ಚಿಕ್ಕಮಗಳೂರು: ವಿಕ್ರಾಂತ್ ರೋಣ ಚಿತ್ರ ವೀಕ್ಷಣೆ ವೇಳೆ ಗಲಾಟೆ ಪ್ರಕರಣ, ಆರೋಪಿಗಳ ಬಂಧನ

By Girish GoudarFirst Published Aug 2, 2022, 10:52 PM IST
Highlights

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಖಾಕಿ ಪಡೆ

ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು(ಆ.02):  
ವಿಕ್ರಾಂತ್ ರೋಣ ಚಿತ್ರ ವೀಕ್ಷಣೆ ವೇಳೆ ಚಿಕ್ಕಮಗಳೂರು ನಗರದ ಮಿಲನ ಚಿತ್ರಮಂದಿರದ ಬಳಿ ನಡೆದಿದ್ದ ಗಲಾಟೆ ಕಾಫಿನಾಡನ್ನ ಒಂದು ಕ್ಷಣ ಬೆಚ್ಚಿ ಬೀಳುವಂತೆ ಮಾಡಿತ್ತು. ಹಾಡಗಗಲೇ ಮಚ್ಚು, ಲಾಂಗ್ ನಿಂದ ಯುವಕರ ನಡುವೆ ಗಲಾಟೆ ನಡೆದಿತ್ತು. ಆ ಘಟನೆಯಲ್ಲಿ ಭಾಗಿಯಾದ ಆರೋಪಿಗಳನ್ನು ಪೊಲೀಸರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇಂದು  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನಡು ರಸ್ತೆಯಲ್ಲಿ ಲಾಂಗ್ ನಿಂದ ಗಲಾಟೆ ಪ್ರಕರಣ 

ಜುಲೈ‌ 28 ರಂದು ಚಿಕ್ಕಮಗಳೂರು ನಗರದ ಮಿಲನ ಚಿತ್ರಮಂದಿರದ ಬಳಿ ವಿಕ್ರಾಂತ್ ರೋಣ ಸಿನಿಮಾ ವೀಕ್ಷಣೆ ವೇಳೆಯಲ್ಲಿ 2 ಗುಂಪುಗಳ ನಡುವೆ  ಗಲಾಟೆ ನಡೆದಿತ್ತು.ನಡು ರಸ್ತೆಯಲ್ಲಿ ಹಾಡಹಗಲೇ ಮಚ್ಚು, ಲಾಂಗು, ಡ್ರಾಗರ್‌ಗಳು ಝಳಪಿಸಿದ್ದನ್ನು ನೋಡಿ ಕಾಫಿನಾಡಿಗರು ಆತಂಕಕ್ಕೆ ಒಳಾಗಿದ್ದರು. ನಗರದ ಮಿಲನ್ ಥಿಯೇಟರ್‍ನಲ್ಲಿ ಸಿನಿಮಾ ನೋಡಲು ಎರಡು ತಂಡವೂ ಹೋಗಿತ್ತು. ಓರ್ವ ಆಗಾಗ್ಗೆ ಬಾಗಿಲು ತೆಗೆದು ಹೊರಗೆ ಹೋಗ್ತಿದ್ದ ಅಷ್ಟೆ. ಅದಕ್ಕೆ ಟಾಕೀಸ್ ಒಳಗೆ ಮಾರಾಮಾರಿ ನಡೆದಿದೆ. ಗಲಾಟೆಯಲ್ಲಿ ನಗರದ ಕೋಟೆ ನಿವಾಸಿ ಭರತ್ ಎಂಬಾತನ ಮೇಲೆ ಲಾಂಗು-ಮಚ್ಚುಗಳಿಂದ ಹಲ್ಲೆಯಾಗಿದೆ. ಗಂಭೀರ ಗಾಯಗೊಂಡಿದ್ದ ಭರತ್‍ನನ್ನ ಪ್ರಾಥಮಿಕ ಚಿಕಿತ್ಸೆಯ ಬಳಿಕ ಹಾಸನಕ್ಕೆ ಕರೆದೊಯ್ದಿದ್ದರು. ಹಲ್ಲೆಯ ಬಳಿಕ ಭರತ್ ಮೇಲೆ ಹಲ್ಲೆ ಮಾಡಿದ ಯುವಕರು ಚಿಕ್ಕಮಗಳೂರಿನಿಂದ ನಾಪತ್ತೆಯಾಗಿದ್ದರು.  

ಸ್ವಂತ ಚಿಕ್ಕಮ್ಮನ ಮಗನ ಜೀವ ತೆಗೆದು ಅಮಾಯಕನಂತಿದ್ದ ಐನಾತಿ ಡಾಕ್ಟರ್ ಅಂದರ್

ಸ್ನೇಹಿತರ ನಡುವೆ ನಡೆದ ಗಲಾಟೆ

ಸಮಸಮ ಹೊಡೆದಾಡಿದ ಎರಡು ಗುಂಪುಗಳು ಒಂದು ಕಾಲದಲ್ಲಿ ಒಂದೇ ತಟ್ಟೆಯಲ್ಲಿ ಅನ್ನ ತಿನ್ನುವ ಸ್ನೇಹಿರಂತೆ. ಆದ್ರೆ, ಕೆಲವೊಂದು ವಿಚಾರದಲ್ಲಿ ಮನಸ್ಥಾಪವಾಗಿ ದೂರಾಗಿದ್ರು ಅನ್ನೋದು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಗಲಾಟೆ ವೇಳೆ ಅವರದ್ದೇ ಕಾರಿನಲ್ಲಿದ್ದ ಲಾಂಗ್ ತೆಗೆದು ಹಲ್ಲೆ ಮಾಡಿದ್ದು ಎಂದು ಪೊಲೀಸರ ಮುಂದೆ ತನಿಖೆಯಲ್ಲಿ ಹೇಳಿದ್ದಾರೆ.

ಆರೋಪಿಗಳ ಹಿಂದೆ ಏನಾದರೂ ಕ್ರಿಮಿನಲ್ ಹಿನ್ನೆಲೆ ಇದೆಯಾ ಎಂಬ ದೃಷ್ಠಿಕೋನದಲ್ಲೂ ತನಿಖೆ ನಡೆಸುತ್ತಿದ್ದಾರೆ ಪೊಲೀಸರು. ನಾಲ್ಕು ಟೀಂ ಮಾಡಿದ್ದ ಪೊಲೀಸರು ಹಲ್ಲೆಗೈದ ಆರು ಜನ ಹಾಗೂ ಹಲ್ಲೆ ಬಳಿಕ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಇಬ್ಬರು ಸೇರಿ ಎಂಟು ಜನರನ್ನ ಬಂಧಿಸಿದ್ದಾರೆ. ಬಂಧಿತರಿಂದ ಎರಡು ಕಾರ್, ಲಾಂಗ್ ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ 8 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ 11  ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 

ಬಂಧಿತ ಆರೋಪಿಗಳು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಚಿಕ್ಕಮಗಳೂರು ಡಿವೈಎಸ್‌ಪಿ ಪುರುಷೋತ್ತಮ್ ನೇತೃತ್ವದಲ್ಲಿ 4 ತನಿಖಾ ತಂಡಗಳನ್ನು ರಚನೆ ಮಾಡಲಾಗಿತ್ತು. ಬಸವನಹಳ್ಳಿ ಠಾಣೆಯ ಪಿಎಸ್‌ಐ ರವಿ, ಸಂಚಾರಿ ಠಾಣೆಯ ಪಿಎಸ್‌ಐ ಚಂದ್ರಶೇಖರ್, ಕಡೂರು ಪಿಎಸ್‌ಐ ಹರೀಶ್ ಹಾಗೂ ನಗರ ಠಾಣೆಯ ನಾಗೇಂದ್ರ ನಾಯ್ಕ್ ಇವರುಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು 24 ಗಂಟೆಯಲ್ಲೇ ಸಂಪೂರ್ಣ ಮಾಹಿತಿ ಕಲೆಹಾಕಿದ ತಂಡಗಳು 3 ದಿನಗಳಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.
 

click me!