ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿ ಇರುವ ಕಿತವಾಡ ಫಾಲ್ಸ್‌ಗೆ ಪ್ರವಾಸಕ್ಕೆ ತೆರಳಿದ್ದ ನಾಲ್ವರು ಯುವತಿಯರು ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲುಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ (ನ.26): ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿ ಇರುವ ಕಿತವಾಡ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು, ನಾಲ್ವರು ಯುವತಿಯರ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಬೆಳಗಾವಿಯಿಂದ ಒಟ್ಟು 40 ಮಂದಿ ಯುವತಿಯರು ಕಿತವಾಡ ಫಾಲ್ಸ್‌ಗೆ ಪ್ರವಾಸಕ್ಕೆಂದು ತೆರಳಿದ್ದರು. ಈ ವೇಳೆ ಸೆಲ್ಫಿ ಫೋಟೋ ತಗೆದುಕೊಳ್ಳುವಾಗ ಐವರು ಕಾಲು ಜಾರಿ ಬಿದ್ದಿದ್ದಾರೆ. ಈ ಪೈಕಿ ನಾಲ್ವರು ಯುವತಿಯರು ಸಾವನ್ನಪ್ಪಿದ್ದಾರೆ, ಇನ್ನು ಓರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಈ ದುರ್ಘಟನೆಯಲ್ಲಿ ಉಜ್ವಲ್ ನಗರ ಆಸೀಯಾ ಮುಜಾವರ್ (17), ಅನಗೋಳದ ಕುದ್‌ಶೀಯಾ ಹಾಸಂ ಪಟೇಲ್(20, ಝಟ್‌ಪಟ್ ಕಾಲೋನಿಯ ರುಕ್ಕಶಾರ್ ಭಿಸ್ತಿ(20) ಹಾಗೂ ತಸ್ಮಿಯಾ(20) ಸಾವನ್ನಪ್ಪಿದ್ದಾರೆ. ಈಗ ಜಲಪಾತದ ಬಳಿ ಸಾವನ್ನಪ್ಪಿದ ಎಲ್ಲ ಯುವತಿಯರ ಮೃತದೇಹಗಳನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಇವರನ್ನು ನೋಡಲು ಸಂಬಂಧಿಕರು ಹಾಗೂ ಆಯಾ ಗ್ರಾಮಗಳ ಸಾರ್ವಜನಿಕರು, ಕಾಲೇಜುಗಳ ಸ್ನೇಹಿತರು ಬಿಮ್ಸ್ ಆಸ್ಪತ್ರೆ ಬಳಿ ಜಮಾವಣೆ ಆಗುತ್ತಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಯುವತಿಗೆ ಚಿಕಿತ್ಸೆ ನಡೆಯುತ್ತಿದ್ದು, ಬಿಮ್ಸ್ ಆಸ್ಪತ್ರೆ ಬಳಿ ಪೊಲೀಸ್ ಬಿಗಿ ಭದ್ರತೆ ಒದಗಿಸಿದ್ದಾರೆ. ಭದ್ರತೆ ದೃಷ್ಟಿಯಿಂದ ಬಿಮ್ಸ್ ಆಸ್ಪತ್ರೆಯ ಬಳಿ ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ 'ಕಾಂತಾರ' ನಟಿ ಸಪ್ತಮಿ; ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್
20 ವರ್ಷದೊಳಗಿನ ಯುವತಿಯರು: ಕಿತವಾಡ ಜಲಪಾತದ ಬಳಿ ಸಾವನ್ನಪ್ಪಿದ ಎಲ್ಲ ಯುವತಿಯರು ಕೂಡ ಕಾಲೇಜು ಓದುತ್ತಿರುವ ವಿದ್ಯಾರ್ಥಿನಿಯರಾಗಿದ್ದು, ಎಲ್ಲರೂ 20 ವರ್ಷದೊಳಗಿನವರಾಗಿದ್ದಾರೆ. ಇವರು ಕಾಲುಜಾರಿ ಬಿದ್ದಾಗ ತಕ್ಷಣ ರಕ್ಷಣೆ ಮಾಡುವವರು ಯಾರೂ ಇಲ್ಲವೆಂದು ತಿಳಿದುಬಂದಿದೆ. ಇನ್ನು ಸ್ಥಳೀಯ ಈಜುಗಾರರ ನೆರವಿನಿಂದ ಮೃತ ದೇಹಗಳನ್ನು ಹೊರಗೆ ತೆಗೆಯತಲಾಗಿದೆ. ಯುವತಿಯರ ಭವಿಷ್ಯದ ಬಗ್ಗೆ ಕನಸುಗಳನ್ನು ಕಟ್ಟಿಕೊಂಡಿದ್ದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪೋಷಕರು ಮತ್ತು ಸಂಬಂಧಿಕರು ಬಿಮ್ಸ್ ಆಸ್ಪತ್ರೆ ಮುಂದೆ ಜಮಾಯಿಸುತ್ತಿದ್ದಾರೆ.