ಬೆಂಗಳೂರಿನ ಎಚ್ ಎಎಲ್ ಬಳಿಯ ಟೀ ಅಂಗಡಿಯ ಹುಡುಗರ ಮೇಲೆ ಪುಡಿ ರೌಡಿಗಳು ನಡೆಸಿದ್ದ ಮಾರಣಾಂತಿಕ ಹಲ್ಲೆಯ ಹಿಂದಿದೆ ರೋಚಕ ಕಥೆ. ಪುಡಿ ರೌಡಿಗಳಿಗೆ ಸುಪಾರಿ ಕೊಟ್ಟು ಹಲ್ಲೆ ಮಾಡಿಸಲಾಗಿದೆ ಎಂದು ರೌಡಿಗಳು ಬಾಯಿ ಬಿಟ್ಟಿದ್ದಾರೆ.
ಬೆಂಗಳೂರು (ಡಿ.10): ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ವ್ಯಾಪ್ತಿಯ ಕುಂದಲಹಳ್ಳಿ ಗೇಟ್ ಬಳಿ ಮೊನ್ನೆ ರಾತ್ರಿ ನಡೆದ ಬೇಕರಿ ಹುಡುಗರ ಮೇಲೆ ಹಲ್ಲೆ ಪ್ರಕರಣದ ಕುರಿತು ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋ ಹಂಚಿಕೊಂಡು ಬೆಂಗಳೂರಿಗೆ ದುಡಿಮೆಗಾಗಿ ಬಂದವರ ಮೇಲೆ ಹಲ್ಲೆ ಮಾಡಿರುವ ಪುಡಿ ರೌಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಪ್ರಕರಣದ ಬಗ್ಗೆ ರಿವೇಂಜ್ ತೀರಿಸಿಕೊಳ್ಳುವ ಹಿನ್ನೆಲೆಯಲ್ಲಿ ಹಲ್ಲೆ ಮಾಡಿಸಿರುವ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು, ವಿಮಾಣ ನಿಲ್ದಾಣ ರಸ್ತೆಯಲ್ಲಿ ಬೇಕರಿ ಮತ್ತು ಟೀ ವ್ಯಾಪಾರಿಗಳ ಅಂಗಡಿಗಳ ರಿವೆಂಜ್‌ನಿಂದಾಗಿ ಈ ಘಟನೆ ನಡೆದಿರುವುದು ಬೆಳಕಿದೆ ಬಂದಿದೆ. ಈಗ ಹಲ್ಲೆಗೊಳಗಾಗಿರುವ ಹುಡುಗರ ಅಂಗಡಿ ಪಕ್ಕದಲ್ಲಿ ಮತ್ತೊಂದು ಟೀ-ಕಾಫಿ ಅಂಗಡಿ ಇತ್ತು. ಪಕ್ಕದ ಅಂಗಡಿ ಮಾಲಿಕನು ತನ್ನ ಅಂಗಡಿಯ ವ್ಯಾಪಾರಕ್ಕೆ ಈ ಹುಡುಗರ ಅಂಗಡಿಯಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿ ಸುಪಾರಿ ಕೊಟ್ಟು ಸ್ಥಳೀಯ ಹುಡುಗರ ಕೈ ನಲ್ಲಿ ಗಲಾಟೆ ಮಾಡಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಂಗಡಿ ಮಾಲೀಕನನ್ನು ಸಹ ಬಂಧನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Bengaluru: ಪುಡಿ ರೌಡಿಗಳಿಂದ ಬೇಕರಿ ಯುವಕರ ಮೇಲೆ ಹಲ್ಲೆ, ದೃಶ ಸಿಸಿಟಿವಿಯಲ್ಲಿ ಸೆರೆ
ಅಂಗಡಿ ಚೆನ್ನಾಗಿ ನಡೆದಿದ್ದೇ ಮುಳುವಾಯ್ತು: ಕುಂದಲಹಳ್ಳಿ ರಸ್ತೆಯಲ್ಲಿ ಹೊಸಕೋಟೆ ಮೂಲದ ಮಂಜುನಾಥ್ 4 ವರ್ಷದಿಂದ ಅಂಗಡಿ ನಡೆಸುತ್ತಿದ್ದನು. ಆದರೆ, ಮಂಜುನಾಥ್ ಅವರ ಶಾಪ್ ಪಕ್ಕದಲ್ಲಿಯೇ ಕಳೆದ ಒಂದೂವರೆ ವರ್ಷದ ಹಿಂದೆ ಬೈಂದೂರು ಹುಡುಗರು ಅಂಗಡಿ ಆರಂಭಿಸಿದ್ದರು. ಬೈದೂರು ಹುಡುಗರು ಇಟ್ಟಿದ್ದ ಹೊಸ ಬೇಕರಿಯಲ್ಲಿ ಹೆಚ್ಚು ವ್ಯಾಪಾರ ಆಗುತಿತ್ತು. ಇದನ್ನ ಸಹಿಸದೆ ಸ್ಥಳೀಯ ಹುಡುಗರ ಕಡೆಯಿಂದ ಗಲಾಟೆ ಮಾಡಿಸಿದ್ದಾರೆ. ಆದರೆ ಮಾರಣಾಂತಿಕ ಹಲ್ಲೆ ಮಾಡಿಸಿದ್ದರ ಪರಿಣಾಮವಾಗಿ ಮಂಜುನಾಥ್ ಈಗ ಜೈಲು ಕಂಬಿ ಎಣಿಸುವಂತಾಗಿದೆ.
ಘಟನೆಯ ಹಿನ್ನೆಲೆಯೇನು? : ಬೈಂದೂರಿನ ಯುವಕರು ಬದುಕು ಕಟ್ಟಿಕೊಳ್ಳೊಕೆ ಬೆಂಗಳೂರಿಗೆ ಬಂದು ಚಿಕ್ಕದಾಗಿ ಅಂಗಡಿ ತೆಗೆದು ಕೆಲಸ ಮಾಡಿಕೊಂಡಿದ್ದರು. ಆದರೆ, ಮೊನ್ನೆ ರಾತ್ರಿ 11 ಗಂಟೆ ವೇಳೆಗೆ ಅಂಗಡಿಗೆ ಬಂದ ಕೆಲ ಯುವಕರು ಪುಂಡಾಡಿಕೆ ಮಾಡುವುದರ ಜೊತೆಗೆ ಅಂಗಡಿಯನ್ನೇ ಒಡೆದು ಹಾಕಿದ್ದಾರೆ. ಬೇಕರಿಗೆ ನೆನ್ನೆ ತಡರಾತ್ರಿ ಬಂದ ಯುವಕರು ಸಿಗರೇಟ್ ಕೇಳಿದ್ದಾರೆ. ಬಳಿಕ ಅಂಗಡಿ ಮಾಲೀಕ ಎಲ್ಲಿ ಅಂತ ಕೇಳಿದ ಅವರು ನೋಡ ನೋಡುತ್ತಲೇ ದಾಂದಲೆ ನಡೆಸಿದರು. ಏನಾಗುತ್ತಿದೆ ಅನ್ನುವಷ್ಟರಲ್ಲೇ ಇಡಿ ಅಂಗಡಿಯ ವಸ್ತುಗಳ ಚೆಲ್ಲಾಡಿದ ಪುಂಡರು ಅಂಗಡಿ ಸಿಬ್ಬಂದಿಗಳ ಮೇಲೂ ಹಲ್ಲೆ ಮಾಡಿದ್ದಾರೆ. ಜೊತೆಗೆ ಅಂಗಡಿಯಲ್ಲಿಟ್ಟಿದ್ದ ಸಾವಿರಾರು ರೂಪಾಯಿ ಹಣ ಕಸಿದು ಎಸ್ಕೇಪ್ ಆಗಿದ್ದರು.
ವಿಡಿಯೋ ನೋಡಿ: ಬೆಂಗಳೂರು: ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಬ್ಬರ: ಬೇಕರಿಗೆ ನುಗ್ಗಿ ಗಲಾಟೆ
ಪಕ್ಕದ ಅಂಗಡಿಯವನ ಮೇಲೆ ದೂರು: ಈ ಹಲ್ಲೆ ಹಿಂದೆ ಕೆಲ ಆರೋಪಗಳು ಕೇಳಿ ಬಂದಿದ್ದು, ಘಟನೆ ಸಂಬಂಧ ಇಂದು ಠಾಣೆಯ ಮುಂದೆ ಹೈಡ್ರಾಮ ನಡೆದಿತ್ತು. ಅಸಲಿಗೆ ಹಲ್ಲೆಗೊಳಗಾದ ಯುವಕರ ಹೆಸರು ನವೀನ್, ಪ್ರಜ್ವಲ್ ಹಾಗೂ ನಿತಿನ್. ಮೂಲತಃ ಬೈಂದೂರಿನವರಾಗಿದ್ದು, ಒಂದು ವರ್ಷದ ಹಿಂದೆ ಇಲ್ಲಿ ಬೇಕರಿ ತೆರೆದಿದ್ದರು. ವ್ಯವಹಾರ ಚೆನ್ನಾಗೆ ನಡೆಯುತ್ತಿದೆ. ಆದರೆ ಪಕ್ಕದಲ್ಲೇ ಇರೊ ಮತ್ತೊಂದು ಬೇಕರಿಯವರೊಂದಿಗೆ ಈ ಹಿಂದೆ ಮಾತುಕಥೆಯಾಗಿತ್ತಂತೆ. ಬಳಿಕ ತಮ್ಮ ಪಾಡಿಗೆ ತಾವು ಅಂಗಡಿ ನಡೆಸುತ್ತಿದ್ದರು. ಆದರೆ, ನೆನ್ನೆ ನಡೆದ ಗಲಾಟೆಗೆ ಪಕ್ಕದ ಅಂಗಡಿಯವರ ಕೈವಾಡ ಇರುವುದಾಗು ಯುವಕರು ಆರೋಪ ಮಾಡಿದ್ದರು. ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಸತ್ಯ ಬಯಲಾಗಿದೆ.