲ್ಲಾ ಸಹ ಸಂಚಾಲಕ ಕೊಟ್ರೇಶ ಕಲಕೇರಿ, ವಿವೇಕ್‌, ರಾಕೇಶ, ಮನೋಜ್‌, ಶಿವಕುಮಾರ, ಸಚಿನ್‌, ವರುಣ್‌ ಹಾಗೂ ಧನುಷ್‌ ಹಾಗೂ ನೂರಾರು ವಿದ್ಯಾರ್ಥಿಗಳು ತಹಸೀಲ್ದಾರ್‌ ಕೆ. ಶರಣಮ್ಮ ಅವರಿಗೆ ಮನವಿ ಪತ್ರ ಸಲ್ಲಿಸಿದರು.

click me!