
ಕಾರವಾರ (ಜ.8): ಕಾನೂನಿನ ಕೈಗಳು ಎಷ್ಟು ಉದ್ದ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಬರೋಬ್ಬರಿ 30 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಪ್ರಕರಣದ ಆರೋಪಿಯನ್ನು ಭಟ್ಕಳ ಶಹರ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಭಟ್ಕಳದ ಸುಲ್ತಾನ್ ಸ್ಟ್ರೀಟ್ ಮೂಲದ ಮಹ್ಮದ್ ಜಾವೇದ್ (55) ಬಂಧಿತ ಆರೋಪಿ. ಈತ ಕಳೆದ ಮೂವತ್ತು ವರ್ಷಗಳಿಂದ ಪೊಲೀಸರಿಗೇ ಸಿಗದೆ ಭೂಗತನಾಗಿದ್ದ.
ಪ್ರಕರಣದ ಹಿನ್ನೆಲೆ ನೋಡುವುದಾದರೆ, 1996ರಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಜಾವೇದ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬೆನ್ನಲ್ಲೇ ಈತ ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ. ಪೊಲೀಸರು ಎಷ್ಟೇ ಹುಡುಕಾಡಿದರೂ ಈತನ ಸುಳಿವು ಸಿಗದೆ ಪ್ರಕರಣ ನೆನೆಗುದಿಗೆ ಬಿದ್ದಿತ್ತು. ಆದರೆ, ಇತ್ತೀಚೆಗೆ ಹಳೆಯ ವಾರೆಂಟ್‌ಗಳ ವಿಲೇವಾರಿಗೆ ವಿಶೇಷ ಆದ್ಯತೆ ನೀಡಿದ ಪೊಲೀಸರು ಈತನ ಬೆನ್ನಟ್ಟಿದ್ದರು.
ತಲೆಮರೆಸಿಕೊಂಡಿದ್ದ ಜಾವೇದ್ ಮಹಾರಾಷ್ಟ್ರದ ಥಾನೆ ನಗರದ 'ಗ್ಯಾಲಕ್ಸಿ ಅಪಾರ್ಟ್‌ಮೆಂಟ್'ನಲ್ಲಿ ವಾಸವಾಗಿದ್ದ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಆರೋಪಿಯ ಪತ್ತೆಗಾಗಿ ಭಟ್ಕಳ ಶಹರ ಪೊಲೀಸರು ವಿಶೇಷ ನುರಿತ ತಂಡವನ್ನು ರಚಿಸಿದ್ದರು. ತಾಂತ್ರಿಕ ಮಾಹಿತಿ ಹಾಗೂ ಸ್ಥಳೀಯ ಪೊಲೀಸರ ಸಹಕಾರ ಬಳಸಿಕೊಂಡು ಮುಂಬೈಗೆ ತೆರಳಿದ ಪೊಲೀಸ್ ತಂಡ, ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯನ್ನು ಭಟ್ಕಳಕ್ಕೆ ಕರೆತಂದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಡಿವೈಎಸ್ಪಿ ಮಹೇಶ್ ಎಂ., ಸಿಪಿಐ ದಿವಾಕರ ಪಿ.ಎಂ. ಹಾಗೂ ಪಿಎಸ್ಐ ನವೀನ್ ಎಸ್. ನಾಯ್ಕ್ ನೇತೃತ್ವದ ತಂಡ ಈ ಕಾರ್ಯಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದು, ಸಾರ್ವಜನಿಕ ವಲಯದಲ್ಲಿ ಪೊಲೀಸರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ