Bengaluru Crime: ಹೊಸ ವರ್ಷದ ನಶೆ ಪಾರ್ಟಿಗೆ ತಂದಿದ್ದ 6 ಕೋಟಿ ಡ್ರಗ್ಸ್‌ ವಶ

By Kannadaprabha NewsFirst Published Dec 31, 2022, 6:41 AM IST
Highlights

6.31 ಕೋಟಿ ರು ಮೌಲ್ಯದ ಡ್ರಗ್ಸ್‌ ಜಪ್ತಿ, ಡ್ರಗ್ಸ್‌ ಮಾಫಿಯಾ ಮೇಲೆ ಸಿಸಿಬಿ ಭರ್ಜರಿ ಕಾರ್ಯಾಚರಣೆ, ವಿದೇಶಿ ಪ್ರಜೆ ಸೇರಿದಂತೆ 8 ಮಂದಿ ಪೆಡ್ಲರ್‌ಗಳ ಸೆರೆ. 

ಬೆಂಗಳೂರು(ಡಿ.31):  ಹೊಸ ವರ್ಷಾಚರಣೆ ಹೊತ್ತಿನಲ್ಲೇ ಡ್ರಗ್ಸ್‌ ಮಾಫಿಯಾ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿದ ಸಿಸಿಬಿ, ವಿದೇಶಿ ಪ್ರಜೆ ಸೇರಿದಂತೆ 8 ಮಂದಿ ಪೆಡ್ಲರ್‌ಗಳನ್ನು ಬಂಧಿಸಿ ರಾಜಧಾನಿಯಲ್ಲಿ ನಶೆ ಪಾರ್ಟಿಗಳಿಗೆ ಪೂರೈಸಲು ದಾಸ್ತಾನು ಮಾಡಿದ್ದ 6.31 ಕೋಟಿ ರು ಮೌಲ್ಯದ ಡ್ರಗ್ಸ್‌ ಅನ್ನು ಜಪ್ತಿ ಮಾಡಿದೆ. ದೆಹಲಿ ಮೂಲದ ಜಾಕಬ್‌ ವಿನೋದ್‌, ಆತನ ಸಹಚರರಾದ ಆಂಧ್ರಪ್ರದೇಶದ ಶ್ರೀಕಾಕುಲಂ ಅರಣ್ಯ ಪ್ರದೇಶದ ರಮಣ ಸಣ್ಣಪತಿ, ಕದ್ರಿಯ ಇರ್ಫಾನ್‌ ಆಲಿ, ಶೇಕ್‌ ಮೊಹಮ್ಮದ್‌, ನೀಲಸಂದ್ರದ ಮೊಹಮ್ಮದ್‌ ಇರ್ಫಾನ್‌, ಆಡುಗೋಡಿಯ ಇಲಿಯಾಸ್‌, ವಿದೇಶದ ಕೌವ್‌ ಇಸ್ಸೆ ಸೆಬಾಸ್ಟಿನ್‌ ಬಂಧಿತರಾಗಿದ್ದು, ಆರೋಪಿಗಳಿಂದ ವಿವಿಧ ಬಗೆಯ 6.31 ಕೋಟಿ ರು ಮೌಲ್ಯದ ಡ್ರಗ್ಸ್‌ ಅನ್ನು ಜಪ್ತಿ ಮಾಡಲಾಗಿದೆ.

ಹೊಸ ವರ್ಷಾಚರಣೆ ವೇಳೆ ಡ್ರಗ್ಸ್‌  ಸೇವೆ ಮತ್ತು ಸರಬರಾಜು ಮೇಲೆ ನಿಗಾ ವಹಿಸಲು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ರಾಮಚಂದ್ರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ ಬಿ.ಎಸ್‌.ಅಶೋಕ್‌ ಹಾಗೂ ದೀಪಕ್‌ ತಂಡ ರಚಿಸಲಾಗಿತ್ತು. ಕಳೆದೊಂದು ತಿಂಗಳಿಂದ ಡ್ರಗ್ಸ್‌  ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿದ ವಿಶೇಷ ತಂಡಗಳು, ಬಾಣಸವಾಡಿ, ಕೊತ್ತನೂರು ಹಾಗೂ ಎಲೆಕ್ಟ್ರಾನಿಕ್‌ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿ ಮಾಲೀನ ಸಮೇತ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌. ಪ್ರತಾಪ್‌ ರೆಡ್ಡಿ ತಿಳಿಸಿದರು.

Bengaluru: ಹೊಸ ವರ್ಷದ ಪಾರ್ಟಿಗೆಂದು ತಂದಿದ್ದ 2 ಕ್ವಿಂಟಲ್‌ ಡ್ರಗ್ಸ್‌ ವಶ: ಇಬ್ಬರ ಬಂಧನ

ಈ ಆರೋಪಿಗಳಿಂದ ಆಂಧ್ರಪ್ರದೇಶ, ಗೋವಾ ಹಾಗೂ ದೆಹಲಿಯಲ್ಲಿ ಡ್ರಗ್ಸ್‌ ಜಾಲದಿಂದ ಕಡಿಮೆ ಬೆಲೆಗೆ ಡ್ರಗ್ಸ್‌ ತಂದು ನಗರದಲ್ಲಿ ಮಾರಾಟಕ್ಕೆ ಸಜ್ಜಾಗಿದ್ದರು. ಹೊಸ ವರ್ಷದ ಸಂಭ್ರಮದ ಪಾರ್ಟಿಗಳಿಗೆ ದುಬಾರಿ ಮೌಲ್ಯಕ್ಕೆ ಡ್ರಗ್‌್ಸ ಮಾರಾಟ ಮಾಡುವುದು ಆರೋಪಿಗಳ ಯೋಜನೆಯಾಗಿತ್ತು ಎಂದು ಆಯುಕ್ತರು ಹೇಳಿದರು.

ಗೋವಾದಿಂದ ಬಂದಿದ್ದ ಜಾಕಬ್‌: 

ದೆಹಲಿ ಮೂಲದ ಜಾಕಬ್‌ ವಿನೋದ್‌ ವೃತ್ತಿಪರ ಡ್ರಗ್ಸ್‌ ಪೆಡ್ಲರ್‌ ಆಗಿದ್ದು, ಹಲವು ವರ್ಷಗಳಿಂದ ಕೊತ್ತನೂರಿನಲ್ಲಿ ನೆಲೆಸಿದ್ದ. ನಾಲ್ಕು ವರ್ಷಗಳ ಹಿಂದೆ 50 ಕೆಜಿ ಗಾಂಜಾ ಮಾರಾಟದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದು, ಆತ ಜೈಲು ಸೇರಿದ್ದ. ಆನಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದು ಗೋವಾ ಸೇರಿದ್ದ ಜಾಕಬ್‌, ಅಲ್ಲಿನ ಕಡಲತೀರದ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ. ಆಗ ಜಾಕಬ್‌ಗೆ ವಿದೇಶಿ ಪೆಡ್ಲರ್‌ಗಳು ಹಾಗೂ ಗೋವಾಕ್ಕೆ ನಶೆ ಏರಿಸಿಕೊಳ್ಳಲು ಹೋಗುತ್ತಿದ್ದ ಬೆಂಗಳೂರಿನ ಗ್ರಾಹಕರ ಸಂಪರ್ಕ ಬೆಳೆಯಿತು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಗೋವಾದಲ್ಲಿ ನೈಜೀರಿಯಾ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್‌ ಖರೀದಿಸಿದ ಜಾಕಬ್‌, ಅಲ್ಲಿಂದ ಕಳ್ಳ ಹಾದಿಯಲ್ಲಿ ನಗರಕ್ಕೆ ತಂದು ದುಬಾರಿ ಬೆಲೆಗೆ ತನ್ನ ಸಹಚರರ ಮೂಲಕ ಗ್ರಾಹಕರಿಗೆ ತಲುಪಿಸುತ್ತಿದ್ದ. ಅಂತೆಯೇ ಹೊಸ ವರ್ಷಾಚರಣೆ ವೇಳೆ ಡ್ರಗ್ಸ್‌ಗೆ ಬೇಡಿಕೆ ಗಮನಿಸಿದ ಆತ, ನಾಲ್ಕೂವರೆ ತಿಂಗಳ ಹಿಂದೆ ಕೊತ್ತನೂರು ಬಳಿ ಮನೆ ಬಾಡಿಗೆ ಪಡೆದು ಡ್ರಗ್ಸ್‌ಸಂಗ್ರಹಿಸಿದ್ದ. ಹಲವು ವರ್ಷಗಳ ಹಿಂದೆ ತನಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾ ಗೃಹದಲ್ಲಿ ಪರಿಚಿತನಾಗಿದ್ದ ಆಂಧ್ರಪ್ರದೇಶದ ಪೆಡ್ಲರ್‌ ರಮಣನಿಂದ ಹ್ಯಾಶೀಶ್‌ ಆಯಿಲ್‌ ಖರೀದಿಸಿದ್ದ ಜಾಕಬ್‌, ಇನ್ನುಳಿದ ಸಹಚರರ ಮೂಲಕ ನಗರದಲ್ಲಿ ಮಾರಾಟಕ್ಕೆ ಯೋಜಿಸಿದ್ದ.

ನಟಿಯರ ಡ್ರಗ್ಸ್‌ ಕೇಸ್‌ನಲ್ಲಿ ಸೆಬಾಸ್ಟಿನ್‌ ಅಣ್ಣ ಸೆರೆ: 

ಎರಡು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ ಸೆಬಾಸ್ಟಿನ್‌, ಹಣದಾಸೆಗೆ ಡ್ರಗ್ಸ್‌ ದಂಧೆಗಿಳಿದಿದ್ದ. ವಿದೇಶದ ಪೆಡ್ಲರ್‌ಗಳಿಂದ ಡ್ರಗ್ಸ್‌ ಖರೀದಿಸಿ ನಗರದಲ್ಲಿ ಮಾರುತ್ತಿದ್ದ. ಈತನ ಸೋದರ ಸಹ ಪೆಡ್ಲರ್‌ ಆಗಿದ್ದು, ಮೂರು ವರ್ಷಗಳ ಹಿಂದೆ ಕನ್ನಡ ಚಲನಚಿತ್ರ ನಟಿಯರ ಡ್ರಗ್ಸ್‌ ಪ್ರಕರಣದಲ್ಲಿ ಆತ ಜೈಲು ಸೇರಿದ್ದ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: ಫುಡ್‌ ಡೆಲವರಿ ಸೋಗಿನಲ್ಲಿ ಡ್ರಗ್ಸ್‌ ಪೂರೈಕೆ, ಬಿಹಾರಿ ಸೆರೆ

6.31 ಕೋಟಿ ಮೌಲ್ಯದ ಡ್ರಗ್ಸ್‌ ದಾಸ್ತಾನು ವಿವರ

ಕೊತ್ತನೂರಿನ ಮನೆಯಲ್ಲಿ ಜಾಕಬ್‌ ತಂಡ ಸಂಗ್ರಹಿಸಿದ್ದ 2 ಕೆಜಿ 550 ಗ್ರಾಂ ತೂಕದ ಎಡಿಎಂಎ ಕ್ರಿಸ್ಟಿಲ್‌, 95.68 ಗ್ರಾಂ ಎಕ್ಸೈಟೆಸಿ ಮಾತ್ರೆಗಳು, 4 ಕೆಜಿ ಹ್ಯಾಶೀಶ್‌ ಆಯಿಲ್‌, 440 ಗ್ರಾಂ ಚರಸ್‌, 7.1 ಕೆಜಿ ಗಾಂಜಾ ಸೇರಿ 6 ಕೋಟಿ ಮೌಲ್ಯದ ಡ್ರಗ್‌್ಸ ಜಪ್ತಿಯಾಗಿದೆ. ಬಾಣಸವಾಡಿಯಲ್ಲಿ ನೈಜೀರಿಯಾದ ಸೆಬಾಸ್ಟಿನ್‌ ಬಳಿ 6 ಲಕ್ಷ ರು ಮೌಲ್ಯದ 11 ಗ್ರಾಂ ಕೊಕೇನ್‌ ಹಾಗೂ 100 ಎಕ್ಸ್‌ಟೆಸಿ ಮಾತ್ರೆಗಳು ಸಿಕ್ಕಿದೆ. ಎಲೆಕ್ಟ್ರಾನಿಕ್‌ ಸಿಟಿ ಬಳಿ ಮತ್ತೊಬ್ಬ ವಿದೇಶಿ ಪೆಡ್ಲರ್‌ನಿಂದ 250 ಗ್ರಾಂ ಎಂಡಿಎಂಎ ಡ್ರಗ್ಸ್‌ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೊಸ ವರ್ಷಾಚರಣೆ ಪಾರ್ಟಿಗಳ ಮೇಲೆ ಸಿಸಿಬಿ ಹಾಗೂ ಸ್ಥಳೀಯರು ಪೊಲೀಸರು ನಿಗಾವಹಿಸಿದ್ದಾರೆ. ಸಂಭ್ರಮದ ನೆಪದಲ್ಲಿ ಡ್ರಗ್ಸ್‌ ಮಾರಾಟ, ಸೇವನೆ ಹಾಗೂ ಪೂರೈಕೆ ಮಾಡಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಅಂತ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ. 

click me!