ಇತ್ತೀಚೆಗೆ ಸರ್ಜಾಪುರ ರಸ್ತೆಯ ದೊಡ್ಡಕನ್ನಲ್ಲಿಯಲ್ಲಿ ನಡೆದ ಆಕ್ಸಿಸ್ ಬ್ಯಾಂಕ್ ಎಟಿಎಂ ಯಂತ್ರದಲ್ಲಿ ₹16.56 ಲಕ್ಷ ದರೋಡೆ ಪ್ರಕರಣಕ್ಕೆ ಮಹತ್ವದ ತಿರುವುದು ಸಿಕ್ಕಿದೆ. ದರೋಡೆಕೋರರಿಗೆ ಸಿಕ್ಕಿದ್ದು ₹6,800 ಮಾತ್ರ.
ಬೆಂಗಳೂರು (ಜು.17): ಇತ್ತೀಚೆಗೆ ಸರ್ಜಾಪುರ ರಸ್ತೆಯ ದೊಡ್ಡಕನ್ನಲ್ಲಿಯಲ್ಲಿ ನಡೆದ ಆಕ್ಸಿಸ್ ಬ್ಯಾಂಕ್ ಎಟಿಎಂ ಯಂತ್ರದಲ್ಲಿ ₹16.56 ಲಕ್ಷ ದರೋಡೆ ಪ್ರಕರಣಕ್ಕೆ ಮಹತ್ವದ ತಿರುವುದು ಸಿಕ್ಕಿದೆ. ದರೋಡೆಕೋರರಿಗೆ ಸಿಕ್ಕಿದ್ದು ₹6,800 ಮಾತ್ರ. ಕುತೂಹಲದ ಸಂಗತಿಯೆಂದರೆ, ಎಟಿಎಂ ಯಂತ್ರಕ್ಕೆ ಹಣ ತುಂಬುವ ಕಂಪನಿಯ ಐವರು ನೌಕರರು ಹಣ ತುಂಬದೆ ತಾವೇ ₹16.50 ಲಕ್ಷ ಲಪಟಾಯಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಐವರು ಆರೋಪಿಗಳನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಕಂಪನಿಯ ಫೀಲ್ಡ್ ಆಪರೇಷನ್ ಮ್ಯಾನೇಜರ್ ಪ್ರತಾಪ್(32), ಎಟಿಎಂ ಆಫೀಸರ್ ಪವನ್ ಕಲ್ಯಾಣ್(28), ಎಟಿಎಂ ಇನ್ಚಾರ್ಜ್ ಧರ್ಮೇಂದ್ರ(52), ಮಡಿವಾಳ ಏರಿಯಾ ಬ್ರಾಂಚ್ ಹೆಡ್ ರಾಘವೇಂದ್ರ(36) ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಮಹೇಶ್(30) ಬಂಧಿತರು. ಆರೋಪಿಗಳಿಂದ ₹13.50 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಭಾರತದ ಪ್ರಥಮ ಡಬಲ್ ಡೆಕ್ಕರ್ ಫ್ಲೈಓವರ್ ಇಂದಿನಿಂದ ಸೇವೆಗೆ: ಯಾರಿಗೆ ಹೆಚ್ಚು ಅನುಕೂಲ?
ತಾಂತ್ರಿಕ ದೋಷದಿಂದ ಹಣ ತುಂಬಿರಲಿಲ್ಲ: ಆರೋಪಿಗಳು ಜು.1ರಂದು ಸರ್ಜಾಪುರ ರಸ್ತೆಯ ದೊಡ್ಡಕನ್ನಲ್ಲಿ ನಡೆದ ಆಕ್ಸಿಸ್ ಬ್ಯಾಂಕ್ ಎಟಿಎಂ ಯಂತ್ರಕ್ಕೆ ₹16.50 ಲಕ್ಷ ತುಂಬಲು ತೆರಳಿದ್ದಾರೆ. ಆದರೆ, ಎಟಿಎಂ ಯಂತ್ರದಲ್ಲಿ ತಾಂತ್ರಿಕ ದೋಷದ ಕಾರಣ ಹಣ ತುಂಬದೆ ವಾಪಾಸ್ ತೆರಳಿದ್ದಾರೆ. ಜು.2ರಂದು ಮತ್ತೆ ಹಣ ತುಂಬಲು ಬಂದಾಗಲೂ ಎಟಿಎಂ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಹಣ ತುಂಬದೆ ವಾಪಾಸ್ ಆಗಿದ್ದಾರೆ. ಈ ತಾಂತ್ರಿಕ ದೋಷ ಹಾಗೂ ಹಣ ತುಂಬದೇ ಇರುವ ವಿಚಾರವನ್ನು ಆರೋಪಿಗಳು ಬ್ಯಾಂಕ್‌ಗೆ ಮಾಹಿತಿ ನೀಡಿಲ್ಲ.
ದರೋಡೆ ಬೆಳಕಿಗೆ: ಆದರೆ, ಈ ಆಕ್ಸಿಸ್ ಬ್ಯಾಂಕ್ ಎಟಿಎಂ ಯಂತ್ರದಲ್ಲಿ ಯಾವುದೇ ಹಣದ ವ್ಯವಹಾರ ನಡೆಯದೆ ಇರುವುದರಿಂದ ಅನುಮಾನಗೊಂಡು ಜು.6ರಂದು ಬ್ಯಾಂಕ್‌ನವರು ಎಟಿಎಂ ಕೇಂದ್ರಕ್ಕೆ ಬಂದು ನೋಡಿದಾಗ, ದುಷ್ಕರ್ಮಿಗಳು ಎಟಿಎಂ ಯಂತ್ರವನ್ನು ಗ್ಯಾಸ್ ಕಟ್ಟರ್‌ನಿಂದ ಕತ್ತರಿಸಿ ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ. ದರೋಡೆ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿಗಳು ಈ ಎಟಿಎಂ ಕೇಂದ್ರಕ್ಕೆ ನಾವು ಜು.1ರಂದೇ ₹16.50 ಲಕ್ಷ ತುಂಬಿರುವುದಾಗಿ ಬ್ಯಾಂಕಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಬ್ಯಾಂಕ್‌ನವರು ಎಟಿಎಂ ಯಂತ್ರದಲ್ಲಿ ₹16.56 ಲಕ್ಷ ದರೋಡೆಯಾಗದೆ ಎಂದು ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇಬ್ಬರು ದುಷ್ಕರ್ಮಿಗಳಿಂದ ದರೋಡೆ: ತನಿಖೆಗೆ ಇಳಿದ ಪೊಲೀಸರು, ಎಟಿಎಂ ಕೇಂದ್ರದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಮಾಡಿದಾಗ, ಇಬ್ಬರು ದುಷ್ಕರ್ಮಿಗಳು ಜು.6ರ ಮುಂಜಾನೆ 3 ಗಂಟೆಗೆ ಮುಖಕ್ಕೆ ಬೆಡ್‌ಶೀಟ್ ಸುತ್ತಿಕೊಂಡು ಎಟಿಎಂ ಕೇಂದ್ರ ಪ್ರವೇಶಿಸಿ, ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣದ ದ್ರಾವಣ ಸ್ಪ್ರೇ ಮಾಡಿರುವುದು ಸೆರೆಯಾಗಿತ್ತು. ಬಳಿಕ ಗ್ಯಾಸ್ ಕಟ್ಟರ್‌ನಿಂದ ಎಟಿಎಂ ಯಂತ್ರ ಕತ್ತರಿಸಿ ಹಣ ದರೋಡೆ ಮಾಡಿರುವುದು ಗೊತ್ತಾಗಿತ್ತು.
ಹಣ ತುಂಬದಿರುವುದು ಸಿಸಿಟಿವಿಯಲ್ಲಿ ಸೆರೆ: ತನಿಖೆ ಮುಂದುವರೆಸಿದ ಪೊಲೀಸರು, ಎಟಿಎಂ ಕೇಂದ್ರದ ಜು.1ರ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಮಾಡಿದಾಗ, ಆರೋಪಿಗಳು ಅಂದು ಎಟಿಎಂ ಕೇಂದ್ರಕ್ಕೆ ಬಂದಿದ್ದು, ಹಣ ತುಂಬದೇ ವಾಪಾಸ್ ಆಗಿರುವುದು ಕಂಡು ಬಂದಿದೆ. ಬಳಿಕ ಅನುಮಾನಗೊಂಡು ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆರೋಪಿಗಳು ಎಟಿಎಂ ಯಂತ್ರಕ್ಕೆ ಹಣ ತುಂಬದೇ ತಾವೇ ಹಣ ತೆಗೆದುಕೊಂಡು ಹೋಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಎಟಿಎಂ ಕೇಂದ್ರದಲ್ಲಿ ಜು.6ರಂದು ದರೋಡೆ ಆಗಿರುವ ಸಂಗತಿ ಹೊರಬಿದ್ದ ಬಳಿಕ ನಾವು ಎಟಿಎಂ ಯಂತ್ರಕ್ಕೆ ಜು.1ರಂದೇ ₹16.50 ಲಕ್ಷ ತುಂಬಿದ್ದಾಗಿ ಬ್ಯಾಂಕ್‌ಗೆ ಸುಳ್ಳು ಹೇಳಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಬಳಿಕ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ₹13.50 ಲಕ್ಷ ಜಪ್ತಿ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಾರ್ಕಿಂಗ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಬಿಬಿಎಂಪಿ, ಸಾರಿಗೆ ಇಲಾಖೆ ಜೊತೆ ಚರ್ಚೆ: ಪರಮೇಶ್ವರ್
ದರೋಡೆಕೋರರಿಗೆ ಸಿಕ್ಕಿದ್ದು ₹6,800 ಮಾತ್ರ: ಜು.6ರಂದು ಮುಂಜಾನೆ ಮುಖಕ್ಕೆ ಬೆಡ್‌ಶೀಟ್ ಕಟ್ಟಿಕೊಂಡು ಎಟಿಎಂ ಕೇಂದ್ರಕ್ಕೆ ಎಂಟ್ರಿ ಕೊಟ್ಟು ಗ್ಯಾಸ್ ಕಟ್ಟರ್ ಮೂಲಕ ಎಟಿಎಂ ಯಂತ್ರ ಕತ್ತರಿಸಿದ ದರೋಡೆಕೋರರಿಗೆ ಕ್ಯಾಶ್ ಬಾಕ್ಸ್‌ನಲ್ಲಿ ಸಿಕ್ಕಿದ್ದು ಕೇವಲ ₹6,800 ಮಾತ್ರ. ಆ ಹಣವನ್ನೇ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಎಟಿಎಂ ಕೇಂದ್ರದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾದಲ್ಲಿ ದುಷ್ಕರ್ಮಿಗಳು ತಮಿಳುನಾಡು ನೋಂದಣಿಯ ಕಾರಿನಲ್ಲಿ ಬಂದು ಕೃತ್ಯ ಎಸಗಿರುವುದು ಗೊತ್ತಾಗಿದೆ. ಈ ಕಾರಿ ಜಾಡು ಹಿಡಿದು ತನಿಖೆ ಮಾಡಿದಾಗ, ದುಷ್ಕರ್ಮಿಗಳು ಆ ಕಾರನ್ನು ತಮಿಳುನಾಡಿನಲ್ಲಿ ಕಳವು ಮಾಡಿ ಬಳಿಕ ದರೋಡೆಗೆ ಬಳಸಿಕೊಂಡಿರುವುದು ಗೊತ್ತಾಗಿದೆ. ಈಗಾಗಲೇ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.