
ಬೆಂಗಳೂರು (ಫೆ. 28): ಬಿಎಂಟಿಸಿ ಬಸ್‌ನಲ್ಲಿ (BMTC Bus) ಪ್ರಯಾಣಿಕರ ಸೋಗಿನಲ್ಲಿ ಮೂವರು ಕಳ್ಳಿಯರ ಗ್ಯಾಂಗ್ ಮಹಿಳಾ ಪ್ರಯಾಣಿಕರೊಬ್ಬರ ಗಮನ ಬೇರೆಡೆ ಸೆಳೆದು ಸುಮಾರು .6.50 ಲಕ್ಷ ಮೌಲ್ಯದ 125 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿರುವ ಘಟನೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗರಬಾವಿಯ ಪಾಪರೆಡ್ಡಿ ಪಾಳ್ಯದ ನಿವಾಸಿ ವಾಣಿ ಎಂಬುವವರು ಆಭರಣ ಕಳೆದುಕೊಂಡುವರು. ಫೆ.20ರಂದು ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮನೆಗೆ ಹಿಂದಿರಗಲು ಆರ್‌ಎಂಸಿ ಯಾರ್ಡ್ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಕೆಂಗೇರಿ ಮಾರ್ಗದಲ್ಲಿ ತೆರಳುವ ಬಸ್ ಹತ್ತಿದ್ದಾರೆ.
ಈ ವೇಳೆ ವಾಣಿ ಅವರನ್ನೇ ಹಿಂಬಾಲಿಸಿಕೊಂಡು ಬಂದಿರುವ ಮೂವರು ಮಹಿಳೆಯರು, ವಾಣಿ ಬಸ್‌ನ ಸೀಟ್‌ನಲ್ಲಿ ಕೂರುವಾಗ ನಾಣ್ಯವೊಂದನ್ನು ಎಸೆದಿದ್ದಾರೆ. ಆ ನಾಣ್ಯ ಎತ್ತಿಕೊಡಿ ಎಂದು ವಾಣಿ ಅವರನ್ನು ಕೇಳಿದ್ದಾರೆ. ಈ ವೇಳೆ ನಾಣ್ಯ ಎತ್ತಿಕೊಡಲು ವಾಣಿ ಬಗ್ಗಿದಾಗ ಗಮನ ಬೇರೆಡೆ ಸೆಳೆದು ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಎಗರಿಸಿ ಮುಂದಿನ ನಿಲ್ದಾಣದಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru Drug Racket: ಚಕ್ಕುಲಿ-ನಿಪ್ಪಟ್ಟು ಮಾರೋದು ಬಿಟ್ಟು ಗಾಂಜಾ ದಂಧೆಗೆ ಇಳಿದ ಇಬ್ಬರ ಸೆರೆ!
ಬಸ್ಸು ಗೊರಗುಂಟೆಪಾಳ್ಯದ ಬಳಿ ಬಂದಾಗ ವಾಣಿ ಅವರು ಬ್ಯಾಗ್ ನೋಡಿಕೊಂಡಾಗ ಚಿನ್ನಾಭರಣ ಇಲ್ಲದಿರುವುದು ಗಮನಕ್ಕೆ ಬಂದಿದೆ. ನಾಣ್ಯ ಎತ್ತಿಕೊಡುವಾಗ ಕಳ್ಳಿಯರು ಬ್ಯಾಗ್‌ಗೆ ಕೈ ಹಾಕಿ ಒಡವೆ ಎತ್ತಿರುವ ಬಗ್ಗೆ ಅನುಮಾನ ಬಂದಿದೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪೊಲೀಸರ ಬಳಿ ಡ್ರಾಪ್ ಕೇಳಿ ಸಿಕ್ಕಿಬಿದ್ದ ಎಟಿಎಂ ಕಳ್ಳರು!: ಎಟಿಎಂ ದರೋಡೆಗೆ ಪ್ರಯತ್ನಿಸಿ ವಿಫಲವಾದ ಇಬ್ಬರು ದುಷ್ಕರ್ಮಿಗಳು ಬಳಿಕ ಪೊಲೀಸರ ಕಾರಿನಲ್ಲೇ ಡ್ರಾಪ್ ಪಡೆದು ಸಿಕ್ಕಿಬಿದ್ದಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತ ಯುವಕರು ನೆಲಮಂಗಲ ತಾಲೂಕು ಅರಿಶಿಣಕುಂಟೆ ಗ್ರಾಮದ ಸಚಿನ್ ಮತ್ತು ಗಗನ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು, ಮದ್ಯ ಖರೀದಿಗೆ ಹಣ ಕೊಡದ ಹೆತ್ತ ತಾಯಿಯನ್ನೇ ಕೊಂದ ಪಾಪಿ
ಕಳೆದ ಗುರುವಾರ ಬೆಳಗಿನ ಜಾವ ದೊಡ್ಡಬಳ್ಳಾಪುರ-ನಂದಿಬೆಟ್ಟರಸ್ತೆಯಲ್ಲಿರುವ ಮೆಳೇಕೋಟೆ ಕ್ರಾಸ್ ಬಳಿಯ ಎಟಿಎಂನಲ್ಲಿ ಹಣ ದೋಚಲು ಯತ್ನಿಸಿದ್ದಾರೆ. ಈ ಕೃತ್ಯವನ್ನು ಗಮನಿಸಿದ ಸ್ಥಳೀಯರು ಆರೋಪಿಗಳನ್ನು ಹಿಡಿಯಲು ಮುಂದಾದಾಗ ಪರಾರಿಯಾಗಿದ್ದಾರೆ. ಘಟನೆ ಮಾಹಿತಿ ದೊರೆತೊಡನೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸ್ಥಳ ಪರಿಶೀಲಿಸಿ, ಘಟನೆಯ ಮಾಹಿತಿ ಪಡೆದ ಪೊಲೀಸರು ದೊಡ್ಡಬಳ್ಳಾಪುರಕ್ಕೆ ಹಿಂತಿರುಗುತ್ತಿದ್ದ ಪೊಲೀಸರ ಕಾರಿಗೆ ಇಬ್ಬರು ಯುವಕರು ಕೈಅಡ್ಡ ಹಾಕಿ, ಡ್ರಾಪ್ ನೀಡುವಂತೆ ಕೋರಿದ್ದಾರೆ. ಪೊಲೀಸರು ಮಫ್ತಿಯಲ್ಲಿದ್ದ ಹಿನ್ನೆಲೆಯಲ್ಲಿ ಕಳ್ಳರಿಗೆ ಕಾರಿನಲ್ಲಿರುವವರು ಪೊಲೀಸರು ಎಂದು ಗೊತ್ತಾಗಿಲ್ಲ.
ಆರೋಪಿಗಳ ಚಹರೆ ಅರಿತ ಪೊಲೀಸರು ಅವರನ್ನು ಕಾರಿಗೆ ಹತ್ತಿಸಿಕೊಂಡಿದ್ದಾರೆ. ಕಾರು ನೇರ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ಬಂದಾಗಲೇ ಆರೋಪಿಗಳಿಗೆ ತಾವು ಪೊಲೀಸರ ಬಳಿಯೇ ಡ್ರಾಪ್ ಕೇಳಿ ಸಿಕ್ಕಿಹಾಕಿಕೊಂಡಿದ್ದೇವೆ ಎಂಬುದು ಅರಿವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ