Fight for Justice: 34 ವರ್ಷ ಜೈಲಲ್ಲಿ ಇದ್ದ ಬಳಿಕ 'ನಿರಪರಾಧಿ' ಎಂದ ಕೋರ್ಟ್​! 104ರ ವೃದ್ಧನ ನೋವಿನ ಕಥೆ ಕೇಳಿ...

Published : Jun 21, 2025, 11:46 AM IST
 104 year old Lakhan Lal Declared Innocent

ಸಾರಾಂಶ

ನ್ಯಾಯದಾನ ವಿಳಂಬವಾದರೆ ಅದು ನ್ಯಾಯಕ್ಕೇ ಮಾಡುವ ಅನ್ಯಾಯ ಎನ್ನುವ ಮಾತಿದ್ದರೂ ನ್ಯಾಯಕ್ಕಾಗಿ ಕಾದುಕುಳಿತಿರುವ ಜೀವವಳು ಅದೆಷ್ಟೋ. ಅಂಥದ್ದೇ ಒಂದು ಕಣ್ಣೀರಿನ ಕಥೆ 104ವರ್ಷ ವಯಸ್ಸಿನ ಈ ವೃದ್ಧನದ್ದು! 

Justice delayed is justice denied ಅರ್ಥಾತ್​ ನ್ಯಾಯ ಕೊಡುವುದು ವಿಳಂಬವಾದರೆ ಅದು ನ್ಯಾಯಕ್ಕೇ ಮಾಡಿದ ಅನ್ಯಾಯ ಎನ್ನುವ ಮಾತು ಶತಮಾನಗಳಿಂದಲೂ ಇದೆ. ಆದರೆ ನಮ್ಮ ಇಡೀ ಕಾನೂನು ವ್ಯವಸ್ಥೆಯನ್ನು ಅಣಕಿಸುವ ರೀತಿಯಲ್ಲಿ ಎಷ್ಟೋ ಘಟನೆಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ನ್ಯಾಯಾಲಯದಲ್ಲಿನ ಭ್ರಷ್ಟ ವ್ಯವಸ್ಥೆಯ ಕುರಿತು ಇದಾಗಲೇ ಹಲವು ಬಾರಿ ಖುದ್ದು ನ್ಯಾಯಮೂರ್ತಿಗಳೇ ಮಾತನಾಡಿದ್ದಾರೆ. ಕೆಲವು ಕೋರ್ಟ್​ಗಳಲ್ಲಿ ದಿನನಿತ್ಯ ನಡೆಯುವ ಪ್ರಕ್ರಿಯೆಗಳನ್ನು ನೋಡಿದಾಗ, ವಿಐಪಿಗಳ ಪ್ರಕರಣಗಳು ಹೇಗೆ ನಡೆಯುತ್ತವೆ, ಬಡವನ ಕೇಸ್​ ಹೇಗೆ ಆಗುತ್ತದೆ ಎನ್ನುವ ಸ್ಪಷ್ಟ ಚಿತ್ರಣಗಳ ಬಗ್ಗೆಯೂ ಗಂಭೀರ ಆರೋಪಗಳಿವೆ. ಜೈಲುಗಳಲ್ಲಿ ಹೋಗಿ ನೋಡಿದರೆ ಎಷ್ಟೋ ವರ್ಷ ವಿಚಾರಣಾಧೀನ ಕೈದಿಗಳಾಗಿಯೇ ಬದುಕನ್ನು ನೂಕುತ್ತಿರುವ ಎಷ್ಟೋ ನಿರಪರಾಧಿಗಳನ್ನು ನೋಡಬಹುದು. ಅವರ ಕೇಸುಗಳು ವಿಚಾರಣೆಗೆ ಬಂದು ಅವರು ನಿರಪರಾಧಿ ಎಂದು ಸಾಬೀತಾದರೂ ಹೊರಗಡೆ ಹೋದ ಮೇಲೆ ಅವರ ಭಯಾನಕ ಬದುಕು, ಅವರನ್ನು ಸಮಾಜ ನೋಡುವ ದೃಷ್ಟಿ ಎಷ್ಟೋ ಜನರ ಬದುಕನ್ನೇ ಕಸಿದುಕೊಂಡದ್ದೂ ಇದೆ.

ನಮ್ಮ ಇಡೀ ಕಾನೂನು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ 104 ವರ್ಷ ವಯಸ್ಸಿನ ವೃದ್ಧನ ಈ ನೋವಿನ ಕಥೆ. (ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ನಿವಾಸಿ 104 ವರ್ಷ ವಯಸ್ಸಿನ ಲಖನ್ ಲಾಲ್ ಜೀವನವು ವಿಚಿತ್ರ ಸವಾಲುಗಳಿಂದ ಕೂಡಿದೆ. ಪ್ರಭು ಪಾಸಿ ಎಂಬ ಸಹ ಗ್ರಾಮಸ್ಥರ ಕೊ*ಲೆಗಾಗಿ ಅವರನ್ನು ಜೈಲಿಗೆ ಹಾಕಲಾಗಿತ್ತು. 1977ರಲ್ಲಿ ನಡೆದ ಘಟನೆ ಇದು. 1982 ರಲ್ಲಿ ಜಿಲ್ಲಾ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಸಾಬೀತು ಮಾಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇವರ ಜೊತೆ ಇನ್ನೂ ಮೂವರಿಗೂ ಇದೇ ಶಿಕ್ಷೆ ಆಗಿತ್ತು. ಇದನ್ನು ಪ್ರಶ್ನಿಸಿ ನಾಲ್ವರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಒಟ್ಟೂ 34 ವರ್ಷ ಲಖನ್​ ಜೈಲಿನಲ್ಲಿ ಕಳೆದಿದ್ದು, ಈಗ ಅವರಿಗೆ 104 ವರ್ಷ. ಈಗ ಹೈಕೋರ್ಟ್​ ನಿರಪರಾಧಿ ಎಂದು ಖುಲಾಸೆಗೊಳಿಸಿದೆ. ಇದಾಗಲೇ ಉಳಿದ ಮೂವರು ಪ್ರಾಣತ್ಯಾಗ ಮಾಡಿದ್ದಾರೆ!

ಈ ಪ್ರಕರಣದಲ್ಲಿ ಇವರ ತಪ್ಪು ಏನೂ ಇಲ್ಲ ಎಂದು ಲಖನ್​ ಲಾಲ್​ ಆತ್ಮೀಯರು, ಕುಟುಂಬಸ್ಥರು ಇಷ್ಟು ವರ್ಷ ಎಲ್ಲರ ಕಾಲು ಹಿಡಿದರು, ಮಾಡದ ಕೆಲಸವೇ ಇಲ್ಲ. ಸುಪ್ರೀಂ ಕೋರ್ಟ್​ನಿಂದ ಹಿಡಿದು ಇಲ್ಲಿಯವರೆಗೆ ಮುಖ್ಯಮಂತ್ರಿ, ಕಾನೂನು ಸಚಿವರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಬಾಗಿಲು ತಟ್ಟುವುದರಿಂದ ಹಿಡಿದು ಎಲ್ಲರ ಕೈಕಾಲುಗಳನ್ನೂ ಹಿಡಿಯಲಾಗಿತ್ತು. ಆದರೆ ಏನೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ 34 ವರ್ಷಗಳು ಅವರು ಜೈಲಿನಲ್ಲಿಯೇ ಕಳೆಯುವಂತಾಯಿತು. ಕೊನೆಗೆ ಕುಟುಂಬಸ್ಥರ ಮನವಿಗೆ ಸ್ಪಂದಿಸದ್ದು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಪೂರ್ಣಿಮಾ ಪ್ರಾಂಜಲ್ ಮತ್ತು ಕಾನೂನು ಸಲಹೆಗಾರರಾದ ಅಂಕಿತ್ ಮೌರ್ಯ.

ಅವರು ಈ ವಿಷಯವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿಗೆ ಕೊಂಡೊಯ್ದರು. ಕೊನೆಗೆ ಹೈಕೋರ್ಟ್​ನಲ್ಲಿ ಸುದೀರ್ಘ ಅವಧಿಯವರೆಗೆ ಬಾಕಿ ಇದ್ದ ಪ್ರಕರಣದ ವಿಚಾರಣೆ ನಡೆಯಿತು. ಇದೀಗ ಈ ಪ್ರಕರಣದಲ್ಲಿ ನಿರಪರಾಧಿ ಎಂದು ಲಖನ್ ಲಾಲ್ ಅವರನ್ನು ಖುಲಾಸೆಗೊಳಿಸಿರುವ ಕೋರ್ಟ್​, ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತು. ಸುದೀರ್ಘ ಅವಧಿಯವರೆಗೆ ಜೈಲಿನಲ್ಲಿ ಇದ್ದ ಲಖನ್ ಲಾಲ್ ಮನೆಗೆ ಮರಳಲು ತುಂಬಾ ಸಂತೋಷಪಟ್ಟಿದ್ದರೂ, ಕೆಲವು ಸಂಬಂಧಿಕರನ್ನು ಗುರುತಿಸಲು ಅವರಿಗೆ ಸಾಧ್ಯವಾಗಲಿಲ್ಲ.

 

"ನ್ಯಾಯಾಲಯದ ಆದೇಶವನ್ನು ಅನುಸರಿಸಿ ಮತ್ತು ಜಿಲ್ಲಾ ಜೈಲು ಸೂಪರಿಂಟೆಂಡೆಂಟ್ ಅವರ ಸಹಕಾರದೊಂದಿಗೆ, ಲಖನ್ ಅವರನ್ನು ಮಂಗಳವಾರ ಕೌಶಂಬಿ ಜಿಲ್ಲಾ ಜೈಲಿನಿಂದ ಬಿಡುಗಡೆ ಮಾಡಲಾಯಿತು" ಎಂದು ಕೌಶಂಬಿ ಡಿಎಲ್‌ಎಸ್‌ಎ ಕಾರ್ಯದರ್ಶಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಪೂರ್ಣಿಮಾ ಪ್ರಾಂಜಲ್ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ