
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜೂ.07): ನಾಪತ್ತೆ ಪ್ರಕರಣ, ಅನಾಮಧೇಯ ವ್ಯಕ್ತಿಯ ಮೃತದೇಹದ ಪ್ರಕರಣವನ್ನು ಬೆನ್ನೆತ್ತಿದ ಪೊಲೀಸರಿಗೆ ವಿಚಿತ್ರ ಕೊಲೆ ಪ್ರಕರಣ ಬಯಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ಈ ಕೊಲೆ ಪ್ರಕರಣ ನಡೆದಿದೆ. 33ರ ಯುವಕನಿಗೆ 55ರ ಆಂಟಿ ಜೊತೆಗೆ ಅಕ್ರಮ ಸಂಬಂಧಕ್ಕಾಗಿ ಆಕೆಯ ಪತಿಯನ್ನೇ ಯುವಕ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಹೊರಬಂದಿದೆ.
ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ: ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪೆಟ್ರೋಲ್ ನಿಂದ ಸುಟ್ಟು ತಲೆಮರೆಸಿಕೊಂಡಿದ್ದ 3 ಜನ ಆರೋಪಿತರನ್ನು ಬಂಧಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಂಸಾಗರ ಗೇಟ್ ಬಳಿ ಯಾವುದೋ ಅನಾಮಧೇಯ ವ್ಯಕ್ತಿಯ ದೇಹವು ಸುಟ್ಟ ಸ್ಥಿತಿಯಲ್ಲಿರುವುದು ಪತ್ತೆಯಾಗಿತ್ತು. ವ್ಯಕ್ತಿಯನ್ನು ಯಾರೋ ಕೊಲೆ ಮಾಡಿ ಸೌದೆ ಮತ್ತು ಪೆಟ್ರೋಲ್ ಬಳಿಸಿ ಸುಟ್ಟು ಹಾಕಿ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿರುವುದು ಕಂಡು ಬಂದಿತ್ತು. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಕಡೂರು ಟೌನ್‌ನ ಕೋಟೆ ವಾಸಿ ಶ್ರೀಮತಿ ಮೀನಾಕ್ಷಮ್ಮ ಠಾಣೆಗೆ ಹಾಜರಾಗಿ ತನ್ನ ಗಂಡ ಸುಬ್ರಹ್ಮಣ್ಯ ಕಾಣೆಯಾಗಿರುವುದಾಗಿ ನೀಡಿದ ದೂರು ಆಧರಿಸಿ ಪ್ರಕರಣ ತನಿಖೆ ತೀವ್ರಗೊಳಿಸಲಾಯಿತು. ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಹಾಗೂ ಕೊಲೆಮಾಡಿದ ಆರೋಪಿಗಳ ಪತ್ತೆಗಾಗಿ & ಕಾಣೆಯಾದ ಸುಬ್ರಹ್ಮಣ್ಯರವರ ಪತ್ತೆ ಸಂಬಂಧ ಕಡೂರು ಪೊಲೀಸ್ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿಗಳನ್ನೊಳಗೊಂಡ 2 ಪ್ರತ್ಯೇಕ ತಂಡ ನೇಮಕ ಮಾಡಲಾಗಿತ್ತು.
ಮೂವರು ಪೊಲೀಸ್ ವಶಕ್ಕೆ: ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಪತ್ತೆ ತಂಡಗಳು ತಾಂತ್ರಿಕ ಹಾಗೂ ವಿವಿಧ ಆಯಾಮಗಳಿಂದ ಪರಿಶೀಲಿಸಿದ್ದು ಮನುಷ್ಯ ಕಾಣೆ ಪ್ರಕರಣದಲ್ಲಿ ಕಾಣೆಯಾದ ವ್ಯಕ್ತಿ ಮತ್ತು ಕೊಲೆಯಾದ ವ್ಯಕ್ತಿ ಒಬ್ಬನೆ ಆಗಿರುವುದು ಖಚಿತವಾಗಿತ್ತು. ಕಡೂರಿನ ಪ್ಲೇಗಿನಮ್ಮ ದೇವಸ್ಥಾನದ ಹತ್ತಿರದ ವಾಸಿ ಪ್ರದೀಪ್ ಆಚಾರ್,ಸಿದ್ದೇಶ್, ಫಾರೆಸ್ಟ್ ಆಫೀಸ್ ಹತ್ತಿರದ ವಿಶ್ವಾಸ್ ರನ್ನು ವಶಕ್ಕೆ ಪಡೆದು ಕೂಲಂಕಶವಾಗಿ ವಿಚಾರಣೆಗೊಳಪಡಿಸಿದಾಗ ಕೊಲೆಗೆ ಖಚಿತ ಕಾರಣ ತಿಳಿದು ಬಂದಿದೆ.
ಮೊದಲನೇ ಆರೋಪಿ ಪ್ರದೀಪ್ ಆಚಾರ್ ಹಾಗೂ ಕೊಲೆಯಾದ ವ್ಯಕ್ತಿಯ ಹೆಂಡತಿಗೂ ಅಕ್ರಮ ಸಂಬಂಧವಿದ್ದು, ಈ ವಿಚಾರದಲ್ಲಿ ಕೊಲೆಯಾದ ವ್ಯಕ್ತಿ ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ .ಪ್ರದೀಪ್ ಸ್ನೇಹಿತರಿಗೆ ಹಣದ ಆಮೀಷವನ್ನು ಒಡ್ಡಿ ಅವರ ಸಹಾಯ ಪಡೆದು ಕಂಸಾಗರ ಗೇಟ್ ಬಳಿ ಮಾರುತಿ ಓಮಿನಿ ಕಾರಿನಲ್ಲಿ ಸುಬ್ರಹ್ಮಣ್ಯ ರವರನ್ನು ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ನಂತರ ಶವವನ್ನು ಸೌದೆ ಮತ್ತು ಪೆಟ್ರೋಲ್ ಬಳಿಸಿ ಸುಟ್ಟುಹಾಕಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ. 3 ಜನ ಆರೋಪಿಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಮಾರುತಿ ಓಮಿನಿ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ