ರಾಜಾಜಿನಗರದ ಎನ್‌ಪಿಎಸ್ ಶಾಲೆಗೆ ಹುಸಿಬಾಂಬ್ ಬೆದರಿಕೆ ಇ-ಮೇಲ್ ಪ್ರಕರಣ ಬೇಧಿಸಿರುವ ಬಸವೇಶ್ವರ ನಗರ ಠಾಣೆ ಪೊಲೀಸರು, ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ. ಈ ಬಾಲಕ ನಗರದ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಬೆಂಗಳೂರು (ಜ.08): ರಾಜಾಜಿನಗರದ ಎನ್‌ಪಿಎಸ್ ಶಾಲೆಗೆ ಹುಸಿಬಾಂಬ್ ಬೆದರಿಕೆ ಇ-ಮೇಲ್ ಪ್ರಕರಣ ಬೇಧಿಸಿರುವ ಬಸವೇಶ್ವರ ನಗರ ಠಾಣೆ ಪೊಲೀಸರು, ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ. ಈ ಬಾಲಕ ನಗರದ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇಂಟರ್‌ನೆಟ್ ಬಳಸಿ ಎನ್‌ಪಿಎಸ್ ಶಾಲೆಯ ಆಡಳಿತಾಧಿಕಾರಿ ಇ-ಮೇಲ್ ಐಡಿ ತೆಗೆದುಕೊಂಡು ಹುಸಿಬಾಂಬ್ ಬೆದರಿಕೆಯ ಇ-ಮೇಲ್ ಕಳುಹಿಸಿದ್ದ.
ಇ-ಮೇಲ್ ಮಾಡಿದರೆ ಮುಂದಿನ ಪರಿಣಾಮ ಏನಾಗಲಿದೆ ಎಂಬುದರ ಅರಿವು ಇಲ್ಲದೆ ತಮಾಷೆಗಾಗಿ ಈ ಕೆಲಸ ಮಾಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಕಾನೂನು ಅನ್ವಯ ಬಾಲ ಮಂಡಳಿಗೆ ವರದಿ ನೀಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ. ಎನ್‌ಪಿಎಸ್ ಶಾಲೆಯ ಆಡಳಿತಾಧಿಕಾರಿ ಇ-ಮೇಲ್‌ಗೆ ಗುರುವಾರ ರಾತ್ರಿ 8.28ಕ್ಕೆ ಅನಾಮಧೇಯ ವ್ಯಕ್ತಿಯಿಂದ ಇ-ಮೇಲ್ ಬಂದಿತ್ತು. ಅದರಲ್ಲಿ ನಿಮ್ಮ ಶಾಲೆಯ ಆವರಣದಲ್ಲಿ ನಾಲ್ಕು ಡೈನಮೆಂಟ್ ಕಡ್ಡಿ ಇರಿಸಿದ್ದ.
ಶುಕ್ರವಾರ ಮಧ್ಯಾಹ್ನ ಊಟದ ಸಮಯಕ್ಕೆ ಸ್ಫೋಟಿಸುವುದಾಗಿ ಉಲ್ಲೇಖಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಆಡಳಿತಾಧಿಕಾರಿ ಎಂದಿನಂತೆ ಶಾಲೆಗೆ ಬಂದು ಬೆಳಗ್ಗೆ 11.30ಕ್ಕೆ ಇ-ಮೇಲ್ ತೆರೆದು ನೋಡಿದಾಗ ಬಾಂಬ್ ಬೆದರಿಕೆಯ ಇ-ಮೇಲ್ ಕಂಡು ಬಂದಿತ್ತು. ಕೂಡಲೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದ ಬಸವೇಶ್ವರನಗರ ಠಾಣೆ ಪೊಲೀಸರು, ತಗರತಿಯಲ್ಲಿದ್ದ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಯಿಂದ ಹೊರಗೆ ಕಳುಹಿಸಿದ್ದರು.
ರೋಲ್ಡ್‌ಗೋಲ್ಡ್ ಎಂದು ಕಸದ ಗುಡ್ಡೆಗೆ ಅಸಲಿ ಚಿನ್ನ ಎಸೆದ ಕಳ್ಳ!
ಬಳಿಕ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಇಡೀ ಶಾಲೆಯನ್ನು ತಪಾಸಣೆ ಮಾಡಿದಾಗ ಯಾವುದೇ ಬಾಂಬ್ ಅಥವಾ ಸ್ಫೋಟಕಗಳು ಪತ್ತೆಯಾಗಲಿಲ್ಲ. ಹೀಗಾಗಿ ಇದೊಂದು ಹುಸಿಬಾಂಬ್ ಬೆದರಿಕೆ ಇ-ಮೇಲ್ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಈ ಸಂಬಂಧ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಬಗ್ಗೆ ತನಿಖೆ ಆರಂಭಿಸಿದ್ದ ಪೊಲೀಸರು, ಇಂಟರ್‌ನೆಟ್ ಪ್ರೊಟೋಕಾಲ್(ಐಪಿ) ಆಧರಿಸಿ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.