
ಕೋಲಾರ (ಜ.7): ಸೆಕ್ಯೂರಿಟಿ ಕ್ಯಾಬಿನ್‌ಗೆ ಬೆಂಕಿ ತಗುಲಿದ ಪರಿಣಾಮ ತಂದೆ ಮತ್ತು ಎರಡು ವರ್ಷದ ಹಸುಳೆ ಸಾವನ್ನಪ್ಪಿರುವ ಧಾರುಣ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ ಆದಿಶೇಷ ಲೇಔಟ್‌ನಲ್ಲಿ ಈ ದುರಂತ ಸಂಭವಿಸಿದೆ. ಬಿಲ್ಡರ್ ರಮೇಶ್ ಎಂಬುವವರಿಗೆ ಸೇರಿದ ಈ ಲೇಔಟ್‌ನಲ್ಲಿ ತಮಿಳುನಾಡು ಮೂಲದ ಕುಮಾರ್ (ತಂದೆ) ತಮ್ಮ ಕುಟುಂಬದೊಂದಿಗೆ ಸೆಕ್ಯೂರಿಟಿ ಕ್ಯಾಬಿನ್‌ನಲ್ಲಿ ವಾಸವಿದ್ದರು. ಎರಡು ದಿನಗಳ ಹಿಂದೆ ರಾತ್ರಿ ವೇಳೆ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕ್ಯಾಬಿನ್‌ಗೆ ಏಕಾಏಕಿ ಬೆಂಕಿ ಹತ್ತಿಕೊಂಡಿದೆ.
ಬೆಂಕಿ ಕಾಣಿಸಿಕೊಂಡ ವೇಳೆ ಕ್ಯಾಬಿನ್ ಒಳಗೆ ಗಾಢ ನಿದ್ರೆಯಲ್ಲಿದ್ದ ತಂದೆ ಕುಮಾರ್ ಹಾಗೂ 2 ವರ್ಷದ ಪುಟ್ಟ ಮಗು ಯಾಮಿನಿ ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಗಂಭೀರವಾಗಿ ಸುಟ್ಟು ಕರಕಲಾಗಿದ್ದರು. ತಕ್ಷಣವೇ ಇಬ್ಬರನ್ನೂ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ದೇಹದ ಬಹುತೇಕ ಭಾಗ ಸುಟ್ಟು ಹೋಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ತಂದೆ ಮತ್ತು ಮಗಳು ಇಂದು ಕೊನೆಯುಸಿರೆಳೆದಿದ್ದಾರೆ.
ಪತ್ನಿಯ ಸ್ಥಿತಿ ಗಂಭೀರ, ಪ್ರಾಣಾಪಾಯದಿಂದ ಪಾರು
ಘಟನೆ ನಡೆದ ವೇಳೆ ಕುಮಾರ್ ಅವರ ಪತ್ನಿ ಅಮ್ಮು ಸಹ ಕ್ಯಾಬಿನ್‌ನಲ್ಲಿಯೇ ಇದ್ದರು. ಅದೃಷ್ಟವಶಾತ್ ಬೆಂಕಿ ತೀವ್ರವಾಗಿ ವ್ಯಾಪಿಸುವ ಮೊದಲೇ ಅವರು ಹೊರಬಂದಿದ್ದರಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಣ್ಣೆದುರೇ ಗಂಡ ಮತ್ತು ಮಗು ಬೆಂಕಿಗೆ ಆಹುತಿಯಾದದ್ದನ್ನು ಕಂಡು ಅಮ್ಮು ಅವರ ಆಕ್ರಂದನ ಮುಗಿಲು ಮುಟ್ಟಿದೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ