Belagavi: 19 ವರ್ಷದ ಯುವತಿ ಅನುಮಾನಸ್ಪದ ಸಾವು, ಆಸ್ಪತ್ರೆಗೆ ದಾಖಲಿಸಿದಾತ ಎಸ್ಕೇಪ್!

By Suvarna News  |  First Published Oct 13, 2022, 7:57 PM IST

ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸುತ್ತಿದ್ದೇನೆ ಎಂದು ಕುಟುಂಬಸ್ಥರಿಗೆ ಹೇಳಿದ್ದ ಯುವತಿ ನಿತ್ರಾಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನಿತ್ರಾಣ ಸ್ಥಿತಿಯಲ್ಲಿದ್ದ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ ಅಪರಿಚಿತ.


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, 

ಬೆಳಗಾವಿ (ಅ.13): ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸುತ್ತಿದ್ದೇನೆ ಎಂದು ಕುಟುಂಬಸ್ಥರಿಗೆ ಹೇಳಿದ್ದ ಯುವತಿ ನಿತ್ರಾಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ಇರ್ಷಾದ್‌ಅಹ್ಮದ್ ಸವದತ್ತಿ ಪುತ್ರಿ 19 ವರ್ಷದ ತಬಸ್ಸುಮ್ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ‌. 19 ವರ್ಷದ ತಬಸ್ಸುಮ್ ಗಗನಸಖಿ ಆಗಬೇಕೆಂದು ಕನಸು ಕಂಡಿದ್ದಳಂತೆ. ಈ ಸಂಬಂಧ ಖಾಸಗಿ ಏರ್ ಹೋಸ್ಟೆಸ್ ಟ್ರೇನಿಂಗ್ ಸೆಂಟರ್‌ನಲ್ಲಿ ತರಬೇತಿ ಸಹ ಪಡೆದಿದ್ದಳಂತೆ. ಬಳಿಕ ತನಗೆ ಎಕ್ಸಪಿರಿಯನ್ಸ್ ಲೆಟರ್ ಬೇಕು ಅಂತಾ ಹೇಳಿ ಕಳೆದ ತಿಂಗಳಷ್ಟೇ ಬೆಂಗಳೂರಿನ ಕಾಲ್ ಸೆಂಟರ್‌‌ವೊಂದಕ್ಕೆ ಕೆಲಸಕ್ಕೆಂದು ಸೇರಿದ್ದಳಂತೆ. ಆದ್ರೆ ನಿನ್ನೆ ಏಕಾಏಕಿ ನಿತ್ರಾಣ ಸ್ಥಿತಿಯಲ್ಲಿದ್ದ ತಬಸ್ಸುಮ್‌ಳನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಯಾರೋ ಅಪರಿಚಿತ ವ್ಯಕ್ತಿ ದಾಖಲಿಸಿದ್ದಾನೆ. ಯಾವಾಗ ಪೊಲೀಸ್ ಕೇಸ್ ಆಗುತ್ತೆ ಅಂತಾ ಗೊತ್ತಾಗಿದೆಯೋ ಸ್ಥಳದಿಂದ ಆತ ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ತಬಸ್ಸುಮ್‌ಳನ್ನು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ತಬಸ್ಸುಮ್ ಇಂದು ಬೆಳಗ್ಗೆ ಮೃತಪಟ್ಟಿದ್ದಾಳೆ. ಇನ್ನು ಆಸ್ಪತ್ರೆಗೆ ದಾಖಲಾದ ವೇಳೆ ತಬಸ್ಸುಮ್ ತಲೆಗೆ ಗಂಭೀರ ಗಾಯವಾಗಿದ್ದು ಮೈ ಮೇಲೆ ಸಿಗರೇಟ್‌ನಿಂದ ಸುಟ್ಟ ಗಾಯಗಳಿದ್ದು ಯಾರೋ ಆರೋಪಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ತಬಸ್ಸುಮ್ ಸಂಬಂಧಿಕ ಫಝಲ್ ಪಠಾಣ್ ಆರೋಪಿಸಿದ್ದಾರೆ. ಆದ್ರೆ ಈ ಆರೋಪವನ್ನು ತಬಸ್ಸುಮ್ ತಂದೆ ಇರ್ಷಾದ್‌ಅಹ್ಮದ್ ಸವದತ್ತಿ ಅಲ್ಲಗಳೆದಿದ್ದಾರೆ.

Tap to resize

Latest Videos

ಆಸ್ಪತ್ರೆಗೆ ದಾಖಲಿಸಿ ಯುವತಿಯ ಮೊಬೈಲ್ ಸಿಮ್ ಜೊತೆ ಅಪರಿಚಿತ ಎಸ್ಕೇಪ್
ಇನ್ನು ತಬಸ್ಸುಮ್‌ಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಅಪರಿಚಿತ ಯುವಕ ಆಕೆ ಮೊಬೈಲ್‌ ಸಿಮ್‌ನೊಂದಿಗೆ ಎಸ್ಕೇಪ್ ಆಗಿದ್ದಾನೆ. ಅಷ್ಟೇ ಅಲ್ಲದೇ ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ತಬಸ್ಸುಮ್ ಮೊಬೈಲ್ ನಂಬರ್‌ನಿಂದ ಆಕೆಯ ತಾಯಿಯ ಮೊಬೈಲ್ ನಂಬರ್‌ಗೆ ವಾಟ್ಸಪ್ ಮೆಸೇಜ್ ಸಹ ಮಾಡಿದ್ದಾನೆ. 'ಅವರ ಫೋನ್ ಅವರ ಚಿಕ್ಕ ಬ್ಯಾಗ್ ಒಳಗಡೆ ಇದೆ ಅಮ್ಮಾ ಅದನ್ನ ತಗೆದುಕೊಳ್ಳಿ. ಬಸ್‌ನಿಂದ ಇಳಿಸಬೇಕಾದ್ರೆ ಅದು ಒಡೆದು ಹೋಗಿದೆ. ಅವರು ಈಗ ಹುಷಾರಾಗಿದ್ದಾರಾ? ನಿಮ್ಮ ನಂಬರ್ ನನ್ನ ಹತ್ತಿರ ಇರಲಿಲ್ಲ ಹೀಗಾಗಿ ಅವರ ಸಿಮ್ ನನ್ನ ಫೋನ್‌ನಲ್ಲಿ ಹಾಕಿದೆ. ಅದು ಮಿಸ್ ಆಗಿ ನನ್ನ ಹತ್ತಿರವೇ ಬಂದಿದೆ. ಅಲ್ಲಿ ಕಂಪ್ಲೆಂಟ್ ಆಗುತ್ತೆ ಅಂತಾ ಹೇಳುತ್ತಿದ್ದರು. ಅದಕ್ಕೋಸ್ಕರ ನಿಮಗೆ ಭೇಟಿ ಆಗಲಿಕ್ಕೆ ಆಗಲಿಲ್ಲ. ನಾನು ಅವರ ಸಿಮ್ ಮುರಿದು ಹಾಕ್ತೀನಿ. ಬೇರೆಯದ್ದು ತಗೊಂಡು ಬಿಡಿ. ಪ್ಲೀಸ್ ನನಗೆ ಪ್ರಾಬ್ಲಮ್ ಮಾಡಬೇಡಿ' ಎಂದು ವಾಟ್ಸಪ್ ಸಂದೇಶ ರವಾನಿಸಿದ್ದಾನೆ. 

ಇನ್ನು ಅಕ್ಟೋಬರ್ 11ರಂದು ತಾಯಿ ಶಾಬೀರಾ ಬಾನುಗೆ ಫೋನ್ ಮಾಡಿದ್ದ ತಬಸ್ಸುಮ್ ತನಗೆ ಹುಷಾರಿಲ್ಲ ತಾನು ಬೆಂಗಳೂರಿಂದ ಬೆಳಗಾವಿಗೆ ಬರೋದಾಗಿ ಹೇಳಿದ್ದಳಂತೆ. ಈ ವೇಳೆ ತನ್ನ ಸೆಲ್ಫಿ ಫೋಟೋ ಕಳಿಸಿದ್ದಳಂತೆ. ಫೋಟೋದಲ್ಲಿ ನೋಡಿದ್ರೆ ತಬಸ್ಸುಮ್ ಮುಖಕ್ಕೆ ಗಾಯವಾಗಿ ಊದಿಕೊಂಡಿತ್ತಂತೆ. ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಕುಟುಂಬಸ್ಥರು ತನಿಖೆ ಮಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮಗಳನ್ನು ಕಳೆದುಕೊಂಡು ತಂದೆ ತಾಯಿ ಕಣ್ಣೀರು: ಮಗಳ ಸಾವಿನ ಬಗ್ಗೆ ತನಿಖೆಗೆ ಆಗ್ರಹ
ಇನ್ನು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮೃತ ತಬಸ್ಸುಮ್ ತಾಯಿ ಶಾಬೀರಾ ಬಾನು, 'ನನ್ನ ಮಗಳು ಗಗನಸಖಿ ಆಗಬೇಕು ಅಂತಾ ತರಬೇತಿ ಪಡೆದಿದ್ದಳು‌. ನನಗೆ ಎಕ್ಸಪಿರಿಯನ್ಸ್ ಲೆಟರ್ ಬೇಕು ಅಂತಾ ಬೆಂಗಳೂರಿನಲ್ಲಿ ಕಾಲ್ ಸೆಂಟರ್‌ಗೆ ಕೆಲಸಕ್ಕೆ ಸೇರಿದ್ದಳು. ನಾನೇ ಕಳೆದ ತಿಂಗಳು ಹೋಗಿ ಬೆಂಗಳೂರಿನ ಕೂಡ್ಲುಗೇಟ್‌ ಬಳಿ ಪಿಜಿ ಮಾಡಿ ಬಿಟ್ಟು ಬಂದಿದ್ದೆ. ಬಳಿಕ ಏನಾಗಿದೆ ನನಗೇನೂ ಗೊತ್ತಿಲ್ಲ‌. ನಿನ್ನೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನನ್ನ ಮಗಳನ್ನು ನೋಡಿದೆ. 

ಬೈಲಹೊಂಗದ ಸರ್ಕಾರಿ ಕಾಲೇಜಿನಲ್ಲಿ ಮಗಳು ಕಲಿತಿದ್ದು ಬೆಳಗಾವಿಯಲ್ಲಿ ಎರಡು ವರ್ಷ ಏರ್ ಹೋಸ್ಟೆಸ್ ಟ್ರೇನಿಂಗ್ ಪಡೆದಿದ್ದಳು. ತಾನಾಗಿಯೇ ಎಕ್ಸಿಪಿರಿಯನ್ಸ್ ಲೆಟರ್ ಬೇಕು ಎಂದಾಗ ಸ್ವತಃ ನಾನೇ ಅವಳೊಂದಿಗೆ ಬೆಂಗಳೂರಿಗೆ ತೆರಳಿ ಕಚೇರಿ ನೋಡಿ ಪಿಜಿ ಮಾಡಿ ಅವಳನ್ನು ಬಿಟ್ಟು ಬಂದಿದ್ದೆ. ದಿನಂಪ್ರತಿ ಫೋನ್ ಮಾಡಿ ಮಾತನಾಡುತ್ತಿದ್ದಳು. ನನಗೆ ಅರಾಮ ಇಲ್ಲ ಆಸ್ಪತ್ರೆಗೆ ತೋರಿಸಿಕೊಂಡು ಬಂದಿದ್ದೇನೆ ಎಂದಿದ್ದಳು. ಆಗ ಸೆಲ್ಫಿ ಫೋಟೋ ಕಳಿಸು ಅಂದಾಗ ಫೋಟೋ ಕಳಿಸಿದ್ದಳು ಆಗ ಮುಖ ಊದಿಕೊಂಡಂತೆ ಕಾಣುತ್ತಿತ್ತು. ಈ ಬಗ್ಹೆ ಕೇಳಿದಾಗ ನನ್ನ ಐಸಿಯುನಲ್ಲಿ ಇಟ್ಟಿದ್ರು ನಾನು ಬರ್ತಿದೀನಿ ಅಂತಾ ಹೇಳಿದಳು. ಸ್ಲೀಪರ್ ಬಸ್‌ನಲ್ಲಿ ನನಗೆ ಕೆಳಗಿನ ಸೀಟ್ ಸಿಗಲಿಲ್ಲ ಮೇಲೆ ಸಿಕ್ಕಿದೆ ಮಲಗಿದ್ದೇನೆ ಎಂದಳು‌‌‌. ಬಳಿಕ ನಾನು ಮಗಳ ಮೊಬೈಲ್‌ಗೆ ಫೋನ್ ಹಚ್ಚಿದಾಗ ಸ್ವಿಚ್ ಆಫ್ ಇತ್ತು. ಬಳಿಕ ನಾನು ಫೋನ್ ಟ್ರೈ ಮಾಡಬೇಕಾದರೆ ರಿಂಗ್ ಆಯ್ತು. 

ಆಗ ಆ ಕಡೆಯಿಂದ ಕರೆ ಸ್ವೀಕರಿಸಿದ ವ್ಯಕ್ತಿ ನಿಮ್ಮ ಮಗಳಿಗೆ ಪ್ರಜ್ಞೆ ಇಲ್ಲ ಆಸ್ಪತ್ರೆಯಲ್ಲಿ ಬಿಟ್ಟಿದ್ದೇನೆ. ಪೊಲೀಸರು ಕಂಪ್ಲೇಂಟ್ ಮಾಡ್ತೀನಿ ಅಂತಿದ್ದಾರೆ ನಾನು ಹೋಗ್ತಿದೀನಿ ಅಂದರು. ನನ್ನ ಮಗಳಿಗೆ ಆದ ಪರಿಸ್ಥಿತಿ ಯಾರಿಗೂ ಆಗಬಾರದು. ಯಾರು ಆರೋಪಿಗಳಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು‌. ನನ್ನ ಮಗಳ ಬ್ಯಾಗ್ ಬಿಟ್ಟು ಹೋಗಿದ್ದಾರೆ. ನನ್ನ ಮಗಳ ತಲೆಗೆ, ಗಲ್ಲಕ್ಕೆ ಗಾಯವಾಗಿದೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು' ಎಂದು ಒತ್ತಾಯಿಸಿದ್ದಾರೆ‌‌‌. 

Tumakuru; ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಟ್ಟಕ್ಕಾಗಿ ಸದಸ್ಯನ ಕಿಡ್ನ್ಯಾಪ್!

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿದ ತಂದೆ ಇರ್ಷಾದ್ ಅಹ್ಮದ್ ಸವದತ್ತಿ, 'ನನ್ನ ಮಗಳ ಜೊತೆ ಏನಾಗಿದೆ ಅಂತಾ ನಮಗೆ ಗೊತ್ತಿಲ್ಲ. ಬೆಳಗಾವಿ ಜಿಲ್ಲಾಸ್ಪತ್ರೆಯಿಂದ ಫೋನ್ ಬಂದಿದ್ದಾಗ ನಮಗೆ ಗೊತ್ತು. ನನ್ನ ಮಗಳ ಫೋನ್ ಸಿಕ್ಕಿಲ್ಲ. ಹದಿನೈದು ದಿನಗಳ ಹಿಂದೆ ಬೆಂಗಳೂರಿಗೆ ಹೋಗಿದ್ದಳು. ಈ ವೇಳೆ ಆಕೆಗೆ ಹುಷಾರಿಲ್ಲ ಅಂತಾ ಆಸ್ಪತ್ರೆಗೆ ದಾಖಲಾಗಿದ್ದಳು. ನಮ್ಮ ಮಗಳು ಯಾವ ಬಸ್‌ನಲ್ಲಿ ಬಂದಿದ್ದಾಳೆ ಗೊತ್ತಿಲ್ಲ. ಅರಾಮ ಇಲ್ಲ ನಾನು ಬರುತ್ತಿದ್ದೇನೆ ಅಂತಾ ಅಷ್ಟೇ ಹೇಳಿದ್ದಳು. ಬಳಿಕ ಫೋನ್ ಸ್ವಿಚ್ ಆಫ್ ಆಗಿದೆ. ನನ್ನ ಮಗಳ  ಈ ಪರಿಸ್ಥಿತಿ ಹೇಗೆ ಆಯ್ತು ಈ ಬಗ್ಗೆ ತನಿಖೆ ಆಗಬೇಕು. ಇನ್ಮುಂದೆ ಬೇರೆ ಮಕ್ಕಳ ಜೊತೆ ಈ ರೀತಿ ಆಗಬಾರದು. ನನ್ನ ಮಗಳ ಈ ಪರಿಸ್ಥಿತಿಗೆ ಏನು ಕಾರಣ ಗೊತ್ತಿಲ್ಲ. ಈ ಬಗ್ಗೆ ತನಿಖೆ ಆಗಬೇಕು ಎಂದಿದ್ದಾರೆ. ಇನ್ನು ತಬಸ್ಸುಮ್ ಸಂಬಂಧಿ ಫಝಲ್ ಪಠಾಣ್ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ ಬಗ್ಗೆ ಪ್ರತಿಕ್ರಿಯಿಸಿ ಆ ರೀತಿ ಏನೂ ಆಗಿಲ್ಲ. ನನ್ನ ಮಗಳನ್ನು ಸ್ವತಃ ನಾನು ಕಣ್ಣಾರೆ ನೋಡಿದ್ದೇನೆ. ಆ ರೀತಿ ಏನು ಆಗಿಲ್ಲ. ವೈದ್ಯರು ಹಾಗೂ ಪೊಲೀಸರು ಸಹ ಇದನ್ನೇ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

CHIKKABALLAPURA; ಶಸ್ತ್ರಚಿಕಿತ್ಸೆ ಮಾಡಿ ಹೊಲಿಗೆ ಹಾಕದ ವೈದ್ಯರು, ಬಾಣಂತಿ ಸಾವು!

ಇನ್ನು ಪ್ರಕರಣ ದಾಖಲಿಸಿಕೊಂಡ ಎಪಿಎಂಸಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಷ್ಟಕ್ಕೂ ಬೆಂಗಳೂರಿನ ಕಾಲ್ ಸೆಂಟರ್‌ಗೆ ಕೆಲಸಕ್ಕೆ ಸೇರಿದ್ದ ಯುವತಿ ಮರಳಿ ಬೆಳಗಾವಿಗೆ ಬರೋದಾಗಿ ತಾಯಿಗೆ ತಿಳಿಸಿದ್ದಳು.ಆದ್ರೆ ಬೆಂಗಳೂರಿಂದ ಬೆಳಗಾವಿಗೆ ಆಗಮಿಸುವ ವೇಳೆ ಯುವತಿಗೆ ಆಗಿದ್ದೇನು? ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಯಾರು? ಯುವತಿಯ ಸಾವಿಗೆ ಕಾರಣ ಏನು? ಈ ಬಗ್ಗೆ ತನಿಖೆ ಬಳಿಕವಷ್ಟೇ ಗೊತ್ತಾಗಬೇಕಿದೆ.

click me!