ಮಾಟ, ಮಂತ್ರ ಮಾಡಿ ಕುಟುಂಬಕ್ಕೆ ಜೀವ ಭಯ ಹುಟ್ಟಿಸುತ್ತಿರುವುದಾಗಿ ಆರೋಪಿಸಿರುವ ಉದ್ಯಮಿಯೊಬ್ಬರು ಪತ್ನಿಯ ವಿರುದ್ಧವೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು (ಸೆ.06): ಮಾಟ, ಮಂತ್ರ ಮಾಡಿ ಕುಟುಂಬಕ್ಕೆ ಜೀವ ಭಯ ಹುಟ್ಟಿಸುತ್ತಿರುವುದಾಗಿ ಆರೋಪಿಸಿರುವ ಉದ್ಯಮಿಯೊಬ್ಬರು ಪತ್ನಿಯ ವಿರುದ್ಧವೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರದ ರೆಸ್ಟ್ ಹೌಸ್ ರಸ್ತೆಯ ಉದ್ಯಮಿ ದೇವ್ ಕುಮಾರ್(39) ನೀಡಿದ ದೂರಿನ ಮೇರೆಗೆ ಉದ್ಯಮಿ ಪತ್ನಿ ವೈದ್ಯೆ ಎಂ.ಪಿ.ಐಶ್ವರ್ಯ, ಅತ್ತೆ ಮಹಾಲಕ್ಷ್ಮಿ ಮತ್ತು ಮಾವ ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ?: ದೂರುದಾರ ಉದ್ಯಮಿ ದೇವ್ ಕುಮಾರ್ 2022ರ ಜೂ.1ರಂದು ಎಂ.ಪಿ.ಐಶ್ವರ್ಯ ಅವರನ್ನು ಮದುವೆಯಾಗಿದ್ದಾರೆ. 2023ರ ಫೆ.22ರಂದು ಬಿಜಿನೆಸ್ ಟ್ರಿಪ್ ಮುಗಿಸಿಕೊಂಡು ಮನೆಗೆ ಬಂದಾಗ, ಮನೆಯ ಬಾತ್ ರೂಮ್‌ನಲ್ಲಿ ಬೂದಿ, ಕರ್ಪೂರ ಹರಡಿರುವುದು ಕಂಡು ಬಂದಿತು. ಅಷ್ಟೇ ಅಲ್ಲದೆ, ಪತ್ನಿ ಐಶ್ವರ್ಯ ತನ್ನ ಎರಡು ಹೆಬ್ಬೆರಳು ಕತ್ತರಿಸಿಕೊಂಡಿದ್ದು, ಅದರಿಂದ ರಕ್ತ ಸೋರುತ್ತಿರುವುದು ಕಂಡು ಬಂದಿತು. ಮನೆಯ ಹಲವು ಕಡೆ ನಿಂಬೆಹಣ್ಣಿನ ತುಂಡುಗಳು, ಪೂಜೆ ಮಾಡಿದ ತೆಂಗಿನ ಕಾಯಿಗಳು ಕಂಡು ಬಂದಿದೆ. ಈ ಬಗ್ಗೆ ನನಗೆ ಸಂಶಯ ಬಂದ ಹಿನ್ನೆಲೆಯಲ್ಲಿ ಖಾಸಗಿ ತನಿಖಾ ಏಜೆನ್ಸಿ ಮೂಲಕ ಪತ್ನಿಯ ಚಲನವಲಚನ ತಿಳಿಸಲು ಸೂಚಿಸಿದ್ದೆ.
ಎಸ್ಸೆಸ್ಸೆಲ್ಸಿ, ಪಿಯುಗೆ ಇನ್ಮುಂದೆ 3 ಪರೀಕ್ಷೆ: ಪರೀಕ್ಷಾ ವ್ಯವಸ್ಥೆ ಭಾರೀ ಬದಲಾವಣೆ
ಈ ಖಾಸಗಿ ತನಿಖಾ ಏಜೆನ್ಸಿಯ ವರದಿಯಲ್ಲಿ ನನ್ನ ಪತ್ನಿ ಐಶ್ವರ್ಯ ಮತ್ತು ಅತ್ತೆ ಮಹಾಲಕ್ಷ್ಮಿ ಅವರು ಅತ್ತಿಗುಪ್ಪೆಯ ಜ್ಯೋತಿಷಿ ನಾಗೇಂದ್ರ ಮತ್ತು ಸ್ಮಶಾನದಲ್ಲಿ ಪೂಜೆ ಮಾಡುವ ಬಾಬು ಎಂಬುವವರನ್ನು ಭೇಟಿಯಾಗಿರುವುದು ಬಗ್ಗೆ ಗೊತ್ತಾಯಿತು. 2023ರ ಜೂ.22ರಂದು ನನ್ನ ಪತ್ನಿ ತವರು ಮನೆಯಿಂದ ವಾಪಾಸ್ ನನ್ನ ಮನೆಗೆ ಬಂದಾಗ, ನಮ್ಮ ಮನೆಯ ಅಡುಗೆ ಕೆಲಸದಾಳು ಮಾಡಿದ ಊಟಕ್ಕೆ ವಿವಿಧ ಎಣ್ಣೆ, ಬೂದಿ, ಉಗುಳು ವರೆಸಿ ನನಗೆ ಮತ್ತು ನನ್ನ ಕುಟುಂಬದವರಿಗೆ ನೀಡುತ್ತಿದ್ದಳು. ಇದರಿಂದ ನನಗೆ ಜೀವಭಯವಾಗಿ ಜು.5ರಂದು ಆಕೆಯನ್ನು ತವರು ಮನೆಗೆ ಕಳುಹಿಸಿದ್ದೇವೆ.
ಕಾವೇರಿ ನೀರಿಗಾಗಿ ಈಗ ರೈತರಿಂದಲೇ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ!
ಈ ನಡುವೆ ನನ್ನ ತಂದೆಗೆ ಅನಾರೋಗ್ಯ ತಲೆದೋರಿ ಹಾಸಿಗೆ ಹಿಡಿದಿದ್ದಾರೆ. ನಮ್ಮ ಮನೆಯ ನಾಯಿ ಕೂಡ ಸತ್ತಿದೆ. ಮಾಟ-ಮಾಡಿ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವಭಯ ಹುಟ್ಟಿಸಿರುವ ಪತ್ನಿ ಐಶ್ವರ್ಯ ಹಾಗೂ ಆಕೆ ಪೋಷಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೇವ್ ಕುಮಾರ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.