ಎಟಿಎಂ ಕೇಂದ್ರದಲ್ಲಿ ನಿವೃತ್ತ ಸರ್ಕಾರಿ ನೌಕರರೊಬ್ಬರ ಗಮನ ಬೇರೆಡೆ ಸೆಳೆದ ಅಪರಿಚಿತ ವ್ಯಕ್ತಿ ಎಟಿಎಂ ಕಾರ್ಡ್ ಬದಲಿಸಿ ಬಳಿಕ ವಿವಿಧ ಹಂತಗಳಲ್ಲಿ ₹3.75 ಲಕ್ಷ ಡ್ರಾ ಮಾಡಿಕೊಂಡು ವಂಚಿಸಿರುವ ಘಟನೆಯೊಂದು ನಡೆದಿದೆ.
ಬೆಂಗಳೂರು (ಅ.04): ಎಟಿಎಂ ಕೇಂದ್ರದಲ್ಲಿ ನಿವೃತ್ತ ಸರ್ಕಾರಿ ನೌಕರರೊಬ್ಬರ ಗಮನ ಬೇರೆಡೆ ಸೆಳೆದ ಅಪರಿಚಿತ ವ್ಯಕ್ತಿ ಎಟಿಎಂ ಕಾರ್ಡ್ ಬದಲಿಸಿ ಬಳಿಕ ವಿವಿಧ ಹಂತಗಳಲ್ಲಿ ₹3.75 ಲಕ್ಷ ಡ್ರಾ ಮಾಡಿಕೊಂಡು ವಂಚಿಸಿರುವ ಘಟನೆಯೊಂದು ನಡೆದಿದೆ. ಸುಬ್ರಹ್ಮಣ್ಯಪುರ ಬ್ರೈಟ್‌ವೇ ಲೇಔಟ್ ನಿವಾಸಿ ರಾಮೇಗೌಡ(80) ವಂಚನೆಗೆ ಒಳಗಾದವರು. ಸೆ.12ರಂದು ಮೈಸೂರು ಬ್ಯಾಂಕ್ ವೃತ್ತದ ಎಸ್‌ಬಿಐ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಉಪ್ಪಾರಪೇಟೆ ಠಾಣೆ ಪೊಲೀಸರು ಅಪರಿಚಿತನ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಏನಿದು ಘಟನೆ?: ದೂರುದಾರ ರಾಮೇಗೌಡ ತೋಟಗಾರಿಕಾ ಇಲಾಖೆಯ ನಿವೃತ್ತ ನೌಕರರಾಗಿದ್ದಾರೆ. ಸೆ.12ರಂದು ವೈಯಕ್ತಿಕ ಕೆಲಸದ ನಿಮಿತ್ತ ವಿಕಾಸಸೌಧ ಪಕ್ಕದ ಬಹುಮಹಡಿ ಕಟ್ಟಡಕ್ಕೆ ಬಂದಿದ್ದಾರೆ. ತಮ್ಮ ಕೆಲಸ ಮುಗಿಸಿಕೊಂಡು ಮಧ್ಯಾಹ್ನ 12.30ಕ್ಕೆ ಮೈಸೂರು ಬ್ಯಾಂಕ್ ವೃತ್ತದ ಬಳಿ ಬಂದಿದ್ದು, ಹಣ ಡ್ರಾ ಮಾಡಲು ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ತೆರಳಿದ್ದಾರೆ. ಬಳಿಕ ₹5 ಸಾವಿರ ಡ್ರಾ ಮಾಡಿದ್ದು, ಆ ಹಣವನ್ನು ಜೇಬಿಗೆ ಇರಿಸಿಕೊಳ್ಳುವಾಗ, ಹಿಂದೆ ನಿಂತಿದ್ದ ಅಪರಿಚಿತ ವ್ಯಕ್ತಿ, ಎಟಿಎಂ ಯಂತ್ರದಿಂದ ರಾಮೇಗೌಡರ ಎಟಿಎಂ ಕಾರ್ಡ್ ತೆಗೆದುಕೊಂಡು ತನ್ನ ಬಳಿ ಇದ್ದ ನಕಲಿ ಎಟಿಎಂ ಕಾರ್ಡ್ ನೀಡಿದ್ದಾನೆ. ಬಳಿಕ ರಾಮೇಗೌಡರು ಆ ಎಟಿಎಂ ಕಾರ್ಡ್ ಜೇಬಿಗೆ ಇರಿಸಿಕೊಂಡು ಮನೆಗೆ ತೆರಳಿದ್ದಾರೆ.
undefined
ಮತ್ತೆ ಡ್ರಾ ಮಾಡಲು ಹೋದಾಗ ಬಾರದ ಹಣ: ಸೆ.30ರಂದು ರಾಮೇಗೌಡರು ಎಸ್.ಸಿ.ರಸ್ತೆಯ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ಹಣ ಡ್ರಾ ಮಾಡಲು ತೆರಳಿದ್ದಾರೆ. ಹಲವು ಬಾರಿ ಪ್ರಯತ್ನಿಸಿದರೂ ಎಟಿಎಂ ಯಂತ್ರದಿಂದ ಹಣ ಬಂದಿಲ್ಲ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಇದು ನಿಮ್ಮ ಎಟಿಎಂ ಕಾರ್ಡ್ ಅಲ್ಲ ಎಂದಿದ್ದಾರೆ. ಬಳಿಕ ರಾಮೇಗೌಡರು ತಮ್ಮ ಖಾತೆ ಇರುವ ಆರ್.ಕೆ.ಲೇಔಟ್ ಎಸ್‌ಬಿಐ ಶಾಖೆಗೆ ತೆರಳಿ ವಿಚಾರಿಸಿದಾಗ, ನಿಮ್ಮ ಎಟಿಎಂ ಕಾರ್ಡ್ ಬದಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.
ಇನ್ನೊಂದು ವರ್ಷದವರೆಗೂ ಚಾಮುಂಡೇಶ್ವರಿ ಆಶೀರ್ವಾದ ಇರಲಿ: ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ!
ಪಾಸ್ ಬುಕ್ ಎಂಟ್ರಿ ವೇಳೆ ಡ್ರಾ ಬೆಳಕಿಗೆ: ಪಾಸ್ ಬುಕ್ ಎಂಟ್ರಿ ಮಾಡಿಸಿದಾಗ ಸೆ.12ರಿಂದ ಸೆ.24ರ ನಡುವೆ ವಿವಿಧ ಹಂತಗಳಲ್ಲಿ ರಾಮೇಗೌಡರ ಬ್ಯಾಂಕ್ ಖಾತೆಯಿಂದ ದುಷ್ಕರ್ಮಿ ₹3.75 ಲಕ್ಷ ಡ್ರಾ ಮಾಡಿರುವುದು ಗೊತ್ತಾಗಿದೆ. ಹಣ ಕಡಿತದ ಬಗ್ಗೆ ಮೊಬೈಲ್‌ಗೆ ಸಂದೇಶಗಳು ಬಂದಿದ್ದು, ರಾಮೇಗೌಡರು ಆ ಸಂದೇಶಗಳನ್ನು ಗಮನಿಸಿಲ್ಲ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಯ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.