ಬೆಂಗಳೂರು: 97 ಲಕ್ಷ ದರೋಡೆ ಮಾಡಿದ್ದ ಡಕಾಯಿತರ ಬಂಧನ

By Kannadaprabha NewsFirst Published Mar 24, 2023, 3:30 AM IST
Highlights

ಆರೋಪಿಗಳಿಂದ 4 ಕಾರು ಗಳು, 37 ಲಕ್ಷ ರು ನಗದು ಹಾಗೂ 45 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಕೇರಳ ಮೂಲದ ತೆಂಗಾ ವಿನಿಶ್‌, ಅಕೀಲ್‌ ತುನೇರಿ ಹಾಗೂ ಅಬಿ ಪತ್ತೆಗೆ ತನಿಖೆ ನಡೆದಿದೆ.

ಬೆಂಗಳೂರು(ಮಾ.24): ಇತ್ತೀಚಿಗೆ ಬ್ಯಾಂಕ್‌ಗೆ ಹಣ ಜಮೆ ಮಾಡಲು ತೆರಳುತ್ತಿದ್ದ ಖಾಸಗಿ ಕಂಪನಿಯ ಉದ್ಯೋಗಿಗಳಿಗೆ ಬೆದರಿಕೆ ಹಾಕಿ 97 ಲಕ್ಷ ರು ದರೋಡೆ ಮಾಡಿದ್ದ ಕಂಪನಿಯ ಮಾಜಿ ನೌಕರ ಸೇರಿದಂತೆ 9 ಮಂದಿಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಸುಜೀತ್‌, ಅತುಲ್‌, ಕೆ.ಪಿ.ಜಮೀರ್‌, ಎಂ.ಶಮೀಲ್‌, ಕೆ.ವಿ.ಶಿಜಿಲ್‌, ವಿ.ಕೆ.ಶರತ್‌, ಶಫಿ, ಮೊಹಮ್ಮದ್‌ ಜಮಾಲ್‌ ಹಾಗೂ ಕೊಡಗು ಜಿಲ್ಲೆಯ ಮೊಹಮ್ಮದ್‌ ರಫಿ ಬಂಧಿತರಾಗಿದ್ದು, ಆರೋಪಿಗಳಿಂದ 4 ಕಾರು ಗಳು, 37 ಲಕ್ಷ ರು ನಗದು ಹಾಗೂ 45 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಕೇರಳ ಮೂಲದ ತೆಂಗಾ ವಿನಿಶ್‌, ಅಕೀಲ್‌ ತುನೇರಿ ಹಾಗೂ ಅಬಿ ಪತ್ತೆಗೆ ತನಿಖೆ ನಡೆದಿದೆ. ಕೆಲ ದಿನಗಳ ಹಿಂದೆ ಮಹದೇವಪುರ ಸಮೀಪ ಸಿಎಂಎಸ್‌ ಇಸ್ಫೋ ಸಿಸ್ಟಂ ಕಂಪನಿಯ ಉದ್ಯೋಗಿಗಳ ಕಾರಿಗೆ ಅಪಘಾತ ಮಾಡಿ ಬಳಿಕ ಜೀವ ಬೆದರಿಕೆ ಹಾಕಿ ಹಣವನ್ನು ದೋಚಿ ಕೇರಳಕ್ಕೆ ಆರೋಪಿಗಳು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಪೊಲೀಸರ ಐಡಿ ತೋರಿಸಿ 1.48 ಲಕ್ಷ ಎಗರಿಸಿದ ಸೈಬರ್‌ ಚೋರರು..!

ಎಚ್‌ಬಿಆರ್‌ ಲೇಔಟ್‌ನಲ್ಲಿರುವ ಸಿಎಂಎಸ್‌ ಇಸ್ಫೋ ಸಿಸ್ಟಂ ಕಂಪನಿಯು ನಗರದಲ್ಲಿ ಎಟಿಎಂಗಳಿಗೆ ಬ್ಯಾಂಕ್‌ಗಳಿಂದ ಹಣ ಪೂರೈಸುವ ಹಾಗೂ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಹಣ ಸಂಗ್ರಹಿಸಿ ಬ್ಯಾಂಕ್‌ಗಳಿಗೆ ಜಮೆ ಮಾಡುವ ವ್ಯವಹಾರ ನಡೆಸುತ್ತಿದೆ. ಈ ಕಂಪನಿ ಜತೆ ಹಲವು ಉದ್ದಿಮೆಗಳು ಒಪ್ಪಂದ ಮಾಡಿಕೊಂಡಿವೆ. ಅಂತೆಯೇ ಮಹದೇವಪುರ ವ್ಯಾಪ್ತಿಯ ಆರ್‌ಎಂಸಿಗಳಲ್ಲಿ ಹಣ ಸಂಗ್ರಹಿಸಿ ಫೆ.27 ರಂದು ಸಿಎಂಎಸ್‌ ಕಂಪನಿಯ ಕಸ್ಟೋಡಿಯನ್‌ಗಳಾದ ಕೆ.ಎಸ್‌.ಬಾಲಾಜಿ, ಮೋಹನ್‌, ಚಾಲಕ ಯಾಸರ್‌ ಅರಾಫತ್‌ ಹಾಗೂ ಭದ್ರತಾ ಕಾವಲುಗಾರ ಕಾಂತರಾಜು ಮರಳುತ್ತಿದ್ದರು. ಆಗ ಮಾರ್ಗ ಮಧ್ಯೆ ಸಿಎಂಎಸ್‌ ಕಂಪನಿಯ ಕಾರಿಗೆ ಮತ್ತೊಂದು ಕಾರಿನಲ್ಲಿ ಬಂದು ಆರೋಪಿಗಳು ಗುದ್ದಿಸಿದ್ದಾರೆ. ಆ ವೇಳೆ ಕಾರಿನಿಂದಿಳಿದ ಸಂತ್ರಸ್ತರಿಗೆ ಜೀವ ಬೆದರಿಕೆ ಹಾಕಿದ ಆರೋಪಿಗಳು, ಬಳಿಕ ಸಿಎಂಎಸ್‌ ಕಂಪನಿಯ ಕಾರಿನಲ್ಲಿ ಎರಡು ಟ್ರಂಕ್‌ಗಳಲ್ಲಿ ತುಂಬಿದ್ದ 97 ಲಕ್ಷ ರು ಹಣವನ್ನು ಬ್ಯಾಗ್‌ಗಳಲ್ಲಿ ತುಂಬಿಕೊಂಡು ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿದ್ದರು. ಈ ದರೋಡೆ ಬಗ್ಗೆ ಮಹದೇವಪುರ ಠಾಣೆಗೆ ಆ ಕಂಪನಿಯ ವ್ಯವಸ್ಥಾಪಕ ಶಾಂತಕುಮಾರ್‌ ದೂರು ದಾಖಲಿಸಿದ್ದರು.

ಅಂತೆಯೇ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್‌ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಈ ಆರೋಪಿಗಳ ಪೈಕಿ ಜಮಾಲ್‌, ಈ ಮೊದಲು ಸಿಎಂಎಸ್‌ ಕಂಪನಿಯಲ್ಲಿ ನೌಕರಿಯಲ್ಲಿದ್ದ. ಆರು ತಿಂಗಳ ಹಿಂದೆ ಕಂಪನಿ ಕೆಲಸ ತೊರೆದಿದ್ದ ಆತ, ತನ್ನ ಗೆಳೆಯ ಶಫಿ ಮೂಲಕ ದರೋಡೆ ಸಂಚು ರೂಪಿಸಿದ್ದ. ಈ ಕೃತ್ಯಕ್ಕೆ ಕೇರಳ ಗ್ಯಾಂಗ್‌ ಸಾಥ್‌ ಕೊಟ್ಟಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

click me!