
ಹುಬ್ಬಳ್ಳಿ(ಆ.10): ಸ್ಥಳದ ಪಂಚನಾಮೆಗೆ ಕರೆದುಕೊಂಡು ಹೋದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಮೂವರು ಸೇರಿದಂತೆ 12 ಜನ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ಅವರು, ಇಲ್ಲಿನ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ತಬೀಬ ಲ್ಯಾಂಡ್ ಕೆಇಬಿ ಗ್ರಿಡ್ ಬಳಿ ಗಾಂಜಾ ಆರೋಪಿಗಳನ್ನು ಕರೆದೊಯ್ದು ಪಂಚನಾಮೆ ನಡೆಸಲು ತೆರಳುತ್ತಿದ್ದ ವೇಳೆ ಓಡಿಸ್ಸಾ ಮೂಲಕ ಕೇಶವಚಂದ್ರ, ನೀಲಾಂಬರ ಮತ್ತು ಹಾವೇರಿ ಮೂಲದ ತೌಸೀಫ್ ಅಹ್ಮದ್ ಎಂಬುವವರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಕೂಡಲೇ ಕಾರ್ಯೋನ್ಮುಖರಾದ ಪೊಲೀಸ್ ಸಿಬ್ಬಂದಿ ಮರಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಸಿಸಿಬಿ ವಿಭಾಗದ ಪಾಟೀಲ ಮತ್ತು ಹದ್ದೇರಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದರು.
ಬೆಂಗಳೂರು: ಆನ್‌ಲೈನ್‌ನಲ್ಲಿ ಗಾಂಜಾ ಖರೀದಿಸಿ ಮಾರಾಟ ಮಾಡುತ್ತಿದ್ದವನ ಬಂಧನ
ಓಡಿಸ್ಸಾ ಮೂಲದ ಕೇಶವಚಂದ್ರ, ನೀಲಾಂಬರ ರಾವುತ್, ಉತ್ತರಾಖಂಡದ ಮಹ್ಮದಲಿ, ಹಾವೇರಿಯ ತೌಸಿಫ್ ಅಹ್ಮದ್, ಹಳೇ ಹುಬ್ಬಳ್ಳಿಯ ಪವನ್, ಸಿದ್ದಾರ್ಥ, ಮಂಜುನಾಥ, ನದೀಂ, ವಿಠಲ, ಶಾನವಾಜ, ಕಮರಿಪೇಟೆಯ ಗಣಪತಸಾ, ಚೆನ್ನಪೇಟೆಯ ಕಾರ್ತಿಕ್ ಬಂಧಿತ ಆರೋಪಿಗಳು. ಇವರಿಂದ 2.50 ಲಕ್ಷ ಮೌಲ್ಯದ 2.5 ಕೆಜಿ ಗಾಂಜಾ, ೬ ೨ ಲಕ್ಷ ಮೌಲ್ಯದ ಕಾರ್, ಎರಡು ತಲ್ವಾರ್, ಡ್ರಾಗರ್. 10 ಮೊಬೈಲ್ ಹಾಗೂ ₹ 2 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಇವರಲ್ಲಿ ಆರೋಪಿಗಳಾದ ಪವನ್ ಮತ್ತು ಸಿದ್ದಾರ್ಥ ವಿರುದ್ಧ ಹಲವು ಠಾಣೆಗಳಲ್ಲಿ 4, ಹಾವೇರಿಯ ತೌಸಿಫ್ ಮತ್ತು ಹುಬ್ಬಳ್ಳಿಯ ಮಂಜುನಾಥ ವಿರುದ್ಧ ಪ್ರತ್ಯೇಕ 2 ಪ್ರಕರಣಗಳು ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಮಹಾರಾಷ್ಟ್ರ ಮತ್ತು ಗುಜರಾತ್ ಕಡೆಯಿಂದ ಹುಬ್ಬಳ್ಳಿಗೆ ಗಾಂಜಾ ಪೂರೈಕೆಯಾಗುತ್ತಿರುವ ಮಾಹಿತಿ ಲಭ್ಯವಾಗಿದ್ದು, ಅಲ್ಲಿಗೆ ನಮ್ಮ ತಂಡಗಳನ್ನು ಕಳುಹಿಸಲಾಗಿದೆ. ಹೊಸ ಆ್ಯಪ್, ಇಂಟರ್‌ನೆಟ್ ಮೂಲಕ ಅವರು ಸ್ಥಳೀಯರನ್ನು ಸಂಪರ್ಕಿಸಿ ಗಾಂಜಾ ವ್ಯವಹಾರ ನಡೆಸುತ್ತಿರುವುದಾಗಿ ತಿಳಿಸಿದರು.
ಯುವಕನ ಹತ್ಯೆ-ಆರೋಪಿ ಬಂಧನ:
ಧಾರವಾಡದ ಮರಾಠಾ ಕಾಲನಿ ಬಳಿ 2 ದಿನಗಳ ಹಿಂದೆ ಬೈಕ್ ಸವಾರ ರೋಹಿತ್ ಕಂಬಾರ (20) ಮೇಲೆ ಕಾರು ಹಾಯಿಸಿ ಸಾವಿಗೆ ಕಾರಣನಾದ ಕುಂದಗೋಳ ತಾಲೂಕಿನ ರಾಮನಕೊಪ್ಪದ ಚಾಲಕ ಮಹಾಂತೇಶ ಕುರಾಡೆ ಅವರನ್ನು ಧಾರವಾಡ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವನ ವಿರುದ್ಧ ಬಿಎನ್ ಎಸ್ ಕಾಯ್ದೆಯ ಆಡಿ ಮಾನವ ಹತ್ಯೆ ಪ್ರಕರಣ ದಾಖಲಿಸಿಕೊಂಡು ಕ್ರಮ ವಹಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಹಿಂದೆ ಅಪಘಾತ ಪ್ರಕರಣಗಳಲ್ಲಿ ಠಾಣಾ ಜಾಮೀನು ದೊರೆಯುತ್ತಿತ್ತು, ಆದರೆ, ಈಗ ಹೊಸ ಕಾಯಿದೆ ಜಾರಿಯಾಗಿದ್ದು, ಸವಾರರು ಎಚ್ಚರಿಕೆ ಮತ್ತು ಜಾಗೃತಿಯಿಂದ ವಾಹನ ಚಲಾಯಿಸಬೇಕು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ನಾಲ್ವರ ಬಂಧನ:
ಧಾರವಾಡದ ಕೋಳಿಕೇರಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಶಹರ ಠಾಣೆ ಪಿಐ ಎನ್.ಸಿ. ಕಾಡದೇವರಮಠ ನೇತೃತ್ವದ ಪೊಲೀಸರ ತಂಡ, ಬಂಧಿತರಿಂದ 1.91 ಲಕ್ಷ ಮೌಲ್ಯದ ಗಾಂಜಾ, 2 ಮೊಬೈಲ್ ಮತ್ತು 1200 ವಶಪಡಿಸಿಕೊಂಡಿದೆ. ಪ್ರಕರಣದಲ್ಲಿ ಸೊಲ್ಲಾಪುರದ ಸೈಫಲಿ ಸುತಾರ, ಸಂಕೇತ ಕೋತ್, ಧಾರವಾಡದ ಸಂದೀಪ ಸಳಕೆ ಮತ್ತು ಹಜರತಲಿ ಮಕಾನದಾರ ಎಂಬುವವರನ್ನು ಬಂಧಿಸಿರುವುದಾಗಿ ಪೊಲೀಸ್ ಮಾಹಿತಿ ನೀಡಿದರು.
ಬೀದರ್: ಔರಾದ್ ಬಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 15.50 ಕೋಟಿ ಮೌಲ್ಯದ ಗಾಂಜಾ ವಶ
ಈ ವೇಳೆ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್. ಎಸಿಪಿ ಉಮೇಶ ಚಿಕ್ಕಮಠ, ಶಿವಪ್ರಕಾಶ ನಾಯ್ಕ, ವಿನೋದ ಮುತ್ತೇದಾರ, ಮಾರುತಿ ಗುಳ್ಳಾರಿ ಸೇರಿದಂತೆ ಹಲವರಿದ್ದರು.
10 ಜನರ ಮೇಲೆ ಪ್ರತ್ಯೇಕ ಪ್ರಕರಣ ದಾಖಲು
ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ದೂರುದಾರರಿಗೆ ಪ್ರಾಣ ಬೆದರಿಕೆ ಹಾಕಿದ 10 ಜನ ಆರೋಪಿಗಳ ಮಾಹಿತಿ ಸಂಗ್ರಹಿಸಿದಲ್ಲದೇ, ಅವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲು ತೀರ್ಮಾನಿಸಿರುವುದಾಗಿ ಎಂದು ಆಯುಕ್ತ ಎನ್. ಶಶಿಕುಮಾರ ತಿಳಿಸಿದರು. ನವನಗರದ ಕಚೇರಿಯಲ್ಲಿ ಗುರುವಾರ ಎಸ್ಸಿ-ಎಸ್ಪಿದೌರ್ಜನ್ಯ, ಪೋಕೋ, ವರದಕ್ಷಿಣೆ ಕಿರುಕುಳ, ಅತ್ಯಾಚಾರ ಪ್ರಕರಣಗಳ ದೂರುದಾರರ, ನೊಂದವರ ಸಭೆ ನಡೆಸಿ, ಪ್ರಕರಣಗಳ ಪ್ರಗತಿ ಪರಿಶೀಲನೆ ನಡೆಸಲಾಗಿದೆ. 171 ಪ್ರಕರಣಗಳಿಗೆ ಸಂಬಂಧಿಸಿ ನೊಂದವರು ಬಂದು ತಮ್ಮ ಸಮಸ್ಯೆ ತೋಡಿ ಕೊಂಡಿದ್ದಾರೆ. ಪ್ರಕರಣ ಹಿಂಪಡೆಯುವಂತೆ ಪ್ರಾಣ ಬೆದರಿಕೆ ಹಾಕಿದವರ ವಿರುದ್ಧ ಹೆಚ್ಚುವರಿ ಪ್ರಕರಣ ದಾಖಲಿಸಿಕೊಂಡು, ಅವರಿಗೆ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ವಿನಂತಿಸಲಾಗುವುದು. ಯಾವುದೇ ಪ್ರಕರಣದ ದೂರುದಾರರು ಯಾವ ಭಯಕ್ಕೂ ಒಳಗಾಗದೆ, ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ