
ಬೆಂಗಳೂರು(ಜ.05): ತಾನು ನಿಂದಿಸಿದ್ದಕ್ಕೆ ತಂದೆ ಬಳಿ ಕ್ಷಮೆ ಕೋರಿ ಬಂದೂಕಿನಿಂದ ಎದೆಗೆ ಗುಂಡು ಹಾರಿಸಿಕೊಂಡು ಎಂಜಿನಿಯರ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಿರುಮಲಾಪುರ ಸಮೀಪದ ಭವಾನಿ ನಗರದ ನಿವಾಸಿ ವಿಶು ಉತ್ತಪ್ಪ (19) ಮೃತ ದುರ್ದೈವಿ. ಮನೆಯಲ್ಲಿ ಯಾರು ಇಲ್ಲದ ವೇಳೆ ಬುಧವಾರ ರಾತ್ರಿ 7.30ರ ಸುಮಾರಿಗೆ ವಿಶು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೂ ಮುನ್ನ ತಂದೆ ಕೆ.ಡಿ. ತಮ್ಮಯ್ಯ ಅವರಿಗೆ ಕರೆ ಮಾಡಿ ಎದೆಗೆ ಗುಂಡು ಹಾರಿಸಿಕೊಂಡಿರುವುದಾಗಿ ಆತ ಹೇಳಿದ್ದ. ತಕ್ಷಣವೇ ಆತಂಕದಿಂದ ಮೃತನ ಪೋಷಕರು ಮನೆಗೆ ಮರಳಿದರು. ಆದರೆ ಅಷ್ಟರಲ್ಲಿ ವಿಶು ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.
16ರ ಬಾಲಕಿ ಮೇಲೆ ವರ್ಚ್ಯುವಲ್ ಗ್ಯಾಂಗ್‌ರೇಪ್: ಇದೇನಿದು ವಿಚಿತ್ರ ಪ್ರಕರಣ
ಮಡಿಕೇರಿ ಜಿಲ್ಲೆ ಮುಕೊಡಲು ಗ್ರಾಮದ ತಮ್ಮಯ್ಯ ಅವರು, ತಮ್ಮ ಪತ್ನಿ ಹಾಗೂ ಮಗನ ಜತೆ ಭವಾನಿ ನಗರದಲ್ಲಿ ನೆಲೆಸಿದ್ದರು. ನೈಸ್ ಕಂಪನಿಯ ಟೋಲ್‌ಗೇಟ್‌ನಲ್ಲಿ ಅವರು ಹಣ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಪುತ್ರ ಖಾಸಗಿ ಎಂಜಿನಿಯರ್ ಕಾಲೇಜಿನಲ್ಲಿ ಮೊದಲ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ. ರಾಜ್ಯ ಸರ್ಕಾರದ ಪರವಾನಿಗೆ ಹೊಂದಿದ್ದ ಡಬಲ್ ಬ್ಯಾರೆಲ್ ಬಂದೂಕು ತಮ್ಮಯ್ಯ ಬಳಿ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅನಾರೋಗ್ಯದ ಎಂದು ಹೇಳಿ ವಿಶು ಬುಧವಾರ ಮನೆಯಲ್ಲೇ ಇದ್ದ. ಆಗ ‘ಮಗನಿಗೆ ಆಸ್ಪತ್ರೆಗೆ ಹೋಗದೆ ಯಾಕೆ ಮನೆಯಲ್ಲೇ ಮಲಗಿರುತ್ತೀಯಾ. ಯಾವಾಗಲೂ ಇದೇ ವರ್ತನೆ ಆಯ್ತು’ ಎಂದು ಬೈದು ತಮ್ಮಯ್ಯ ಬುದ್ಧಿ ಮಾತು ಹೇಳಿದ್ದರು. ಈ ಮಾತಿಗೆ ವಿಶು ತಿರುಗಿ ಬಿದ್ದಿದ್ದ. ಆ ಸಂದರ್ಭದಲ್ಲಿ ತಂದೆ-ಮಗನ ನಡುವೆ ಮಾತಿನ ಚಕಮಕಿ ನಡೆದಿತ್ತು. ತಂದೆಯನ್ನು ನಿಂದಿಸಿದ್ದ. ಇದಾದ ಬಳಿಕ ಗೃಹ ಬಳಕೆ ವಸ್ತುಗಳ ಖರೀದಿ ಸಲುವಾಗಿ ಪತ್ನಿ ಜತೆ ಮನೆಯಿಂದ ಹೊರಗೆ ಬಂದಿದ್ದರು. ಆಗ ಮನೆಯಲ್ಲೇ ಏಕಾಂಗಿಯಾಗಿದ್ದ ವಿಶು, ತಾನು ತಂದೆಯನ್ನು ನಿಂದಿಸಿದ್ದಕ್ಕೆ ಬೇಸರಪಟ್ಟುಗೊಂಡಿದ್ದಾನೆ. ಇದೇ ಬೇಸರದಲ್ಲೇ ಆತ ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾನೆ.
ಸಾರಿ ಅಪ್ಪ, ನಾನು ನಿನಗೆ ಬೈಯಬಾರದಿತ್ತು:
ಮನೆಯಲ್ಲಿ ಡಬಲ್ ಬ್ಯಾರೆಲ್ ಬಂದೂಕಿನಿಂದ ಎದೆಗೆ ಗುಂಡು ಹಾರಿಸಿಕೊಂಡ ವಿಶು. ಬಳಿಕ ತನ್ನ ತಂದೆ ಕರೆ ಮಾಡಿ ಅಪ್ಪ ಸಾರಿ. ನಿನಗೆ ನಾನು ಬೈದಿದ್ದಕ್ಕೆ ಬೇಸರವಾಗಿದೆ. ನಾನು ಗುಂಡು ಹೊಡೆದುಕೊಂಡಿದ್ದೇನೆ ಎಂದಿದ್ದಾನೆ. ತಕ್ಷಣವೇ ಆತಂಕಗೊಂಡ ಅವರು, ಮನೆಗೆ ಮರಳಿದ್ದಾರೆ. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ