
ನಂಜನಗೂಡು (ಜೂ.27): ತಾಲೂಕಿನ ಹುಲ್ಲಹಳ್ಳಿಯಲ್ಲಿ ಒಂದೇ ದಿನ ಸುಮಾರು 20ಕ್ಕೂ ಹೆಚ್ಚು ಮಂದಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿರುವ ಘಟನೆ ಗುರುವಾರ ನಡೆದಿದೆ.
ಗುರುವಾರ ಸಂಜೆ 4ರ ಸಮಯದಲ್ಲಿ ಮಕ್ಕಳು ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಬೀದಿ ನಾಯಿ ಏಕಾಏಕಿ ದಾಳಿ ಮಾಡಿ ಸಿಕ್ಕ ಸಿಕ್ಕ ಮಕ್ಕಳಿಗೆ ಕಡಿದು ಓಡಿದ್ದು, ನಾಯಕರ ಬೀದಿ, ಅಂಬೇಡ್ಕರ್ ಜೋಡಿ ರಸ್ತೆ ಹಾಗೂ ಬಸ್ ನಿಲ್ದಾಣದ ಮುಂಭಾಗದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಓರ್ವನಿಗೂ ಕಚ್ಚಿ ಆತಂಕ ಸೃಷ್ಟಿಸಿದೆ.
ರಾತ್ರಿ 7ರವರೆಗೆ ಗ್ರಾಮದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿಶ್ಚಿತ (4 ವರ್ಷ), ಅನಿತಾ (35), ವಿನೋದ (18), ಅಂಜಲಿ (12) ಧನುಷ್ (5), ರವಿಕುಮಾರ್ (12), ಅರ್ಮಾನ್ (3), ಸವಿತಾ (37), ಗಿರೀಶ್ (40), ಉಸಬ್ ಖಾನ್ (7), ಕಾಳಸ್ವಾಮಿ (36) ನಾಯಿ ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆದುಕೊಂಡಿದ್ದು ಸುಮಾರು 10ಕ್ಕೂ ಹೆಚ್ಚು ಮಂದಿ ಖಾಸಗಿ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
ಶಾಲಾ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಕೈ- ಕಾಲು, ಬೆನ್ನಿನ ಹಿಂಬದಿ, ತೊಡೆ ಭಾಗಗಳಿಗೆ ನಾಯಿ ಕಚ್ಚಿದೆ. ರಸ್ತೆಯಲ್ಲಿ ಸಿಕ್ಕ ಸಿಕ್ಕವರೆ ಮೇಲೆ ಎರಗಲು ಯತ್ನಿಸಿದ ನಾಯಿಯನ್ನು ಹಿಡಿಯಲು ಗ್ರಾಪಂ ಸಿಬ್ಬಂದಿಗಳೊಡಗೂಡಿ ಗ್ರಾಮಸ್ಥರು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಹೀಗಾಗಿ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ತಕ್ಷಣ ಸಿಕ್ಕಸಿಕ್ಕವರನ್ನು ಕಚ್ಚುತ್ತಿರುವ ಬೀದಿ ನಾಯಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಗುರುವಾರ ಒಂದೇ ದಿನ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ 11 ಮಂದಿ ರೋಗಿಗಳಿಗೆ ರೆಬಿಸ್ ಕಾಯಿಲೆ ತಡೆ ಚುಚ್ಚು ಮದ್ದು ಚಿಕಿತ್ಸೆ ಕೊಡಲಾಗಿದೆ ಎಂದು ಹುಲ್ಲಹಳ್ಳಿ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ